ಹಿಂದಿ ಕಿರುತೆರೆ ಧಾರಾವಾಹಿಗಳನ್ನು ನೋಡುವವರಿಗೆ ವಿವಿಯನ್ ಡಿಸೇನಾ ಪರಿಚಿತ ನಟ. ಇವರು ಇಂದಿಗೂ ಸಾಕಷ್ಟು ಅಭಿಮಾನಿಗಳ ಫೆವರೇಟ್ ಮಧುಬಾಲಾ, ಏಕ್ ಇಷ್ಕ್ ಏಕ್ ಜನೂನ್ ಹಾಗೂ ಶಕ್ತಿ- ಅಸ್ತಿಸ್ವ ಕಿ ಎಹಸಾಸ್ ಕಿ ಯಂತಹ ಜನಪ್ರಿಯ ಧಾರಾವಾಹಿಗಳ ಮೂಲಕ ಪ್ರೇಕ್ಷಕರ ಮನಗೆದ್ದವರು. ಇದೀಗ ಹಿಂದಿಯ ಈ ಜನಪ್ರಿಯ ಕಿರುತೆರೆ ನಟ ತಾವು 2019 ರಲ್ಲಿ ಇಸ್ಲಾಂಗೆ ಮತಾಂತರಗೊಂಡಿದ್ದಾಗಿ ಹೇಳಿದ್ದು, ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
“ನನ್ನ ಜೀವನದಲ್ಲಿ ಏನೂ ಬದಲಾವಣೆ ಆಗಿಲ್ಲ. ನಾನು ಕ್ರಿಶ್ಚಿಯನ್ ಆಗಿ ಹುಟ್ಟಿದ್ದೇನೆ ಮತ್ತು ನಾನು ಈಗ ಇಸ್ಲಾಂ ಧರ್ಮವನ್ನು ಅನುಸರಿಸುತ್ತೇನೆ. ನಾನು 2019 ರ ಪವಿತ್ರ ತಿಂಗಳ ರಂಜಾನ್ ಸಮಯದಲ್ಲಿ ಇಸ್ಲಾಂ ಧರ್ಮವನ್ನು ಅನುಸರಿಸಲು ಪ್ರಾರಂಭಿಸಿದೆ. ದಿನಕ್ಕೆ ಐದು ಬಾರಿ ಪ್ರಾರ್ಥನೆ ಮಾಡುವುದರಲ್ಲಿ ನಾನು ಸಾಕಷ್ಟು ಶಾಂತಿ ಮತ್ತು ಸಮಾಧಾನವನ್ನು ಕಂಡುಕೊಳ್ಳುತ್ತೇನೆ. ಆದ್ದರಿಂದ, ನಾನು ಎಲ್ಲಾ ಊಹಾಪೋಹಗಳಿಗೆ ವಿರಾಮ ಹಾಕುತ್ತೇನೆ” ಎಂಬುದಾಗಿ ಹೇಳಿದ್ದಾರೆ.
ಈ ನಟ ಇತ್ತೀಚೆಗೆ ರಂಜಾನ್ ಆರಂಭದಲ್ಲಿ ತನ್ನ ಎಲ್ಲಾ ಅಭಿಮಾನಿಗಳಿಗೆ ಶುಭ ಹಾರೈಸಿದ್ದರು. “ಸರ್ವಶಕ್ತ, ರಂಜಾನ್‌ನ ಈ ಮೊದಲ ಶುಕ್ರವಾರದಂದು ನಿಮ್ಮ ಸಲುವಾಗಿ ಪ್ರಾಮಾಣಿಕವಾಗಿ ಉಪವಾಸ ಮಾಡುವವರಲ್ಲಿ ನಮ್ಮನ್ನು ಸೇರಿಸು. ನಾವು ಪೂರ್ಣವಾಗಿ ಸಲ್ಲಿಸುವ ಪ್ರಾರ್ಥನೆಯನ್ನು ನೀವು ಸ್ವೀಕರಿಸುವಂತಾಗಲಿ. ಅಜಾಗರೂಕತೆಯಿಂದ ನಮ್ಮನ್ನು ದೂರವಿಡಿ ಮತ್ತು ನಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸು ಎಂಬುದಾಗಿ ಬರೆದುಕೊಂಡಿದ್ದರು.
ಅಂದಹಾಗೆ ವಿವಿಯನ್ ಡಿಸೇನಾ ತಮ್ಮ ಕುಟುಂಬವನ್ನು ಹೆಚ್ಚು ಖಾಸಗಿಯಾಗಿಟ್ಟುಕೊಂಡಿದ್ದಾರೆ. ಅದೇ ಮಾಧ್ಯಮ ಸಂದರ್ಶನದಲ್ಲಿ ತಮ್ಮ ಸಂಗಾತಿ ನೌರಾನ್ ಅಲಿ ಬಗ್ಗೆ ಹಾಗೂ ತಮ್ಮ 4 ತಿಂಗಳ ಮಗುವಿನ ಬಗ್ಗೆ ಹೇಳಿಕೊಂಡಿದ್ದಾರೆ. "ಹೌದು, ನನಗೆ ಮದುವೆಯಾಗಿ ನಾಲ್ಕು ತಿಂಗಳ ಮಗಳಿದ್ದಾಳೆ. ಅದರಲ್ಲಿ ಏನು ದೊಡ್ಡ ವಿಷಯ? ಸರಿಯಾದ ಸಮಯ ಬಂದಾಗ ಈ ವಿಚಾರವನ್ನು ಅನೌನ್ಸ್ ಮಾಡುವವನಿದ್ದೆ ಎಂದು ಹೇಳಿದ್ದಾರೆ.