ಕೇಂದ್ರ ಲೋಕ ಸೇವಾ ಆಯೋಗ(Union Public Service Commission) ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ(Competitive Exams) ಉತ್ತೀರ್ಣರಾಗುವುದು ತಮಾಷೆಯ ವಿಷಯವಲ್ಲ. ಗುರಿ ಸಾಧನೆಗೆ ಪ್ರಮುಖವಾಗಿ ಕಠಿಣ ಪರಿಶ್ರಮ, ಸತತ ಪ್ರಯತ್ನ, ಏಕಾಗ್ರತೆ ಮುಖ್ಯವಾಗುತ್ತದೆ. IAS ಮತ್ತು IPS ತೇರ್ಗಡೆಯಾದ ಅಭ್ಯರ್ಥಿಗಳು ತಮ್ಮ ಪರೀಕ್ಷಾ ತಯಾರಿ, ವಿಧಾನ, ಮಾರ್ಗದರ್ಶನ ಎಲ್ಲವನ್ನು ಹಂಚಿಕೊಳ್ಳುತ್ತಾರೆ. ಅದೇ ರೀತಿ ಪಶ್ಚಿಮ ಬಂಗಾಳದ IPS ಅಧಿಕಾರಿ ನಿರ್ಜಾ ಷಾ ಅವರು ತಮ್ಮ 3ನೇ ಪ್ರಯತ್ನದಲ್ಲಿ UPSC CSEಯಲ್ಲಿ ತೇರ್ಗಡೆಯಾಗಿದ್ದಾರೆ. ಅವರು ಪರೀಕ್ಷಾ ಸಮಯದಲ್ಲಿ ಮಾಡಿದ ಮೂರು ತಪ್ಪುಗಳನ್ನು ಹೇಳಿದ್ದಾರೆ. ಜೊತೆಗೆ ನೀವ್ಯಾರು ಸಹ ಈ ತಪ್ಪುಗಳನ್ನು ಮಾಡಬೇಡಿ ಎಂದು ಅಭ್ಯರ್ಥಿಗಳಿಗೆ ಕಿವಿ ಮಾತು ಹೇಳಿದ್ದಾರೆ. ಹಾಗಿದ್ರೆ IPS ಆಫೀಸರ್ ನಿರ್ಜಾ ಷಾ ಮಾಡಿದ ತಪ್ಪುಗಳೇನು?
ಮೊದಲನೇ ತಪ್ಪು- UPSC ಪರೀಕ್ಷೆಯನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇರುವುದು. ಹೌದು, ಹೀಗಾಗಿಯೇ ಮೊದಲೆರಡು ಪ್ರಯತ್ನಗಳಲ್ಲಿ UPSC ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ಕೊನೆಗೆ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿ, 3ನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ. (IPS ಅಧಿಕಾರಿ ನಿರ್ಜಾ ಷಾ)
ನಿರ್ಜಾ ಷಾ ಅವರು ಈ ಹಿಂದೆ ಕಾಲೇಜಿಗೆ ಹೋಗುವುದರ ಜೊತೆಗೆ ಕೆಲಸ ಮಾಡಿಕೊಂಡು UPSC ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಆದರೆ ಅವರಿಗೆ ಈ ಮೂರು ಕೆಲಸಗಳನ್ನು ಬ್ಯಾಲೆನ್ಸ್ ಮಾಡಲು ಸಾಧ್ಯವಾಗಲಿಲ್ಲ. ಅವರು ಮೊದಲನೇ ಬಾರಿ ಪ್ರಿಲಿಮ್ಸ್ ಪರೀಕ್ಷೆ ಬರೆಯುವಾಗ ಆದ ಅನುಭವವನ್ನು ಹೇಳಿದ್ದಾರೆ. "ನಾನು ಮೊದಲನೇ ಬಾರಿಗೆ ಪ್ರಿಲಿಮ್ಸ್ಗಾಗಿ ಎಕ್ಸಾಂ ಹಾಲ್ಗೆ ಕಾಲಿಟ್ಟಾಗ, ಸಂಪೂರ್ಣವಾಗಿ ತಯಾರಿ ನಡೆಸಿಕೊಂಡಿರಲಿಲ್ಲ. ಪ್ರಿಲಿಮ್ಸ್ ನಡೆದಿದ್ದರೂ ಸಹ ಮೇನ್ಸ್ ಎಕ್ಸಾಂಗೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟು ಸಿದ್ಧತೆ ಮಾಡಿಕೊಂಡಿರಲಿಲ್ಲ" ಎಂದು ಹೇಳಿದ್ದಾರೆ.
ನಿರ್ಜಾ ಮಾಡಿದ 2ನೇ ತಪ್ಪು ಏನು? ನಿರ್ಜಾ ಅವರು ಯಾರ ಬಳಿಯೂ ಸಹಾಯ ಕೇಳಲಿಲ್ಲವಂತೆ. ಇದು ಅವರು ಮಾಡಿದ 2ನೇ ತಪ್ಪಂತೆ. ಅವರು UPSC ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಾಗ ಕೆಲವು ಸಂದರ್ಭಗಳನ್ನು ಎದುರಿಸಬೇಕಾಯಿತು. "ಜನರು ನನ್ನನ್ನು ಏನು ಮಾಡುತ್ತಿದ್ದೀರಿ ಎಂದು ಕೇಳಿದಾಗ, UPSC ಪರೀಕ್ಷೆ ಬರೆಯುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಬದಲು, ಮುಜುಗರ ಪಡುವಂತಾಯಿತು" ಎಂದು ನಿರ್ಜಾ ಹೇಳಿಕೊಂಡಿದ್ದಾರೆ.
IPS ಅಧಿಕಾರಿ ನಿರ್ಜಾ ಅವರು ಮಾಡಿದ ಮೂರನೇ ತಪ್ಪು-ತಾನ್ಯಾರು ಅಂತ ತಿಳಿದುಕೊಂಡಿಲ್ಲದೇ ಇರುವುದು. ಹೌದಂತೆ, ಇದು ಅವರು ಮಾಡಿದ ಮೂರನೇ ತಪ್ಪಂತೆ. ಎಲ್ಲರಂತೆ ನಿರ್ಜಾ ಅವರು ಕೂಡ ದೆಹಲಿಯ ಓಲ್ಡ್ ರಾಜಿಂದರ್ ನಗರಕ್ಕೆ(UPSC ಹೋಲಿ ಗ್ರೇಲ್) ಶಿಫ್ಟ್ ಆದರು. ಆದರೆ ಅಲ್ಲಿನ ಪರಿಸ್ಥಿತಿಯನ್ನು ನಿಭಾಯಿಸಲು ನಿರ್ಜಾ ಅವರಿಗೆ ಸಾಧ್ಯವಾಗಲೇ ಇಲ್ಲವಂತೆ. ಕೊನೆಗೆ ಮನೆಗೆ ಮರಳಿ, ತನ್ನನ್ನು ತಾನು ಅರಿಯುವ ಪ್ರಯತ್ನ ಮಾಡಿದ್ರಂತೆ.