ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಯಶಸ್ವಿಯಾಗಿ ಮುಗಿದಿದೆ. ಭಾರತ ಸೇರಿದಂತೆ ಹಲವು ದೇಶಗಳ ಅತ್ಯುತ್ತಮ ಪ್ರತಿಭೆಗಳಿಗೆ ಐದು ಪ್ರಾಂಚೈಸಿಗಳು ಮಣೆಹಾಕಿವೆ. ಮಹತ್ವದ ಹರಾಜು ಪ್ರಕ್ರಿಯೆ ಬಗ್ಗೆ ಪ್ರತಿಕ್ರಿಯಿಸಿರುವ ಮುಂಬೈ ಇಂಡಿಯನ್ಸ್ ತಂಡದ ಓನರ್ ನೀತಾ ಅಂಬಾನಿ, ಈ ಹರಾಜು ಪ್ರಕ್ರಿಯೆ ಮಹಿಳಾ ಕ್ರಿಕೆಟ್‌ಗೆ ಬಹಳ ವಿಶೇಷ ದಿನ ಎಂದು ಶ್ಲಾಘಿಸಿದ್ದಾರೆ.
ಹರಾಜು ಪ್ರಕ್ರಿಯೆ ಯಾವಾಗಲೂ ರೋಮಾಂಚನಕಾರಿಯಾಗಿರುತ್ತದೆ. ಆದರೆ ಮಹಿಳಾ ಪ್ರೀಮಿಯರ್ ಲೀಗ್ನ ಹರಾಜು ಪ್ರಕ್ರಿಯೆ ತುಂಬಾ ವಿಶೇಷವಾಗಿತ್ತು. ಏಕೆಂದರೆ ಇದು ವುಮೆನ್ಸ್ ಪ್ರೀಮಿಯರ್ ಲೀಗ್ನ ಮೊದಲ ಹರಾಜಾಗಿದೆ. ಹಾಗಾಗಿ ಇದೊಂದು ನಿಜವಾಗಿಯೂ ಐತಿಹಾಸಿಕ ದಿನವಾಗಿತ್ತು. ಇಲ್ಲಿ ಎಲ್ಲಾ ಮಹಿಳಾ ಪ್ರತಿಭೆಗಳನ್ನು ಎಲ್ಲರೂ ಹುರಿದುಂಬಿಸಿದ್ದನ್ನು ಮತ್ತು ಸಂಭ್ರಮಿಸುವುದನ್ನು ನೋಡಿ ತುಂಬಾ ಖುಷಿಯಾಗಿದೆ ಎಂದು ನೀತಾ ಅಂಬಾನಿ ಅಭಿಪ್ರಾಯ ಪಟ್ಟಿದ್ದಾರೆ.
ನೀತಾ ಅಂಬಾನಿ ತಮ್ಮ ಮಗ ಆಕಾಶ್ ಅಂಬಾನಿ ಜೊತೆಗೆ ಮುಂಬೈ ಇಂಡಿಯನ್ಸ್ನ ಗ್ಲೋಬಲ್ ಹೆಡ್ ಆಫ್ ಪರ್ಫಾರ್ಮೆನ್ಸ್ ಆಗಿರುವ ಕೋಚ್ ಮಹೇಲಾ ಜಯವರ್ದನೆ, ಹೊಸದಾಗಿ ರೂಪುಗೊಂಡಿರುವ ಮಹಿಳಾ ತಂಡದ ಮುಖ್ಯ ಕೋಚ್ ಚಾರ್ಲೋಟ್ ಎಡ್ವರ್ಡ್ಸ್ ತಂಡದ ಮೆಂಟರ್ ಹಾಗೂ ಬೌಲಿಂಗ್ ಕೋಚ್ ಜೂಲನ್ ಗೋಸ್ವಾಮಿ ಮತ್ತು ಬ್ಯಾಟಿಂಗ್ ಕೋಚ್ ದೇವೀಕಾ ಪಾಲ್ಶಿಕಾರ್ ಅವರೊಂದಿಗೆ ಸೋಮವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ನಿನ್ನೆ ನಡೆದ ಹರಾಜು ಕ್ರಿಯೆಯಲ್ಲಿ ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರನ್ನು ಬಹಳ ಬೇಗ ಖರೀದಿಸಲು ಸಾಧ್ಯವಾಗಿದ್ದಕ್ಕೆ ತುಂಬಾ ಸಂತೋಷವಿದೆ. ನಾವು ಈಗಾಗಲೇ ಮುಂಬೈ ಇಂಡಿಯನ್ಸ್ ಪುರುಷರ ತಂಡದಲ್ಲಿ ಭಾರತೀಯ ನಾಯಕನನ್ನು ಹೊಂದಿದ್ದೇವೆ. ಇದೀಗ ಹರ್ಮನ್ ಕೂಡ ನಮ್ಮ ತಂಡಕ್ಕೆ ಸೇರಿದ್ದಾರೆ. ಜೊತೆಗೆ ತಂಡದಲ್ಲಿ ನ್ಯಾಟ್ (ಸೀವರ್-ಬ್ರಂಟ್), ಪೂಜಾ ವಸ್ತ್ರಾಕರ್ ಅಂತಹ ಸ್ಟಾರ್ ಆಟಗಾರ್ತಿಯರು ಮುಂಬೈ ಇಂಡಿಯನ್ಸ್ ಕುಟುಂಬ ಸೇರುವುದನ್ನು ಎದುರು ನೋಡುತ್ತಿದ್ದೇವೆ ಎಂದು ಮುಂಬೈ ತಂಡದ ಮಾಲಿಕೆ ತಿಳಿಸಿದ್ದಾರೆ.
ಮುಂಬೈ ಇಂಡಿಯನ್ಸ್‌ನಲ್ಲಿ ರೋಹಿತ್ (ಶರ್ಮಾ) ಅವರು ಆಟಗಾರನಿಂದ ನಾಯಕನಾಗಿ ಬೆಳೆದಿರುವುದನ್ನು ನಾನು ನೋಡಿದ್ದೇನೆ. ಈ ವರ್ಷ ಮುಂಬೈ ಇಂಡಿಯನ್ಸ್‌ಗೆ ರೋಹಿತ್ ನಾಯಕನಾಗಿ 10 ವರ್ಷ ಪೂರ್ಣಗೊಳಿಸಲಿದ್ದಾರೆ. ಇದೀಗ ನಾವು ಭಾರತೀಯ ಮಹಿಳಾ ತಂಡದ ನಾಯಕಿಯನ್ನು ಮುಂಬೈ ಕುಟುಂಬಕ್ಕೆ ಶ್ವಾಗತಿಸುತ್ತಿರುವುದಕ್ಕೆ ತುಂಬಾ ವಿಶೇಷ ಅನ್ನಿಸುತ್ತಿದೆ ಎಂದು ನೀತಾ ಅಂಬಾನಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ನೀತಾ ಅಂಬಾನಿಯವರು ಇತ್ತೀಚಿಗೆ ವಿಶ್ವಕಪ್ ಗೆದ್ದ ಮಹಿಳಾ ಅಂಡರ್ 19 ತಂಡದ ಸಾಧನೆಯನ್ನು ಶ್ಲಾಘಿಸಿದರು. ನಮ್ಮ U19 ಮಹಿಳಾ ಕ್ರಿಕೆಟ್ ತಂಡವು ವಿಶ್ವಕಪ್ ಗೆದ್ದಿರುವುದು ತುಂಬಾ ಸಂತೋಷ ತಂದಿದೆ. ಅವರ ಸಾಧನೆ ರಾಷ್ಟ್ರಕ್ಕೆ ಹೆಮ್ಮೆಯನ್ನುಂಟು ಮಾಡಿದೆ. ಇನ್ನು ಹಿರಿಯ ಮಹಿಳಾ ತಂಡವೂ ಸಹ ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ನ ಆರಂಭಿಕ ಪಂದ್ಯದಲ್ಲಿ ದಾಖಲೆಯ ಜಯ ಸಾಧಿಸಿ ಮುನ್ನುಗ್ಗುತ್ತಿದೆ ಎಂದು ಪ್ರಶಂಸಿಸಿದ್ದಾರೆ.
ಭಾರತದಲ್ಲಿ ಮಹಿಳೆಯರಿಗೆ ಕ್ರೀಡೆಯು ಒಂದು ಮಹತ್ವದ ಘಟ್ಟದಲ್ಲಿದೆ. ನಮ್ಮ ಎಲ್ಲಾ ಯುವತಿಯರು ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ, ಅವರ ಬೆಳವಣಿಗೆಯನ್ನು ನೋಡುವಾಗ ತುಂಬಾ ಹೆಮ್ಮೆಯನ್ನಿಸುತ್ತದೆ. ರಿಲಯನ್ಸ್ ಫೌಂಡೇಶನ್ ಯುವತಿಯರು, ಮಹಿಳೆಯರಿಗೆ ಬೆಂಬಲವಾಗಿ ನಿಂತು ಅವರ ಶಕ್ತಿಯನ್ನು ಹೆಚ್ಚಿಸಲು ಮತ್ತು ಉತ್ತೇಜಿಸಲು ಸಮರ್ಥವಾಗಿದೆ. ಕ್ರಿಕೆಟ್ ಅಥವಾ ಯಾವುದೇ ಕ್ರೀಡೆಯಲ್ಲಿ ಮಹಿಳೆಯರಿಗೆ ಕೇವಲ ಭಾರತದಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯಮಟ್ಟದಲ್ಲಿ ನಮ್ಮ ಬೆಂಬಲವಿರುತ್ತದೆ ಎಂದು ಭರವಸೆ ನೀಡಿದ್ದಾರೆ.