ತಮ್ಮ ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ ವಿಶೇಷವಾದ ಗುರುತನ್ನು ಗಳಿಸಿರುವ ನಟ ವಿಕ್ಕಿ ಕೌಶಲ್ ಇಂದು ತಮ್ಮ ವಿಶೇಷ ದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. 'ಮಸಾನ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ವಿಕ್ಕಿ, ಈ ಚಿತ್ರದಲ್ಲಿನ ಅವರ ಅಚ್ಚುಕಟ್ಟಾದ ನಟನೆಯಿಂದಾಗಿ ಅನೇಕ ಚಿತ್ರಗಳಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ನಂತರ ಅವರು 'ರಮನ್ ರಾಘವ್', 'ಲಸ್ಟ್ ಸ್ಟೋರೀಸ್', 'ರಾಝಿ', 'ಸಂಜು' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಉರಿ' ಚಿತ್ರದ ವಿಭಿನ್ನ ಪಾತ್ರದ ನಂತರ ಇಂದು ಟಾಪ್ ನಟರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ ಎಂದರೆ ತಪ್ಪಾಗಲಾರದು.
ಬಾಲಿವುಡ್‌ನಲ್ಲಿ ಹೆಸರು ಮಾಡಿದ ವಿಕ್ಕಿ ಕೌಶಲ್, ಈ ಹಂತವನ್ನು ತಲುಪಲು ಬಹಳ ಕಷ್ಟಪಟ್ಟಿದ್ದಾರೆ. ವಿಕ್ಕಿ 1988 ರಲ್ಲಿ ಮುಂಬೈನ ಚಾಲ್‌ನಲ್ಲಿ ಜನಿಸಿದರು. ವಿಕ್ಕಿಯ ತಂದೆ ಬಾಲಿವುಡ್‌ನಲ್ಲಿ ಹೆಸರಾಂತ ಸ್ಟಂಟ್‌ಮ್ಯಾನ್ ಆಗಿದ್ದವರು, ಹಲವಾರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ, ಆದರೆ ವಿಕ್ಕಿಯ ತಂದೆ ಬಾಲಿವುಡ್‌ನಲ್ಲಿ ಕೆಲಸ ಮಾಡಲು ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗಿತ್ತು. ಇನ್ನು ಅವರ ತಾಯಿ ವೀಣಾ ಕೌಶಲ್ ಗೃಹಿಣಿ.
ವಿಕ್ಕಿ ಕೌಶಲ್ ಮುಂಬೈನ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಮಾಡಿದ್ದಾರೆ. ವಿಕ್ಕಿ ಪ್ರಕಾರ, ಅವರ ತಂದೆ ಯಾವುದಾದರೂ ಕಂಪೆನಿಯಲ್ಲಿ ಉತ್ತಮ ಕೆಲಸ ಮಾಡಬೇಕೆಂದು ಬಯಸಿದ್ದರು, ಆದರೆ ವಿಕ್ಕಿ ಯಾವಾಗಲೂ ನಟನಾಗಲು ಬಯಸಿದ್ದರು. ವಿಕ್ಕಿ ನಟನೆಯನ್ನು ಎಷ್ಟು ಇಷ್ಟಪಡುತ್ತಿದ್ದರೆಂದರೆ, ಅದಕ್ಕಾಗಿ ಅನೇಕ ಉದ್ಯೋಗದ ಆಫರ್‌ಗಳನ್ನು ಸಹ ತಿರಸ್ಕರಿಸಿದ್ದರಂತೆ. ನಟನೆಯಲ್ಲಿ ತನ್ನ ವೃತ್ತಿಜೀವನವನ್ನು ಪ್ರಯತ್ನಿಸಲು, ವಿಕ್ಕಿ ಕಿಶೋರ್ ನಮಿತ್ ಕಪೂರ್ ಆಕ್ಟಿಂಗ್ ಅಕಾಡೆಮಿಯಿಂದ ನಟನೆಯನ್ನು ಕಲಿತಿದ್ದಾರೆ.
2015 ರಲ್ಲಿ ಬಿಡುಗಡೆಯಾದ 'ಮಸಾನ್' ಚಿತ್ರದಲ್ಲಿ ವಿಕ್ಕಿಗೆ ತಮ್ಮ ನಟನಾ ಕೌಶಲ್ಯವನ್ನು ತೋರಿಸಲು ಅವಕಾಶ ಸಿಕ್ಕಿತು. ಈ ಸಣ್ಣ ಬಜೆಟ್ ಚಿತ್ರದ ಮೂಲಕ ಮುಖ್ಯ ಪಾತ್ರದಲ್ಲಿ ಪಾದಾರ್ಪಣೆ ಮಾಡಿದ ವಿಕ್ಕಿ, ಮೊದಲ ಬಾರಿಗೆ ಪ್ರೇಕ್ಷಕರ ಹೃದಯದಲ್ಲಿ ಛಾಪು ಮೂಡಿಸಿದರು. 2016 ರಲ್ಲಿ, ಅವರು ಮತ್ತೆ ಎರಡು ಚಿತ್ರಗಳಲ್ಲಿ ಕಾಣಿಸಿಕೊಂಡರು. ಮೊದಲ ಚಿತ್ರ 'ಜುಬಾನ್' ಮತ್ತು ಎರಡನೇ ಚಿತ್ರ 'ರಾಮನ್ ರಾಘವ್ 2.0'. ಈ ಚಿತ್ರದಲ್ಲಿ ಅವರ ಮುಂದೆ ನವಾಜುದ್ದೀನ್ ಸಿದ್ದಿಕಿಯಂತಹ ಹೆಸರಾಂತ ನಟರಿದ್ದರೂ ಸಹ ವಿಕ್ಕಿ ತನ್ನ ಪಾತ್ರದ ಮೂಲಕ ಜನರ ಮನಗೆದ್ದಿದ್ದಾರೆ.