ಪ್ರಯಾಣಿಕರು ಅತಿಯಾದ ಬೆಲೆಗಳನ್ನು ಪಾವತಿಸುವುದರಿಂದ ಮತ್ತು ಸಣ್ಣ ವಿಮಾನಯಾನ ಸಂಸ್ಥೆಗಳು ಕಳೆದುಕೊಳ್ಳದಂತೆ ರಕ್ಷಿಸಲು ವಿಮಾನ ದರಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ಮಿತಿಗಳನ್ನು ಪರಿಚಯಿಸಲಾಗಿದೆ. ಸರಕಾರ ವಿಧಿಸಿರುವ ನಿರ್ಬಂಧ ತೆರವಾದ ಬಳಿಕ ಕೆಲವು ಮಾರ್ಗಗಳಲ್ಲಿ ವಿಮಾನ ದರ ಗಣನೀಯವಾಗಿ ಏರಿಕೆಯಾಗಲಿದ್ದು, ಕೆಲವು ಮಾರ್ಗಗಳಲ್ಲಿ ಪ್ರಯಾಣ ದರ ಇಳಿಕೆಯಾಗಲಿದೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ.
ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ವಿಮಾನ ದರಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವುದರಿಂದ ವಿಮಾನಯಾನ ಸಂಸ್ಥೆಗಳು ಪ್ರಯಾಣ ದರದಲ್ಲಿ ರಿಯಾಯಿತಿಗಳನ್ನು ಘೋಷಿಸಲು ಮತ್ತು ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದೆ. ಅದರಲ್ಲೂ ಮುಂಬರುವ ಹಬ್ಬ ಹರಿದಿನಗಳಿಂದಾಗಿ ಟಿಕೆಟ್ ದರಗಳು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಟ್ರಾವೆಲ್ ಏಜೆಂಟ್ ಗಳೂ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ದೇಶೀಯ ವಿಮಾನ ಸಂಚಾರ ಚೇತರಿಕೆಯ ಹಾದಿಯಲ್ಲಿದ್ದು, ಜೆಟ್ ಇಂಧನ ಬೆಲೆಯಲ್ಲಿ ತುಲನಾತ್ಮಕವಾಗಿ ಇಳಿಕೆಯಾಗಿರುವುದರಿಂದ, ಆಗಸ್ಟ್ 31 ರಿಂದ ವಿಮಾನ ದರಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಪ್ರಕಟಿಸಿದೆ. ಆದಾಗ್ಯೂ, ಭಾರತದ ಎರಡನೇ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ವಿಸ್ತಾರಾ, ಸಮತೋಲಿತ ಬೆಲೆ ತಂತ್ರದೊಂದಿಗೆ ಮುಂದುವರಿಯುವುದಾಗಿ ಹೇಳಿದೆ.