ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರ ಮಾಸ್ ಎಂಟ್ರಿಯನ್ನು ಕಂಬಳದ ಜೊತೆ ಕಾಣಬಹುದು. ಕರಾವಳಿಯ ಕಂಬಳವನ್ನು ನೋಡಿಕೊಂಡೇ ಹೀರೋ ಎಂಟ್ರಿ ಎಂಜಾಯ್ ಮಾಡಿದ್ದಾರೆ ಪ್ರೇಕ್ಷಕರು. ರಿಷಬ ಅಬ್ಬರಿಸಿ ಕೋಣಗಳನ್ನು ಓಡಿಸಿಕೊಂಡು ಕೆಸರು ಚಿಮ್ಮಿಸುತ್ತಾ ಬರುವ ದೃಶ್ಯ ಪ್ರೇಕ್ಷಕರ ಮೈನವಿರೇಳಿಸುತ್ತದೆ. ಇದರಲ್ಲಿ ರಿಷಬ್ ಅಪ್ಪಟ ಕಂಬಳ ಕೋಣ ಓಡಿಸುವ ವ್ಯಕ್ತಿಯಂತೆಯೇ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ಈ ಕಂಬಳ ನಡೆಸುವುದು ರಿಷಬ್ ಅವರ ಫ್ಯಾಮಿಲಿಯವರೇ. ಆ ಗದ್ದೆಯೂ ಅವರದೇ. ಆದರೆ ರಿಷಬ್ಗೆ ಕಂಬಳ ನೋಡಿ ಗೊತ್ತು, ಕೋಣ ಓಡಿಸಿ ಗೊತ್ತಿಲ್ಲ. ಅವು ಸಾಮಾನ್ಯ ಕೋಣಗಳಲ್ಲ. ಚಾಂಪಿಯನ್ ಕೋಣಗಳು. ತಂದು ನಿಲ್ಲಿಸಿದ್ರೆ ಸಾಕು, ಅವುಗಳೇ ಓಡುತ್ತವೆ, ನಾವು ಬಿದ್ದಿರುತ್ತೇವೆ ಎನ್ನುತ್ತಾರೆ ರಿಷಬ್. ಮೊದಲ ಪ್ರಯತ್ನದಲ್ಲಿಯೇ ರಿಷಬ್ ಕೋಣ ಓಡಿಸುವಾಗ ಬಿದ್ದಿದ್ದರು ಎನ್ನುವುದನ್ನು ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಆದರೂ ಈ ದೃಶ್ಯ ಸಖತ್ತಾಗಿ ಗಮನ ಸೆಳೆದಿದೆ. ಆರಂಭದಲ್ಲಿಯೇ ಗದ್ದೆಯ ದೃಶ್ಯ, ಹೀರೋ ಮಾಸ್ ಎಂಟ್ರಿ, ಕೋಣಗಳ ಓಟ ಪ್ರೇಕ್ಷರಲ್ಲಿ ಕುತೂಹಲ ಮೂಡಿಸುತ್ತದೆ. ಕಂಬಳ ಓಡಿಸುವ ಸೀನ್ ನೈಜ್ಯವಾಗಿದ್ದು ಸಿನಿಮಾ ಆರಂಭದಲ್ಲಿಯೇ ಇಂಥದ್ದೊಂದು ದೃಶ್ಯ ಪ್ರೇಕ್ಷಕರಿಗೆ ಥ್ರಿಲ್ಲಿಂಗ್ ಅನುಭವ ಕೊಡುತ್ತದೆ.