ಸೇಲ್ಸ್ ವಿಷಯಕ್ಕೆ ಬಂದಾಗ ಚಂದ್ರಮೊಗನ್ ಅತಿದೊಡ್ಡ ಖಾಸಗಿ ಡೈರಿ ಕಂಪನಿಗಳಲ್ಲಿ ಒಂದನ್ನು ನಿರ್ಮಿಸಿದರು. 74 ರ ಹರೆಯದಲ್ಲೂ ಬತ್ತದ ಉತ್ಸಾಹಿಯಾಗಿ ಕಾರ್ಯನಿರ್ವಹಿಸುತ್ತಿರುವ ಚಂದ್ರಮೊಗನ್ ಹ್ಯಾಟ್ಸನ್ ಆಗ್ರೋ ಪ್ರಾಡಕ್ಟ್‌ನ ಅಧ್ಯಕ್ಷರಾಗಿದ್ದಾರೆ. ಇವರು ಐಸ್‌ಕ್ರೀಮ್ ಉದ್ಯಮವನ್ನು ಆರಂಭಿಸಿದ್ದೇ ಒಂದು ರೋಚಕ ಕಥೆಯಾಗಿದ್ದು ತಳ್ಳುಗಾಡಿಗಳಲ್ಲಿ ಐಸ್‌ಕ್ರೀಮ್ ಮಾರಾಟ ಮಾಡಿ ಉದ್ಯಮದ ಒಂದೊಂದೇ ಮಜಲುಗಳನ್ನು ದಾಟಿದವರಾಗಿದ್ದಾರೆ.
ಇವರ ತಂದೆ ಸಣ್ಣ ಪ್ರಾವಿಷನ್ ಅಂಗಡಿಯನ್ನಿಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದರು. ಶಿಕ್ಷಣಕ್ಕೆ ಎಳ್ಳುನೀರು ಬಿಟ್ಟ ಚಂದ್ರಮೊಗನ್ ಟಿಂಬರ್ ಡಿಪೋದಲ್ಲಿ 65 ರೂಪಾಯಿ ಸಂಬಳಕ್ಕೆ ವೃತ್ತಿಜೀವನವನ್ನು ಪ್ರಾರಂಭಿಸಿದರು. ಒಂದು ವರ್ಷದ ನಂತರ ಐಸ್‌ಕ್ರೀಮ್ ವ್ಯಾಪಾರ ಆರಂಭಿಸುವ ನಿಟ್ಟಿನಲ್ಲಿ ಉದ್ಯೋಗ ತೊರೆದರು ಹಾಗೂ 250 ಚದರ ಅಡಿ ಕೋಣೆಯಲ್ಲಿ ಕೇವಲ ಮೂರು ಕಾರ್ಮಿಕರೊಂದಿಗೆ ವ್ಯಾಪಾರ ಆರಂಭಿಸಿದರು. ತಮ್ಮ ಉದ್ಯಮಕ್ಕಾಗಿ ಇವರು ಹೂಡಿಕೆ ಮಾಡಿದ್ದು ರೂ13,000 ಮಾತ್ರ
ಹೀಗೆ ತಮ್ಮ ಬ್ರ್ಯಾಂಡ್ ಆದ ಅರುಣ್ ಐಸ್‌ಕ್ರೀಮ್ ಅನ್ನು ತಮಿಳುನಾಡಿನಲ್ಲಿ ಹೊಸ ಸ್ಪರ್ಧಿಯನ್ನಾಗಿ ಆರಂಭಿಸಿದರು. 1986 ರಲ್ಲಿ, ಅವರು ತಮ್ಮ ಕಂಪನಿಯ ಹೆಸರನ್ನು ಪ್ರಸ್ತುತ ಹ್ಯಾಟ್ಸನ್ ಆಗ್ರೋ ಉತ್ಪನ್ನ ಎಂದು ಬದಲಾಯಿಸಿದರು. ಭಾರತದ ಅತಿದೊಡ್ಡ ಖಾಸಗಿ ಡೈರಿ ಕಂಪನಿಗಳಲ್ಲಿ ಒಂದಾದ ಹ್ಯಾಟ್ಸನ್ ಪ್ರತಿದಿನ 10,000 ಹಳ್ಳಿಗಳಲ್ಲಿ 4 ಲಕ್ಷ ರೈತರಿಂದ ಹಾಲನ್ನು ಸಂಗ್ರಹಿಸುತ್ತದೆ. ಸರಳವಾಗಿ ಉದ್ಯಮ ಆರಂಭಿಸಿದ ಚಂದ್ರಮೊಗನ್ ಇಂದು ತಮ್ಮ ಸಂಸ್ಥೆಯನ್ನು 18,889 ಕೋಟಿ ರೂ ಮೌಲ್ಯದ ಸಂಸ್ಥೆಯನ್ನಾಗಿ ರೂಪಿಸಿದ್ದಾರೆ.