ಆಧುನಿಕ ಕಾಲದಲ್ಲಿ ಎಷ್ಟೇ ವಿದ್ಯುತ್ ದೀಪಗಳಿದ್ದರೂ ದೀಪಗಳ ಬೆಳಕು ಮಾತ್ರ ಎಲ್ಲರನ್ನು ಚಿತ್ತಾಕರ್ಷಗೊಳಿಸುತ್ತದೆ. ಇನ್ನು ಬಣ್ಣ ಬಣ್ಣದ ಕ್ಯಾಂಡಲ್ ಗಳೆಂದರೆ ಕೇಳಬೇಕಾ?. ಅದರಲ್ಲೂ ಹೊಸವರ್ಷ ಆಚರಣೆ ಮತ್ತು ಕ್ರಿಸ್ ಮಸ್ ಮತ್ತು ದೀಪಾವಳಿ ಹಬ್ಬಗಳು ಬಂತೆಂದರೆ ಈ ಕ್ಯಾಂಡಲ್ ಗಳಿಗೆ ಇನ್ನಿಲ್ಲದ ಬೇಡಿಕೆ ಬಂದು ಬಿಡುತ್ತದೆ. ಎಷ್ಟೇ ವಿದ್ಯುತ್ ಇದ್ದರೂ ವಿದ್ಯುತ್ ಬೆಳಕನ್ನು ಆರಿಸಿ, ಕ್ಯಾಂಡಲ್ ಗಳನ್ನು ಹಚ್ಚಿ ಅದರ ಬೆಳಕಿನಲ್ಲಿ ಸಂಭ್ರಮ ಪಡುತ್ತಾರೆ. ಹುಟ್ಟು ಹಬ್ಬಗಳಿಗೂ ಕ್ಯಾಂಡಲ್ ಬೇಕೇ ಬೇಕು.
ಮಾಮೂಲಿ ಕ್ಯಾಂಡಲ್ ಜೊತೆಗೆ ಗೊಂಬೆ, ಹಕ್ಕಿ, ಹೂ, ಗಿಡ ಮರ ಹೀಗೆ ಎಲ್ಲಾ ರೀತಿಯ ಕ್ಯಾಂಡಲ್ ತಯಾರಿಸಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ನೀಡುತ್ತಿದ್ದಾರೆ ಕೊಡಗಿನ ಶ್ರೀನಿವಾಸ ಪ್ರಸಾದ್ ದಂಪತಿ. ಕೇವಲ ಬೆಳಕು ನೀಡೋ ಕ್ಯಾಂಡಲ್ ತಯಾರಿಸಿದ್ರೆ ಗ್ರಾಹಕರನ್ನು ಸೆಳೆಯೋದು ಕಷ್ಟ ಎಂದರಿತ ಇವರು, ಸುಮಾರು 25 ವರ್ಷಗಳಿಂದ ವಿವಿಧ ವಿನ್ಯಾಸದ ಕ್ಯಾಂಡಲ್ಗಳನ್ನು ತಯಾರಿಸುತ್ತಿದ್ದು, ನೋಡುಗರ ಕಣ್ಣು ಕೋರೈಸುತ್ತಿವೆ. ವಿಶೇಷವಾಗಿ ಕ್ರಿಸ್ಮಸ್ ಮತ್ತು ಹೊಸವರ್ಷಾಚರಣೆಗಾಗಿ ಬಣ್ಣ ಬಣ್ಣದ ಕ್ಯಾಂಡಲ್ಗಳನ್ನು ಕೊಳ್ಳಲು ಮುಗಿಬಿದ್ದಿದ್ದಾರೆ.
ಆಯಾ ಸೀಜನ್ಗಳಿಗೆ ತಕ್ಕಂತೆ ಕ್ಯಾಂಡಲ್ಗಳನ್ನು ತಯಾರಿಸುತ್ತಿದ್ದು, ಬೆಲೆ ಕೂಡ ತೀರಾ ಹೆಚ್ಚಿಲ್ಲ. ಹೀಗಾಗಿ ಜನರು ತಮಗೆ ಇಷ್ಟವಾದ ಕ್ಯಾಂಡಲ್ಗಳನ್ನು ಕೊಂಡು ಖುಷಿ ಪಡುತ್ತಿದ್ದಾರೆ. ಸಾಮಾನ್ಯ ಕ್ಯಾಂಡಲ್ ಗಳಿಂದ ಹಿಡಿದು, ಬಾಲ್, ಹೃದಯಾ, ಹಕ್ಕಿ, ಮರಗಿಡ, ಹೀಗೆ ನಾನಾ ಬಗೆಯ ಸುಮಾರು 70 ವೆರೈಟಿ ಕ್ಯಾಂಡಲ್ ಇಲ್ಲಿ ತಯಾರಾಗುತ್ತಿದ್ದು, ಮನೆಯ ಅಂದ ಹೆಚ್ಚಿಸೋ ತರಹೇವರಿ ಕ್ಯಾಂಡಲ್ಗಳು ಎಲ್ಲರ ಗಮನಸೆಳೆಯುತ್ತಿವೆ.