ಸಕ್ಕರೆ ನಾಡು ಮಂಡ್ಯದಲ್ಲಿ ಕೆಆರ್ಎಸ್ ಡ್ಯಾಂ ಬಳಿ ಎರಡು ಬೃಹತ್ ಪ್ರತಿಮೆಗಳು ತಲೆ ಎತ್ತಲಿವೆ. ನಿರ್ಮಾಣವಾಗ್ತಿರೋ ಈ ಎರಡು ಪ್ರತಿಮೆಗಳ ನಿರ್ಮಾಣ ವಿಚಾರ ಇದೀಗ ರಾಜ್ಯ ಸರ್ಕಾರಕ್ಕೆ ತಲೆ ನೋವಾಗಿದೆ. ವಿವಾದದ ನಡುವೆಯೇ ಇದೀಗ ಈ ಪ್ರತಿಮೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಅದರಲ್ಲೂ ಅಣೆಕಟ್ಟೆಯ ಮುಖ್ಯದ್ವಾರದಲ್ಲಿ ವಿಶ್ವೇಶ್ವರಯ್ಯ ಅವರ ಪ್ರತಿಮೆ ನಿರ್ಮಾಣ ಭರದಿಂದ ಸಾಗಿದೆ.
KRS ಅಣೆಕಟ್ಟು ನಿರ್ಮಾಣಕ್ಕೆ ವಿಶ್ವೇಶ್ವರಯ್ಯ ಒಬ್ಬರೇ ಶ್ರಮಿಸಿಲ್ಲ. ವಿಶ್ವೇಶ್ವರಯ್ಯರಂತೆ ಏಳು ಮಂದಿ ದಿವಾನರು ಅಣೆಕಟ್ಟು ನಿರ್ಮಾಣ ಕಾರ್ಯದಲ್ಲಿ ಕೆಲಸ ಮಾಡಿದ್ದಾರೆ. ನಿಲ್ಲಿಸುವುದಾದರೇ ಏಳು ಜನ ದಿವಾನರ ಪ್ರತಿಮೆ ನಿಲ್ಲಿಸಿ ಅನ್ನೋದು ಪ್ರಗತಿಪರ ಸಂಘಟನೆಗಳ ಮುಖಂಡರ ಆಗ್ರಹವಾಗಿದೆ. ಅಲ್ಲದೇ ಡ್ಯಾಂ ಬಳಿ ಧರಣಿ ಪ್ರತಿಭಟನೆ ನಡೆಸಿ ಯಾವುದೇ ಕಾರಣಕ್ಕೂ ರಾಜರ ಸರಿಸಮಕ್ಕೆ ವಿಶ್ವೇಶ್ವರಯ್ಯನವರ ಪ್ರತಿಮೆ ನಿರ್ಮಾಣ ಮಾಡದಂತೆ ಆಗ್ರಹಿಸಿದ್ದಾರೆ.
ಇನ್ನು ಪ್ರತಿಭಟನೆ ಮತ್ತು ವಿರೋಧ ತೀವ್ರವಾಗ್ತಿದ್ದಂತೆ ಸರ್ಕಾರ ವಿಶ್ವೇಶ್ವರಯ್ಯ ಪ್ರತಿ ಮೆ ನಿರ್ಮಾಣ ಕಾಮಗಾರಿಯನ್ನ ಚುರುಕುಗೊಳಿಸಿದೆ. ಈಗಾಗಲೇ ಅಧಿಕಾರಿಗಳು ಗುತ್ತಿಗೆದಾರರಿಗೆ ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸರ್ಕಾರದ ಸೂಚನೆಯಂತೆ ಗುತ್ತಿಗೆದಾರರು ತರಾತುರಿಯಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದೇ ಆದರೆ, ಕನ್ನಂಬಾಡಿ ಕಟ್ಟೆಗೆ ಬಾಗಿನ ಸಮರ್ಪಣೆ ಕಾರ್ಯಕ್ರಮದಂದೇ ಎರಡೂ ಪ್ರತಿಮೆಗಳ ಲೋಕಾರ್ಪಣೆ ಕೂಡ ಆಗಲಿದೆ.
ಇನ್ನು ಡ್ಯಾಂ ಬಳಿ ಪ್ರತಿಮೆ ನಿರ್ಮಾಣವೇ ಅವೈಜ್ಞಾನಿಕ ಎಂಬ ಆರೋಪ ಕೂಡ ಕೇಳಿ ಬರುತ್ತಿದ್ದು, ಪ್ರತಿಮೆಯಿಂದ ಅಣೆಕಟ್ಟು ಸೌಂದರ್ಯಕ್ಕೆ ಧಕ್ಕೆಯಾಗಲಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಅಣೆಕಟ್ಟೆಗೆ ಡ್ಯಾಂನ ಸ್ವಾಗತ ಕಮಾನು ಕಳಸವಿದ್ದಂತೆ. ಅದನ್ನೇ ಮರೆ ಮಾಚುವಂತೆ ಪ್ರತಿಮೆ ನಿರ್ಮಾಣ ಸರಿಯಲ್ಲ. ದೂರದಿಂದಲೇ ಪ್ರವಾಸಿಗರು ಅಣೆಕಟ್ಟೆಯ ಸೌಂದರ್ಯ ಸವಿಯುತ್ತಿದ್ದರು. ಅವೈಜ್ಞಾನಿಕ ವಾಗಿ ಪ್ರತಿಮೆ ನಿರ್ಮಾಣ ಮಾಡುತ್ತಿರುವುದರಿಂದ ಡ್ಯಾಂನ ಸೌಂದರ್ಯಕ್ಕೆ ಧಕ್ಕೆಯಾಗಲಿದೆ ಅಂತಾರೆ ಸ್ಥಳೀಯರು.