ಇ ಟೈಮ್ಸ್ ಜೊತೆ ಮಾತನಾಡಿರುವ ನಿರ್ದೇಶಕ ಸುದೀಪ್ತೋ ಸೇನ್, ನಾನು ಕಾಶ್ಮೀರ ಫೈಲ್ಸ್ ಚಿತ್ರ ಬರುವುದಕ್ಕೂ ಮೊದಲಿನಿಂದಲೇ ದಿ ಕೇರಳ ಸ್ಟೋರಿ ಸಿನಿಮಾದ ಕೆಲಸ ಮಾಡಲು ಪ್ರಾರಂಭಿಸಿದ್ದೆ. ಇಂತಹ ಹೋಲಿಕೆ ಮಾಡುವುದು ಮೂರ್ಖತನ. ಇದನ್ನು ನೀವು ಒಪ್ಪಬಹುದು ಅಥವಾ ಒಪ್ಪದೇ ಇರಬಹುದು. ಈಗಾಗಲೇ ಕಾಶ್ಮೀರ ಫೈಲ್ಸ್ ಚಿತ್ರ ಬಿಡುಗಡೆಯ ನಂತರ ಭಾರತೀಯರ ಮನಸ್ಸನ್ನು ಅಲ್ಲಾಡಿಸಿ, ಸಿನಿಮಾದ ಶಕ್ತಿ ಪ್ರದರ್ಶಿಸಿ ಆಗಿದೆ.
ಇಲ್ಲಿ ದಿ ಕೇರಳ ಸ್ಟೋರಿ ಸಿನಿಮಾವು ವಿಭಿನ್ನ ಪ್ರಕಾರಕ್ಕೆ ಸೇರಿದೆ. ಇದು ಸಂಪೂರ್ಣವಾಗಿ ವಿಭಿನ್ನವಾದ ನಿರೂಪಣೆ ಹೊಂದಿದೆ. ಇದಕ್ಕಾಗಿ ತಾವು ಏಳು ವರ್ಷಗಳಿಂದ ಸಂಶೋಧನೆ ಮಾಡಿದ್ದಾಗಿ ವಿವರ ಹಂಚಿಕೊಂಡಿದ್ದಾರೆ. ಚಿತ್ರ ನಿರ್ಮಾಣಕ್ಕೆ, ಏಳು ವರ್ಷಗಳು, ನೂರಾರು ಗಂಟೆಗಳ ವಿಡಿಯೋ, ಸಾಕ್ಷ್ಯ ಮತ್ತು ನೂರಾರು ಪುಟಗಳ ದಾಖಲೆಗಳು ಮತ್ತು ಮಾಹಿತಿಯನ್ನು ಪ್ರಪಂಚದಾದ್ಯಂತ ಸಂಗ್ರಹಿಸಿದ್ದಾಗಿ ತಿಳಿಸಿದರು.
ಇತ್ತ ದಿ ಕಾಶ್ಮೀರ್ ಫೈಲ್ಸ್ ಚಲನಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ದಿ ಕೇರಳ ಸ್ಟೋರಿ ತಂಡವನ್ನು ಅಭಿನಂದಿಸಿದ್ದಾರೆ. ಇಂತಹ ಧೈರ್ಯಶಾಲಿ ಪ್ರಯತ್ನಕ್ಕಾಗಿ ನಾನು ಮೊದಲು ನಿಮ್ಮನ್ನು ಅಭಿನಂದಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಅದಾ ಶರ್ಮಾ ಅಭಿನಯದ 'ದಿ ಕೇರಳ ಸ್ಟೋರಿ' ಚಿತ್ರ ಬಿಡುಗಡೆಗೂ ಮುನ್ನವೇ ವಿವಾದಗಳಲ್ಲಿ ಸಿಲುಕಿದೆ. ಆದರೆ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.