ವಿದೇಶದಲ್ಲೂ ಮೋಡಿಮಾಡಿದ್ದ ಲತಾ ಮಂಗೇಶ್ಕರ್: ಲತಾ ಮಂಗೇಶ್ಕರ್ ಅವರ ಕಂಠಸಿರಿ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿರಲಿಲ್ಲ.. ವಿದೇಶದಲ್ಲಿಯೂ ಲತಾ ಮಂಗೇಶ್ಕರ್ ಅವರು ತಮ್ಮ ಗಾಯನದಿಂದ ಸಾಕಷ್ಟು ಗಮನ ಸೆಳೆದಿದ್ದರು. ಲಂಡನ್‌ನ ಪ್ರತಿಷ್ಠಿತ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ಪ್ರದರ್ಶನ ನೀಡಿದ ಮೊದಲ ಭಾರತೀಯ ಎಂಬ ಗೌರವವನ್ನು ಅವರು ಹೊಂದಿದ್ದಾರೆ. ಫ್ರಾನ್ಸ್ ಸರ್ಕಾರವು 2007 ರಲ್ಲಿ ಅವರಿಗೆ ಅಧಿಕಾರಿ ಆಫ್ ದಿ ಲೀಜನ್ ಆಫ್ ಆನರ್ ನೀಡಿ ಗೌರವಿಸಿದೆ.
2019ರಲ್ಲಿ ಕೊನೆಯ ಹಾಡು: ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಸಂಗೀತ ಸಾಮ್ರಾಜ್ಯದ ಸ್ವರ ಸಾಮ್ರಾಜ್ಞಿಯಾಗಿ ಗುರುತಿಸಿಕೊಂಡಿದ್ದ ಲತಾ ಮಂಗೇಶ್ಕರ್ ಅವರು 2019ರಲ್ಲಿ ತಮ್ಮ ಕೊನೆಯ ಹಾಡನ್ನು ಹಾಡಿದ್ದಾರೆ. ಭಾರತೀಯ ಸೇನೆ ಮತ್ತು ರಾಷ್ಟ್ರಕ್ಕೆ ಗೌರವ ಸೂಚಿಸುವ ‘ಸೌಗಂಧ್ ಮುಜೆ ಈಸ್ ಮಿಟ್ಟಿ ಕಿ’ ಹಾಡನ್ನ ಮಯೂರೇಶ್ ಪೈ ಸಂಗೀತ ಸಂಯೋಜನೆ ಮಾಡಿದ್ದರು. ಈ ಹಾಡಿಗೆ ಲತಾ ಮಂಗೇಶ್ಕರ್ ಅವರು ಕೊನೆಯದಾಗಿ ತಮ್ಮ ಧ್ವನಿ ನೀಡಿದ್ದರು.