ಕಾರ್ತಿಕ ಮಾಸ ಬಂತು ಅಂದ್ರೆ ಸಾಕು ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುನಸ್ಕಾರ ಆರಂಭವಾಗುತ್ತವೆ. ಅಲ್ಲದೆ ವಿವಿಧ ಉತ್ಸವಗಳನ್ನೂ ಮಾಡುವುದನ್ನ ನೋಡಿರ್ತೀರಿ. ಆದ್ರೆ ಆ ಒಂದು ಗ್ರಾಮದಲ್ಲಿ ಮಾತ್ರ ಕಾರ್ತಿಕ ಮಾಸದಲ್ಲಿ ವಿಭಿನ್ನ ಆಚರಣೆ ನಡೆಯುತ್ತದೆ. ಬಾಲಕನೋರ್ವನಿಗೆ ವಿಚಿತ್ರ ವೇಷ ಹಾಕಿ ಕತ್ತೆ ಮೇಲೆ ಮೆರವಣಿಗೆ ಮಾಡಲಾಗುತ್ತದೆ. ಅರೇ ಕತ್ತೆ ಮೇಲೆ ಮೆರವಣಿ ಮಾಡ್ತಾರಾ? ಈ ರೀತಿಯೂ ಒಂದು ದಾರ್ಮಿಕ ಆಚರಣೆ ಇದೆಯಾ ಅಂತಿರಾ? ಹೌದು, ಕತ್ತೆ ಮೇಲೆ ಮೆರವಣಿಗೆ ಮಾಡೋದರ ಹಿಂದೆ ಒಂದು ಪುರಾಣ ಕಥೆ ಇದೆ.
ಸಾಸಲು ಗ್ರಾಮದಲ್ಲಿ ಪವಾಡ ಪುರುಷ ಭೈರವರಾಜ ಎಂಬುವವರು ವಾಸವಿದ್ರಂತೆ. ಸೋಮೇಶ್ವರ ಸ್ವಾಮಿಯ ಪರಮ ಭಕ್ತರಾಗಿದ್ದ ಭೈರವರಾಜರು ಪವಾಡಗಳನ್ನು ಮಾಡುತ್ತ ಪ್ರಸಿದ್ಧಿ ಪಡೆದಿದ್ರು. ಈ ವೇಳೆ ಭೈರವರಾಜನ ಭಕ್ತಿ ಪರೀಕ್ಷಿಸಲು ಮುಂದಾದ ಸೋಮೇಶ್ವರನು ಜಂಗಮನ ರೂಪದಲ್ಲಿ ಬಂದು ಭೈರವರಾಜನನ್ನು ಪಂಥಕ್ಕೆ ಆಹ್ವಾನ ನೀಡುತ್ತಾರೆ. ಸೋತವರು ಕತ್ತೆ ಮೇಲೆ ಮೆರವಣಿಗೆ ಮಾಡಿಸಿಕೊಳ್ಳಬೇಕೆಂದು ಒಪ್ಪಂದ ಮಾಡಿಕೊಂಡು ಪಂಥಕ್ಕೆ ಇಳಿಯುತ್ತಾರೆ.