RBI ಕಾಯಿದೆ 1934ರ ಸೆಕ್ಷನ್ 24(1)ರ ಅಡಿಯಲ್ಲಿ 2016ರಲ್ಲಿ 2000 ರೂಪಾಯಿ ನೋಟುಗಳನ್ನು ಮುದ್ರಿಸಲು ಆರಂಭಿಸಿತ್ತು. ಅದೇ ವರ್ಷದಲ್ಲಿ RBI ಹಳೆಯ 500 ಮತ್ತು 1000 ರೂಪಾಯಿ ನೋಟುಗಳನ್ನು ಬ್ಯಾನ್ ಮಾಡಿತ್ತು. ಆದ್ರೆ ಕರೆನ್ಸಿ ಅಗತ್ಯತೆ ಉಂಟಾಗಬಹುದು ಎಂಬ ಕಾರಣಕ್ಕೆ RBI ಈ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿದೆ. ಆದರೆ 2018-19ರಲ್ಲಿ 2000 ರೂಪಾಯಿ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿತ್ತು.
ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧಿಸುವುದಾಗಿ ಘೋಷಿಸಿದೆ. ಇನ್ಮುಂದೆ ದೇಶದಲ್ಲಿ ಎಲ್ಲೂ 2000 ರೂಪಾಯಿಯ ನೋಟುಗಳು ಚಲಾವಣೆಯಲ್ಲಿರುವುದಿಲ್ಲ. ಅದೇ ರೀತಿ ಜನರ ಬಳಿ ಇರುವ 2000 ನೋಟುಗಳನ್ನು ಬ್ಯಾಂಕ್ಗಳಿಗೆ ಹೋಗಿ ವಿನಿಮಯ ಮಾಡಿಕೊಳ್ಳಬೇಕೆಂದು ಹೇಳಿದೆ. ಇನ್ನು ಈ ಅವಕಾಶ ಸೆಪ್ಟೆಂಬರ್ 30ರ ತನಕ ಇರಲಿದೆ ಎಂದು ಆರ್‌ಬಿಐ ತಿಳಿಸಿದೆ.
ಆರ್‌ಬಿಐ 2000 ಮುಖಬೆಲೆಯ ನೋಟುಗಳ ವಿನಿಮಯದ ಬಗ್ಗೆ ಹೇಳಿಕೆ ನೀಡಿದ್ದು, ಸಾರ್ವಜನಿಕರು ತಮ್ಮ ಬಳಿ ಇರುವ 2,000 ರೂಪಾಯಿ ನೋಟುಗಳನ್ನು ತಮ್ಮ ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಬಹುದು. ಇನ್ನು 2,000 ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಸಹ ಅವಕಾಶ ನೀಡಿದೆ. ಯಾವುದೇ ಬ್ಯಾಂಕ್ಗಳಲ್ಲಾದರೂ ಜಮಾವಣೆ ಮಾಡಬಹುದು ಮತ್ತು ಎಕ್ಸ್ಚೇಂಜ್ ಮಾಡಿಕೊಳ್ಳಬಹುದು. ಇದು ಸೆಪ್ಟೆಂಬರ್ 30ರವರೆಗೆ ಜಾರಿಯಲ್ಲಿರುತ್ತದೆ.
ಗ್ರಾಹಕರಿಗೆ ತಮ್ಮ ಬಳಿ ಇರುವ 2000 ಮುಖ ಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದಕ್ಕೆ ಕೆಲವು ನಿರ್ಬಂಧ ವಿಧಿಸಲಾಗಿದೆ. ಬ್ಯಾಂಕ್ ಕಾರ್ಯ ಚಟುವಟಿಕೆಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಪ್ರತಿದಿನ ಒಬ್ಬ ಗ್ರಾಹಕರಿಗೆ ಗರಿಷ್ಛ 20,000 ರೂಪಾಯಿಗಳನ್ನು ಮಾತ್ರ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇದೇ ತಿಂಗಳ 23 ರಿಂದ ಬ್ಯಾಂಕ್‌ಗಳಲ್ಲಿ 2,000 ರೂಪಾಯಿ ನೋಟು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಬ್ಯಾಂಕ್ ವಿನಿಮಯ ಮಾಡಿಕೊಳ್ಳದಿದ್ದರೆ ಏನು ಮಾಡ್ಬೇಕು?: ಒಂದು ವೇಳೆ ₹2,000 ನೋಟಿನ ಬದಲಾವಣೆ ಅಥವಾ ಡೆಪಾಸಿಟ್ ಮಾಡಲು ಬ್ಯಾಂಕ್ ನಿರಾಕರಿಸಿದರೆ ಗ್ರಾಹಕರು ಮೊದಲು ಸಂಬಂಧಪಟ್ಟ ಬ್ಯಾಂಕ್ನಲ್ಲಿ ಸಂಪರ್ಕಿಸಬಹುದು ಎಂದು ಆರ್‌ಬಿಐ ಹೇಳಿದೆ. ದೂರು ಸಲ್ಲಿಸಿದ ನಂತರ 30 ದಿನಗಳ ಅವಧಿಯೊಳಗೆ ಬ್ಯಾಂಕ್ ಒಂದು ವೇಳೆ ಪ್ರತಿಕ್ರಿಯಿಸದಿದ್ದರೆ, ದೂರುದಾರರು ರಿಸರ್ವ್ ಬ್ಯಾಂಕ್ - ಇಂಟಿಗ್ರೇಟೆಡ್ ಒಂಬುಡ್ಸ್‌ಮನ್ ಸ್ಕೀಮ್ (RB-IOS), 2021 ರ ಅಡಿಯಲ್ಲಿ cms.rbi.org ವೆಬ್ಸೈಟ್ ಮೂಲಕ ದೂರು ಸಲ್ಲಿಸಬಹುದು.