ನೀವು ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡದಿದ್ದರೆ ಏನಾಗುತ್ತೆ? ಇದು ನಿಮ್ಮ ಸಂಬಳದ ಮೇಲೆ ಪರಿಣಾಮ ಬೀರಬಹುದು. ತೆರಿಗೆ ಕಡಿತವು ನಿಮ್ಮ ಸಂಬಳದಲ್ಲಿ ಆಗುತ್ತದೆ. ನೀವು ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡದಿದ್ದರೆ, ಹೊಸ ತೆರಿಗೆ ಪದ್ಧತಿಯು ಡೀಫಾಲ್ಟ್ ಆಗಿ ಅನ್ವಯವಾಗುತ್ತದೆ. ಈ ಹೊಸ ತೆರಿಗೆ ಪದ್ಧತಿಯಲ್ಲಿ ಟಿಡಿಎಸ್ ಕಡಿತವಾಗುತ್ತದೆ. ಈ ಸಂಬಂಧ ಕೇಂದ್ರೀಯ ನೇರ ತೆರಿಗೆ ಮಂಡಳಿ ಸುತ್ತೋಲೆ ಹೊರಡಿಸಿದೆ.
ತೆರಿಗೆ ಪದ್ಧತಿ ಕುರಿತು ಉದ್ಯೋಗಿಯು ಯಾವುದೇ ಮಾಹಿತಿಯನ್ನು ನೀಡದಿದ್ದರೆ, ಅವರನ್ನು ಡೀಫಾಲ್ಟ್ ತೆರಿಗೆ ಪದ್ಧತಿಯಡಿಯಲ್ಲಿ ಮುಂದುವರಿಸಲು ಪರಿಗಣಿಸಲಾಗುತ್ತದೆ ಮತ್ತು ಹೊಸ ತೆರಿಗೆ ಪದ್ಧತಿಯಿಂದ ಹೊರಗುಳಿಯುವ ಆಯ್ಕೆಯನ್ನು ನೀಡಲಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಸೆಕ್ಷನ್ 192 ರ ಅಡಿಯಲ್ಲಿ, ಉದ್ಯೋಗದಾತರು ಸೆಕ್ಷನ್ 115BAC ಯ ಉಪ-ವಿಭಾಗ (lA) ಅಡಿಯಲ್ಲಿ ಒದಗಿಸಲಾದ ದರಗಳಲ್ಲಿ TDS ಅನ್ನು ವಿಧಿಸುತ್ತಾರೆ. ಆ ಪ್ರಕಾರ, ನಿಮ್ಮ ಸಂಬಳದಲ್ಲಿ ಟಿಡಿಎಸ್ ಕಡಿತಗೊಳಿಸಲಾಗುವುದು ಎಂದು ಸಿಬಿಡಿಟಿ ಸುತ್ತೋಲೆಯಲ್ಲಿ ವಿವರಿಸಿದೆ.
ಉದ್ಯೋಗಿ ನಿರ್ಧರಿಸದಿದ್ದರೆ, ಹೊಸ ತೆರಿಗೆ ಆಡಳಿತ ದರಗಳ ಪ್ರಕಾರ TDS ಅನ್ನು ಕಡಿತಗೊಳಿಸುವುದು ಉದ್ಯೋಗದಾತರ ಜವಾಬ್ದಾರಿಯಾಗಿದೆ. ಉದ್ಯೋಗದಾತರು ತಮ್ಮ ಉದ್ಯೋಗಿಗಳಿಂದ ತೆರಿಗೆ ನೀತಿಯ ಸ್ಪಷ್ಟೀಕರಣವನ್ನು ಪಡೆಯಬೇಕು. ಅದರಂತೆ ತೆರಿಗೆ ಕಡಿತಗೊಳಿಸಬೇಕು. ಹಾಗಾಗಿ ನೌಕರರು ಈಗಲೇ ಎಚ್ಚೆತ್ತುಕೊಳ್ಳಬೇಕು. ಉದ್ಯೋಗದಾತರು ಅವರು ಆಯ್ಕೆ ಮಾಡಲಿರುವ ತೆರಿಗೆ ಆಡಳಿತದ ಬಗ್ಗೆ ತಿಳಿಸಬೇಕು.
ವೇತನದಾರರು ಎರಡೂ ತೆರಿಗೆ ಪದ್ಧತಿಗಳೊಂದಿಗೆ ಪ್ರಯೋಜನಗಳನ್ನು ಹೊಂದಿದ್ದಾರೆ. ಆದರೆ ಅವರವರ ಸಂಬಳಕ್ಕೆ ಅನುಗುಣವಾಗಿ ಲಾಭದಾಯಕವಾದ ತೆರಿಗೆ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ತೆರಿಗೆ ಪಾವತಿದಾರರನ್ನು ಹೆಚ್ಚು ಆಕರ್ಷಿಸಲು ಸರ್ಕಾರವು ಹೊಸ ತೆರಿಗೆ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ತಂದಿದೆ. ಹೊಸ ತೆರಿಗೆ ವ್ಯವಸ್ಥೆಯಲ್ಲಿ ರೂ. 50,000 ಪ್ರಮಾಣಿತ ಕಡಿತವನ್ನು ಘೋಷಿಸಲಾಗಿದೆ. ಈ ಹಿಂದೆ ಹಳೆಯ ತೆರಿಗೆ ಪದ್ಧತಿಯಲ್ಲಿ ಮಾತ್ರ ಈ ವಿನಾಯಿತಿ ಲಭ್ಯವಿತ್ತು.