ನಾನು ಹಲವಾರು ವರ್ಷಗಳಿಂದ ಕಿರುತೆರೆ ಮತ್ತು ಹಿರಿತೆರೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಪಿ. ಶೇಷಾದ್ರಿ, ಟಿ.ಎನ್. ಸೀತಾರಾಂ ಅವರ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಸಂಚಿಕೆ ನಿರ್ದೇಶಕ ಮತ್ತು ನಿರ್ದೇಶಕರಾಗಿ ಕೆಲಸ ಮಾಡಿದ್ದೇನೆ. ಈ ಸಂದರ್ಭದಲ್ಲಿ ವರ್ಧನ್ ಮತ್ತು ದೀಪಕ್ ನಾಯ್ಡು ಅವರ ಪರಿಚಯವಾಯಿತು. ಮೂರು ಜನ ಸೇರಿ 10 ವರ್ಷಗಳ ಹಿಂದೆ ಒಂದು ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿ, ಹಲವು ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದೇವೆ. ಒಂದು ಚಿತ್ರ ನಿರ್ಮಾಣ ಮಾಡುವ ಯೋಚನೆ ಇತ್ತು ಅಂತ ನಿರ್ದೇಶಕ ವಿನೋದ್ ದೋಂಡಾಳೆ ಹೇಳಿದರು.
ಟಿ.ಕೆ. ದಯಾನಂದ್ ಅವರ ಹತ್ತಿರ ಒಂದೊಳ್ಳೆಯ ಕಥೆ ಇದೆ ಎಂದು ಗೊತ್ತಾಯಿತು. ಕಥೆ ಕೇಳಿದಾಗ ಬಹಳ ಇಷ್ಟವಾಯಿತು. ಇದೇ ನಮ್ಮ ಸಂಸ್ಥೆಯ ಮೊದಲ ಚಿತ್ರವಾಗಬೇಕು ಎಂದು ತೀರ್ಮಾನಿಸಿ ಚಿತ್ರ ಮಾಡುತ್ತಿದ್ದೇವೆ. ಸತೀಶ್ ನೀನಾಸಂ ಸಹ ಕೈ ಜೋಡಿಸಿದ್ದಾರೆ. ವರ್ತಕರು ಮತ್ತು ಕಾರ್ಮಿಕರ ನಡುವೆ ನಡೆಯುವ ಯುದ್ಧದ ಕುರಿತು ಈ ಚಿತ್ರಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ನಿರ್ದೇಶಕ ವಿನೋದ್ ದೋಂಡಾಳೆ ಮಾಹಿತಿ ನೀಡಿದರು.
ಈ ಕಥೆ ಹುಡುಕಿದ್ದು ನಾನೇ. ಸ್ನೇಹಿತರ ಮೂಲಕ ದಯಾನಂದ್ ಅವರ ಬಳಿ ಒಳ್ಳೆಯ ಕಥೆ ಇದೆ ಎಂದು ಕೇಳಿದೆ. ತರಿಸಿ ಓದಿದೆ. ತಕ್ಷಣ ಈ ಚಿತ್ರವನ್ನು ಮಾಡಬೇಕು ಎಂದನಿಸಿತು. ಇದೊಂದು ದೊಡ್ಡ ಕ್ಯಾನ್ವಾಸ್ನ ಚಿತ್ರ. ಒಂದು ಐತಿಹಾಸಿಕ ಯುದ್ಧವಿದೆ. 10 ನಿಮಿಷಗಳ ಕಾಲ ಸಾವಿರ ಜನ ಭಾಗವಹಿಸುವ ಯುದ್ಧ. ಅದನ್ನು ವಿನೋದ್ ಸಮರ್ಥವಾಗಿ ತೆರೆಯ ಮೇಲೆ ತರುತ್ತಾರೆ ಎಂಬ ನಂಬಿಕೆ ಇದೆ ಅಂತ ಸತೀಶ್ ಹೇಳಿದ್ದಾರೆ.