ಮಿಸ್ ವರ್ಲ್ಡ್ ಪಟ್ಟ ಗೆದ್ದು ನಂತರ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿ ಇಂದಿಗೂ ಟಾಪ್ ಹಿರೋಯಿನ್‌ಗಳ ಪಟ್ಟಿಯಲ್ಲಿದ್ದಾರೆ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ. ದೊಡ್ಡ ದೊಡ್ಡ ಹಿಟ್ ಸಿನಿಮಾ, ಜಾಹೀರಾತು ಅದು ಇದು ಅಂತಾ ಬ್ಯುಸಿ ಇದ್ದ ಚೆಲುವೆ ಕೊನೆಗೂ 2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಪ್ರಿಯಾಂಕ ಚೋಪ್ರಾ 2018 ಡಿಸೆಂಬರ್‌ನಲ್ಲಿ ತಮ್ಮ ಗೆಳೆಯ, ವಿದೇಶಿ ಗಾಯಕ ನಿಕ್ ಜೋನಸ್ ಕೈ ಹಿಡಿದರು. ಈ ದಂಪತಿಗೆ ಒಂದು ಮುದ್ದಾದ ಹೆಣ್ಣು ಮಗು ಕೂಡ ಇದೆ.
ಈ ಬಗ್ಗೆ ಟ್ರೋಲ್, ಟೀಕೆ ಎಲ್ಲಾ ವ್ಯಕ್ತವಾದರೂ ಈ ಇಬ್ಬರೂ ದಂಪತಿ ಯಾವುದಕ್ಕೂ ತಲೆ ಕಡೆಸಿಕೊಳ್ಳದೇ ಟ್ರೋಲ್‌ಗಳಿಗೆ ಪ್ರೀತಿ, ಅನ್ಯೂನ್ಯತೆಯ ಮೂಲಕವೇ ಉತ್ತರ ನೀಡುತ್ತಿದ್ದಾರೆ. ಇತ್ತೀಚಿನ ದಿ ಜೆನ್ನಿಫರ್ ಹಡ್ಸನ್ ಶೋನಲ್ಲಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಕಾಣಿಸಿಕೊಂಡರು. ಇಲ್ಲಿ ಪತಿ ನಿಕ್ ಜೋನಸ್ ತಮ್ಮನ್ನು ಯಾವಾಗ ನೋಡಿದರು ಎಂಬುದರ ಬಗ್ಗೆ ಒಂದು ಸ್ವಾರಸ್ಯಕರ ವಿಚಾರವನ್ನು ಹಂಚಿಕೊಂಡಿದ್ದಾರೆ.
ಪ್ರಿಯಾಂಕಾ 2000ನೇ ಇಸವಿಯಲ್ಲಿ ಅವರು ಮಿಸ್ ವರ್ಲ್ಡ್ ಕಿರೀಟ ಮುಡಿಗೇರಿಸಿಕೊಂಡಿದ್ದರು. ಈ ಕ್ಷಣವನ್ನು ನೆನಪಿಸಿಕೊಂಡ ಪ್ರಿಯಾಂಕಾ ಈ ಕಾರ್ಯಕ್ರಮ ಲಂಡನ್‌ನಲ್ಲಿತ್ತು. ನನಗೆ ಆಗಿನ್ನೂ 17 ವರ್ಷ ತುಂಬಿತ್ತು ಎಂದು ಹೇಳಿದರು. ನನ್ನ ಅತ್ತೆ ಕೂಡ ಈ ಕ್ಷಣದ ನೆನಪುಗಳನ್ನು ನನ್ನ ಬಳಿ ಹಂಚಿಕೊಂಡಿದ್ದಾರೆ. ನಾನು ಆ ಪಟ್ಟ ಗೆದ್ದಾಗ ನನ್ನ ಅತ್ತೆಯವರು ಲಂಡನ್‌ನಲ್ಲಿದ್ದರಂತೆ, ನನಗೆ ನಿನ್ನನ್ನು ನೋಡಿದ ಆ ಸಂದರ್ಭ ಇನ್ನೂ ನೆನಪಿದೆ ಎಂದು ಹೇಳಿದರು.