ಪೂಜಾ ಹೆಗ್ಡೆ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ತೆಲುಗು, ತಮಿಳು ಹಾಗೂ ಹಿಂದಿ ಇಂಡಸ್ಟ್ರಿಯಲ್ಲಿ ತನ್ನದೇ ಆದ ವಿಶೇಷ ಚಾಪು ಹೊಂದಿರುವ ಗಳಿಸಿರುವ ಪೂಜಾ ಹೆಗ್ಡೆ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದೆ. ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಏಳು ವರ್ಷಗಳಲ್ಲೇ ಪೂಜಾ ಹೆಗ್ಡೆ ಪ್ಯಾನ್-ಇಂಡಿಯನ್ ಇಮೇಜ್ ಹೊಂದಿದ್ದಾರೆ ಮತ್ತು ಎಲ್ಲಾ ಭಾಷೆಗಳಲ್ಲಿಯೂ ತಮ್ಮ ನಟನೆಯ ಸಾಮರ್ಥ್ಯವನ್ನು ತೋರಿಸಿದ್ದಾರೆ. ಒಂದು ಕಾಲದಲ್ಲಿ ದೊಡ್ಡವರು, ಚಿಕ್ಕವರು ಎಂಬ ಭೇದವಿಲ್ಲದೆ ಎಲ್ಲರ ಸಿನಿಮಾಗಳಲ್ಲಿ ನಟಿಸುತ್ತಿದ್ದ ಪೂಜಾ ಹೆಗ್ಡೆ ಅವರು ಇದೀಗ ಅನೇಕ ನಾಯಕರ ಸಿನಿಮಾಗಳನ್ನು ತಿರಸ್ಕರಿಸಿದ್ದಾರೆ. ಅದರಲ್ಲಿಯೂ ಪವನ್ ಕಲ್ಯಾಣ್ ರಂತಹ ಸೂಪರ್ ಸ್ಟಾರ್ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರೆ.
ವಕೀಲ್ ಸಾಬ್: ಯಾವುದೇ ನಟಿ ಪವನ್ ಕಲ್ಯಾಣ್ ಜೊತೆಗೆ ನಟಿಸಲು ಅವಕಾಶ ಸಿಕ್ಕರೆ ಸಾಕೆನ್ನುತ್ತಾರೆ. ಆದರೆ ಪೂಜಾ ಹೆಗಡೆ ಅವರು ಈ ಅವಕಾಶ ನಿರಾಕರಿಸಿದ್ದರು. ಪವನ್ ಕಲ್ಯಾಣ್ ಜೊತೆಗೆ ನಟಿಸುವ ಅವಕಾಶವನ್ನು ಪೂಜಾ ಹೆಗ್ಡೆ ಅವರು ಒಂದಲ್ಲ ಎರಡು ಬಾರಿ ಮಿಸ್ ಮಾಡಿಕೊಂಡಿದ್ದಾರೆ. ಶ್ರೀರಾಮ್ ವೇಣು ನಿರ್ದೇಶನದ ವಕೀಲ್ ಸಾಬ್ ಚಿತ್ರದಲ್ಲಿ ಶ್ರುತಿ ಹಾಸನ್ ಪಾತ್ರಕ್ಕೆ ಮೊದಲು ಪೂಜಾ ಹೆಗ್ಡೆ ಅವರನ್ನು ಪರಿಗಣಿಸಲಾಗಿತ್ತು. ಆದರೆ ತುಂಬಾ ಚಿಕ್ಕ ಪಾತ್ರವಾದ್ದರಿಂದ ಡೇಟ್ಸ್ ಅಡ್ಜೆಸ್ಟ್ ಮಾಡಲು ಸಾಧ್ಯವಾಗದ ಕಾರಣ ಪೂಜಾ ಹೆಗ್ಡೆ ವಕೀಲ್ ಸಾಬ್ ಸಿನಿಮಾವನ್ನು ನಿರಾಕರಿಸಿದರು. ಈ ಸಿನಿಮಾ ಹಿಂದಿಯ ಸೂಪರ್ ಹಿಟ್ ಚಿತ್ರ ಪಿಂಕ್ ನ ರಿಮೇಕ್ ಆಗಿತ್ತು. ಇನ್ನೂ ಈ ಚಿತ್ರದಲ್ಲಿ ತೆಲುಗಿನಲ್ಲಿ ನಿವೇದಾ ಥಾಮಸ್, ಅಂಜಲಿ ಮತ್ತು ಅನನ್ಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಹರಿಹರ ವೀರಮಲ್ಲು: ಪವನ್ ಕಲ್ಯಾಣ್ ಜೊತೆಗೆ ನಟಿಸುವ ಅವಕಾಶ ಸಿಕ್ಕರೂ ಪೂಜಾ ಹೆಗಡೆ ಕೈಬಿಟ್ಟ ಎರಡನೇ ಚಿತ್ರ ಹರಿಹರ ವೀರಮಲ್ಲು. ಕ್ರಿಶ್ ನಿರ್ದೇಶನದ ಈ ಹೈ ಬಜೆಟ್ ಐತಿಹಾಸಿಕ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿತ್ತು. 16ನೇ ಶತಮಾನದ ಕೊಹಿನೂರ್ ವಜ್ರವನ್ನು ಆಧರಿಸಿ ಹರಿಹರ ವೀರಮಲ್ಲು ಸಿನಿಮಾವನ್ನು ಕ್ರಿಶ್ ಮಾಡುತ್ತಿದ್ದಾರೆ. ಸುಮಾರು 100 ಕೋಟಿ ಬಜೆಟ್ನಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಪೂಜಾ ಹೆಗ್ಡೆಯನ್ನು ನಿರ್ಮಾಪಕರು ಸಂಪರ್ಕಿಸಿದರು, ಆದರೆ ಅವರು ಡೇಟ್ಸ್ ಕೊರತೆಯಿಂದ ಈ ಚಿತ್ರವನ್ನು ಸಹ ನಿರಾಕರಿಸಿದರು. ಇದೀಗ ಪೂಜಾ ಪಾತ್ರದಲ್ಲಿ ನಿಧಿ ಅಗರ್ವಾಲ್ ನಟಿಸುತ್ತಿದ್ದಾರೆ.
ಮೇಷ್ಟ್ರು : ಮೇರ್ಲಾಪಾಕ ಗಾಂಧಿ ನಿರ್ದೇಶನದ ಮೇಷ್ಟ್ರು ಚಿತ್ರದಲ್ಲಿ ನಿತಿನ್ ನಾಯಕನಾಗಿ ನಟಿಸಿದ್ದಾರೆ. ಇದು ಹಿಂದಿಯ ಬ್ಲಾಕ್ ಬಸ್ಟರ್ ಚಿತ್ರ ಅಂದಾಧುನ್ ನ ರಿಮೇಕ್ ಆಗಿದ್ದು, ಇತ್ತೀಚೆಗೆ ಹಾಟ್ ಸ್ಟಾರ್ ಡಿಸ್ನಿಯಲ್ಲಿ ಬಿಡುಗಡೆಯಾದ ಈ ಚಿತ್ರ ಉತ್ತಮ ಚಪ್ಪಾಳೆ ಗಿಟ್ಟಿಸಿಕೊಂಡಿದೆ. ತಮನ್ನಾ ಮತ್ತು ನಭಾ ನಟೇಶ್ ಈ ಸಿನಿಮಾದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಆದರೆ ಚಿತ್ರ ನಿರ್ಮಾಪಕರು ನಭಾ ಪಾತ್ರಕ್ಕೆ ಮೊದಲು ಯೋಚಿಸಿದ್ದು ಪೂಜಾ ಹೆಗಡೆ ಅವರನ್ನು. ಕಥೆ ಕೇಳಿದ ಪೂಜಾ ಹೆಗ್ಡೆ ರಿಮೇಕ್ ಚಿತ್ರಗಳನ್ನು ಮಾಡಲು ಬಯಸುವುದಿಲ್ಲ ಎಂದು ನಿತಿನ್ ಚಿತ್ರದ ಆಫರ್ ಬಿಟ್ಟರು.
ಅಲ್ಲುಡು ಅದುರ್ಸ್ : ಪೂಜಾ ಹೆಗ್ಡೆ ರಿಜೆಕ್ಟ್ ಲಿಸ್ಟ್ ನಲ್ಲಿ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಸಿನಿಮಾ ಕೂಡ ಇದೆ. ಕಳೆದ ವರ್ಷದ ಅಲ್ಲುಡು ಅದುರ್ಸ್ ಚಿತ್ರವನ್ನು ಸಂತೋಷ್ ಶ್ರೀನಿವಾಸ್ ನಿರ್ದೇಶಿಸಿದ್ದರು. ಸಂಕ್ರಾಂತಿಯಂದು ಬಂದ ಈ ಸಿನಿಮಾ ಭಾರೀ ನಿರಾಸೆ ಮೂಡಿಸಿತು. ಇದರಲ್ಲಿ ನಾಯಕಿಯಾಗಿ ನಭಾ ನಟೇಶ್ ನಟಿಸಿದ್ದರು. ಈ ಚಿತ್ರದಲ್ಲಿ ಮೊದಲು ನಾಯಕಿಯಾಗಿ ಪೂಜಾ ಹೆಗ್ಡೆ ಅವರನ್ನು ಆಯ್ಕೆ ಮಾಡಲಾಗಿತ್ತು. ಈ ಹಿಂದೆ ಚಿತ್ರದಲ್ಲಿ ನಟಿಸಲು ಪೂಜಾ ಹೆಗ್ಡೆ ಖಂಡಿತ ಒಪ್ಪುತ್ತಾರೆ ಎಂದು ನಿರ್ಮಾಪಕರು ಭಾವಿಸಿದ್ದರು. ಆದರೆ ಡೇಟ್ಸ್ ಅಡ್ಜೆಸ್ಟ್ ಆಗುತ್ತಿಲ್ಲ ಎಂದು ಪೂಜಾ ಹೆಗ್ಡೆ ಅಲ್ಲುಡು ಅದುರ್ಸ್ ಬಿಟ್ಟಿದ್ದರು.
ಛತ್ರಪತಿ ಹಿಂದಿ ರಿಮೇಕ್ : ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಜೊತೆ ನಟಿಸುತ್ತಿರುವ ಪೂಜಾ ಹೆಗ್ಡೆ ಅವರ ಎರಡನೇ ಚಿತ್ರ ಛತ್ರಪತಿ ರಿಮೇಕ್. 15 ವರ್ಷಗಳ ಹಿಂದೆ ತೆಲುಗು ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದ್ದ ಈ ಸಿನಿಮಾವನ್ನು ಈಗ ಮಾಸ್ ಡೈರೆಕ್ಟರ್ ವಿನಾಯಕ್ ಹಿಂದಿಗೆ ರಿಮೇಕ್ ಮಾಡುತ್ತಿದ್ದಾರೆ. ಬೆಲ್ಲಂಕೊಂಡ ಶ್ರೀನಿವಾಸ್ ಈ ಚಿತ್ರದ ಮೂಲಕ ಬಾಲಿವುಡ್ಗೆ ಪರಿಚಯವಾಗುತ್ತಿದ್ದಾರೆ. ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸಲು ಮೊದಲು ಪ್ರಯತ್ನಿಸಿದರು. ಆದರೆ ಬ್ಯುಸಿಯಾಗಿದ್ದ ಹಿನ್ನೆಲೆ ಪೂಜಾ ಹೆಗ್ಡೆಗಾಗಿ ಸಾಕಷ್ಟು ಪ್ರಯತ್ನಿಸಿದರು. 5 ಕೋಟಿಯವರೆಗೂ ಸಂಭಾವನೆಯನ್ನೂ ನೀಡಲಾಗುತ್ತದೆ ಎಂದರೂ, ರೀಮೇಕ್ ಚಿತ್ರಗಳನ್ನು ಮಾಡಲು ಹೆಚ್ಚು ಇಷ್ಟಪಡದ ಪೂಜಾ ಹೆಗಡೆ ಛತ್ರಪತಿ ರಿಮೇಕ್ಗೆ ನೋ ಎಂದಿದ್ದಾರೆ.
ಹೀರೋ : ಬಾಲಿವುಡ್ನಲ್ಲಿ ಪೂಜಾ ಹೆಗ್ಡೆ ಅವರ ಮೊದಲ ಚಿತ್ರ ಮೊಹಂಜದಾರೋ. ಹೃತಿಕ್ ರೋಷನ್ ಅಭಿನಯದ ಈ ಚಿತ್ರವನ್ನು ಹಿರಿಯ ನಿರ್ದೇಶಕ ಅಶುತೋಷ್ ಗೋವಾರಿಕರ್ ನಿರ್ದೇಶಿಸಿದ್ದರು. ಭಾರೀ ನಿರೀಕ್ಷೆಯೊಂದಿಗೆ ಬಂದ ಈ ಐತಿಹಾಸಿಕ ಸಿನಿಮಾ ಅತ್ಯಂತ ನಿರಾಸೆ ಮೂಡಿಸಿತ್ತು. ಆದರೆ ಇದಕ್ಕೂ ಮುನ್ನ ಸೂರಜ್ ಪಾಂಚೋಲಿ ನಾಯಕನಾಗಿ ನಟಿಸಿದ್ದ ಸಿನಿಮಾದಲ್ಲಿ ಪೂಜಾ ಹೆಗ್ಡೆಯನ್ನೇ ನಾಯಕಿ ಎಂದು ಭಾವಿಸಲಾಗಿತ್ತು. ಆದರೆ ಹೊಸ ನಾಯಕರ ಜೊತೆ ನಟಿಸುವುದಿಲ್ಲ ಎಂದು ಪೂಜಾ ಈ ಚಿತ್ರಕ್ಕೆ ನೋ ಎಂದಿದ್ದರು. ಆ ಸಿನಿಮಾದಲ್ಲಿ ಅಭಿನಯಿಸಿದ್ದರೆ ಇದು ಪೂಜಾ ಹೆಗ್ಡೆ ಅವರ ಮೊದಲ ಬಾಲಿವುಡ್ನ ಸಿನಿಮಾ ಆಗುತ್ತಿತ್ತು. ಇನ್ನೂ ಮೊಹಂಜಾದಾರೋ ಎರಡನೇ ಚಿತ್ರವಾಗುತ್ತಿತ್ತು.
ಶಾಕುಂತಲಂ: ಟಾಲಿವುಡ್ ಹಿರಿಯ ನಿರ್ದೇಶಕ ಗುಣಶೇಖರ್ ಸದ್ಯ ಶಾಕುಂತಲಂ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಮುಗಿದಿದೆ. ಇದರಲ್ಲಿ ಮಲಯಾಳಂ ಹೀರೋ ದೇವ್ ಮೋಹನ್ ಪ್ರಮುಖ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಗುಣಶೇಖರ್ ಈ ಸಿನಿಮಾವನ್ನು ಎಲ್ಲಾ ಭಾಷೆಗಳಲ್ಲಿ ಸುಮಾರು 50 ಕೋಟಿ ಬಜೆಟ್ನಲ್ಲಿ ನಿರ್ಮಿಸುತ್ತಿದ್ದಾರೆ. ಸಮಂತಾ ಬದಲು ಗುಣಶೇಖರ್ ನಾಯಕಿಯಾಗಿ ಪೂಜಾ ಹೆಗ್ಡೆಯನ್ನುಆಯ್ಕೆ ಮಾಡಲು ಪ್ಲ್ಯಾನ್ ಮಾಡಿದ್ದರು. ಆದರೆ ಮೊಹಂಜಾದಾರೋ ಚಿತ್ರದ ಕಹಿ ಅನುಭವವನ್ನು ನೆನಪಿಸಿಕೊಂಡ ಪೂಜಾ ಹೆಗಡೆ, ಐತಿಹಾಸಿಕ ಚಿತ್ರಗಳಲ್ಲಿ ನಟಿಸಲು ಅಷ್ಟಾಗಿ ಆಸಕ್ತಿ ತೋರಲಿಲ್ಲ. ಈ ಕಾರಣಕ್ಕಾಗಿಯೇ ಶಾಕುಂತಲಂ ಚಿತ್ರದಿಂದ ಹಿಂದೆ ಸರಿದರು.
ವಿಜಯ್ ಚಿತ್ರ: ಪೂಜಾ ಹೆಗ್ಡೆ ತಮ್ಮ ವೃತ್ತಿ ಜೀವನದ ಆರಂಭದಿಂದಲೂ ತಮಿಳು ಸಿನಿಮಾಗಳತ್ತ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ. ವಾಸ್ತವವಾಗಿ, ಪೂಜಾ ಹೆಗ್ಡೆ ಅವರ ವೃತ್ತಿಜೀವನ ತಮಿಳು ಚಿತ್ರರಂಗದಿಂದ ಪ್ರಾರಂಭವಾಯಿತು. ಜೀವಾ ನಾಯಕರಾಗಿದ್ದ ಮೂಗಮುಡಿ ಚಿತ್ರದಲ್ಲಿ ಪೂಜಾ ನಾಯಕಿಯಾಗಿ ನಟಿಸಿದ್ದರು. ಆದರೆ ಆ ನಂತರ ಅವರು ಮತ್ತೆ ತಮಿಳು ಇಂಡಸ್ಟ್ರಿಯ ಕಡೆಗೆ ಹೋಗಲಿಲ್ಲ. ದೊಡ್ಡ ಹೀರೋಗಳ ಜೊತೆಗೆ ನಟಿಸಲು ಅವಕಾಶ ಸಿಕ್ಕರೂ ಅಷ್ಟಾಗಿ ಗಮನ ಹರಿಸಲಿಲ್ಲ. ವಿಜಯ್, ಸಿಂಬು ಅವರಂತಹ ಸ್ಟಾರ್ ಹೀರೋಗಳ ಜೊತೆ ನಟಿಸಲು ಪೂಜಾ ಹೆಗ್ಡೆ ನೋ ಹೇಳಿದ್ದರು. ಆದರೆ ಆಗ ಬೇಡ ಅಂದವರು, ಈಗ ವಿಜಯ್ ಜೊತೆ ಬೀಸ್ಟ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು ಮತ್ತು ಈ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳಿದ್ದರು.
ಗುಡ್ ಬೈ: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಪ್ರಸ್ತುತ ವಿಶಿಷ್ಟ ಪಾತ್ರಗಳೊಂದಿಗೆ ಸರಣಿ ಚಿತ್ರಗಳನ್ನು ಮಾಡುತ್ತಿದ್ದಾರೆ. ರೊಟೀನ್ ಕಥೆಗಳ ಹೊರತಾಗಿ ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಂಡು ಅದ್ಭುತವಾಗಿ ನಟಿಸುತ್ತಿದ್ದಾರೆ. ಅದರಲ್ಲಿ ಗುಡ್ ಬೈ ಸಿನಿಮಾ ಕೂಡ ಒಂದು. ಕ್ವೀನ್ ಚಿತ್ರದ ನಿರ್ದೇಶಕ ವಿಕಾಸ್ ಭೇಲ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಈ ಸಿನಿಮಾಗೆ ಮೊದಲು ಪೂಜಾ ಹೆಗಡೆ ನಾಯಕಿಯಾಗಿ ಫೈನಲ್ ಆಗಿದ್ದರು. ಆದರೆ ಸಿನಿಮಾ ಮಾಡಲು ಒಪ್ಪಿಕೊಂಡಿದ್ದರು. ಆದರೆ ಅದೇ ಸಮಯಕ್ಕೆ ಮತ್ತೊಂದು ಸಿನಿಮಾ ಬರುತ್ತಿದ್ದಂತೆ ಪೂಜಾ ಹೆಗಡೆ ಅಮಿತಾಬ್ ಸಿನಿಮಾಗೆ ಗುಡ್ ಬೈ ಹೇಳಿದರು. ನಂತರ ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದರು.
ಅಟ್ಯಾಕ್ : ಬಾಲಿವುಡ್ ಆ್ಯಕ್ಷನ್ ಹೀರೋ ಜಾನ್ ಅಬ್ರಹಾಂ ಅಟ್ಯಾಕ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ರಾಕುಲ್ ಪ್ರೀತ್ ಸಿಂಗ್ ನಟಿಸಿದ್ದರು. ಲಕ್ಷ್ಯ ರಾಜ್ ಆನಂದ್ ನಿರ್ದೇಶನದ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಕಾಣಲಿಲ್ಲ. ಆದರೆ ರಾಕುಲ್ ಪ್ರೀತ್ ಸಿಂಗ್ಗೂ ಮುನ್ನ ಈ ಸಿನಿಮಾಕ್ಕೆ ಪೂಜಾ ಹೆಗ್ಡೆ ನಾಯಕಿಯಾಗಿ ಫೈನಲ್ ಆಗಿದ್ದರು. ಆದರೆ ಜಾನ್ ಅಬ್ರಹಾಂ ರಣವೀರ್ ಸಿಂಗ್ ಅವರ ಚಲನಚಿತ್ರ ಸರ್ಕಸ್ನಲ್ಲಿ ಅವಕಾಶ ಪಡೆದ ನಂತರ ಈ ಸಿನಿಮಾವನ್ನು ತೊರೆದರು. ಪೂಜಾ ಹೆಗ್ಡೆ ತಮ್ಮ ಕೆರಿಯರ್ನಲ್ಲಿ 10ಕ್ಕೂ ಹೆಚ್ಚು ಚಿತ್ರಗಳಿಗೆ ನೋ ಹೇಳಿದ್ದಾರೆ. ಅವುಗಳಲ್ಲಿ ಬಹುತೇಕ ಚಿತ್ರಗಳು ಇನ್ನೂ ಬಿಡುಗಡೆಯಾಗಿಲ್ಲ.
ಸೀತಾ ರಾಮ್: ದುಲ್ಕರ್ ಸಲ್ಮಾನ್ ನಾಯಕ ಮತ್ತು ಮೃಣಾಲ್ ಠಾಕೂರ್ ನಾಯಕಿಯಾಗಿ ಹನು ರಾಘವಪುಡಿ ನಿರ್ದೇಶನದ ಬ್ಲಾಕ್ ಬಾಸ್ಟರ್ ಚಿತ್ರ ಸೀತಾ ರಾಮ್. ಈ ಚಿತ್ರಕ್ಕೆ ಆರಂಭದಲ್ಲಿ ಪೂಜಾ ಹೆಗಡೆ ಅವರನ್ನುಆಯ್ಕೆ ಮಾಡಲಾಗಿತ್ತು. ಇದಲ್ಲದೆ, ಕೆಲವು ದಿನಗಳವರೆಗೆ ಶೂಟಿಂಗ್ ಕೂಡ ಮಾಡಲಾಗಿತ್ತು. ಆದರೆ ಆ ಸಮಯದಲ್ಲಿ ಕೊರೊನಾ ಲಾಕ್ಡೌನ್ನಿಂದಾಗಿ, ಪೂಜಾ ಹೆಗ್ಡೆ ಡೇಟ್ಸ್ಗಳನ್ನು ಹೊಂದಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಅವರ ಜಾಗಕ್ಕೆ ಮೃಣಾಲ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಯಿತು.