ಸಾಮಾನ್ಯವಾಗಿ ದೂರದ ಸ್ಥಳಗಳಿಗೆ ಹೋಗುವವರು ಹೆಚ್ಚಾಗಿ ರೈಲಿನ ಪ್ರಯಾಣ ಇಷ್ಟಪಡುತ್ತಾರೆ. ಹಗಲಿನ ವೇಳೆ ಪ್ರಯಾಣ ಮಾಡಿದರೆ ಇಡೀ ದಿನ ರೈಲಿನಲ್ಲಿಯೇ ಕಳೆದುಹೋಗುತ್ತದೆ, ಸುಮ್ಮನೆ ಸಮಯ ವ್ಯರ್ಥವಾಗುತ್ತದೆ ಎಂದು ಜನರು ರಾತ್ರಿ ಟೈಂ ರೈಲಿನ ಜರ್ನಿ ಮಾಡಲು ಬಯಸುತ್ತಾರೆ. ರಾತ್ರಿಯಿಡೀ ಜರ್ನಿಯಲ್ಲಿ ಆರಾಮಾಗಿ ನಿದ್ದೆ ಮಾಡಿಕೊಂಡು, ಬೆಳಗ್ಗೆ ತಾವು ತಲುಪಬೇಕಿರುವ ಸ್ಥಳಕ್ಕೆ ಹೋಗಬಹುದು ಎಂಬುದು ಅವರ ಭಾವನೆ.
ನೀವು ಹೆಚ್ಚಾಗಿ ರಾತ್ರಿ ವೇಳೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ಇಲ್ಲಿ ನಿಮಗಾಗಿ ಮುಖ್ಯ ವಿಷಯ ಇದೆ. ಭಾರತೀಯ ರೈಲ್ವೆಯು ಪ್ರಯಾಣಿಕರ ಸೌಕರ್ಯ ಮತ್ತು ಸುರಕ್ಷತೆಗಾಗಿ ಕೆಲವು ನಿಯಮಗಳನ್ನು ರೂಪಿಸಿದೆ. ಟ್ರಾಫಿಕ್ ನಿಯಂತ್ರಿಸಲು ಮತ್ತು ಇತರ ಪ್ರಯಾಣಿಕರಿಗೆ ಆಗುವ ಅನಾನುಕೂಲತೆಯನ್ನು ತಪ್ಪಿಸಲು ರೈಲ್ವೆ ಇಲಾಖೆಯು ಈ ನಿಯಮಗಳನ್ನು ಜಾರಿಗೆ ತರುತ್ತಿದೆ. ಪ್ರಯಾಣಿಕರು ಈ ನಿಯಮಗಳನ್ನು ಫಾಲೋ ಮಾಡದಿದ್ದರೆ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ.
ರಾತ್ರಿ ವೇಳೆ ಜರ್ನಿ ಮಾಡುವ ರೈಲ್ವೆ ಪ್ರಯಾಣಿಕರು ರಾತ್ರಿ 10 ಗಂಟೆಯ ನಂತರ ತಮ್ಮ ಮೊಬೈಲ್ ಫೋನ್ ಸ್ಪೀಕರ್ ಆನ್ ಮಾಡಿ ಹಾಡುಗಳನ್ನು ಕೇಳಬಾರದು, ಕರೆ ಮಾಡಬಾರದು, ಗಲಾಟೆ ಮಾಡಬಾರದು ಅಥವಾ ಜೋರಾಗಿ ಮಾತನಾಡಬಾರದು. ರಾತ್ರಿ 10 ಗಂಟೆಯ ನಂತರ ರೈಲಿನ ಲೈಟ್ಗಳನ್ನು ಹೊರತುಪಡಿಸಿ ಯಾವುದೇ ಲೈಟ್ಗಳನ್ನು ಆನ್ ಮಾಡಬಾರದು. ರಾತ್ರಿ 10 ಗಂಟೆಯ ನಂತರ ಜನಸಂದಣಿಯಿಂದ ಇತರೆ ಪ್ರಯಾಣಿಕರ ನಿದ್ರೆಗೆ ಭಂಗ ಆಗಬಾರದು. ಧೂಮಪಾನ ಮಾಡುವುದು ಅಥವಾ ಮದ್ಯಪಾನ ಮಾಡುವುದು ಅಥವಾ ಸಹ ಪ್ರಯಾಣಿಕರಿಗೆ ಕಿರಿಕಿರಿ ಅಥವಾ ಹಾನಿಯನ್ನುಂಟುಮಾಡುವ ಯಾವುದೇ ಇತರ ಚಟುವಟಿಕೆಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಮಧ್ಯದ ಬರ್ತ್ ಅನ್ನು ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ತೆರೆಯಲು ವ್ಯವಸ್ಥೆ ಮಾಡಿದೆ. ಅಂದರೆ ಮಧ್ಯದ ಬರ್ತ್ ಅನ್ನು ಕಾಯ್ದಿರಿಸಿದ ಪ್ರಯಾಣಿಕರು ಆ ಬರ್ತ್ ಅನ್ನು ತೆರೆದು ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಅದರಲ್ಲಿ ಮಲಗಬಹುದು. ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಮಧ್ಯದ ಬರ್ತ್ ಅನ್ನು ಮುಚ್ಚಬಹುದು ಮತ್ತು ಕೆಳಗಿನ ಬರ್ತ್‌ನಲ್ಲಿ ಕುಳಿತುಕೊಳ್ಳಬಹುದು.