ಶ್ರೀಮಂತರಾಗಬೇಕು ಎಂಬುದು ಪ್ರತಿಯೊಬ್ಬರ ಹಂಬಲವಾಗಿರುತ್ತದೆ. ಅಂತೆಯೇ ಒಮ್ಮೆಲೆ ಶ್ರೀಮಂತರಾಗೋದು ಒಂದು ದಿನದಲ್ಲಿ ಸಂಭವಿಸುವ ಚಮತ್ಕಾರೀ ವಿದ್ಯಮಾನವೇನಲ್ಲ. ಹೇಗೆ ರೋಮ್ ಎಂಬ ಸಾಮ್ರಾಜ್ಯ ಒಂದು ದಿನದಲ್ಲಿ ರಚನೆಯಾಗಲಿಲ್ಲವೋ ಅಂತೆಯೇ ಸಿರಿವಂತರಾಗಲು ಪರಿಶ್ರಮ ಹಾಗೂ ಗುರಿ ಅತ್ಯಗತ್ಯವಾಗಿದೆ. ಪ್ರತಿಯೊಂದು ಯೋಜನೆ ಕಾರ್ಯರೂಪಕ್ಕೆ ಬರಲು ಸರಿಯಾದ ಪ್ಲಾನಿಂಗ್ ಅಗತ್ಯವಾಗಿರುತ್ತದೆ.
ಆರ್ಥಿಕ ಗುರಿಗಳನ್ನು ಹೊಂದಿಸಿ: ನಿಮ್ಮ ಹಣದಿಂದ ನೀವು ಏನು ಸಾಧನೆ ಮಾಡಬೇಕೆಂದುಕೊಂಡಿದ್ದೀರಿ ಎಂಬುದನ್ನು ಮೊದಲು ಯೋಜಿಸಿ. ಬೇಗನೇ ನಿವೃತ್ತಿ ಹೊಂದಬೇಕೆಂದುಕೊಂಡಿದ್ದೀರಾ? ಮನೆ ಖರೀದಿ ನಿಮ್ಮ ಗುರಿಯೇ? ವಾಹನ ಖರೀದಿ ನಿಮ್ಮ ಆದ್ಯತೆಯೇ ಎಂಬುದನ್ನು ಮೊದಲು ನಿಶ್ಚಯಿಸಿಕೊಳ್ಳಿ. ನೀವು ಏನು ಸಾಧಿಸಬೇಕು ಎಂಬುದನ್ನು ಯೋಜಿಸಿಕೊಂಡರೆ ಅದನ್ನು ಸಾಧಿಸಲು ಬೇಕಾದ ಗುರಿಗಳನ್ನು ಹೊಂದಿಸಲು ನಿಮಗೆ ಸಾಧ್ಯವಾಗುತ್ತದೆ.
ತಾಳ್ಮೆ ಹಾಗೂ ನಿರಂತರತೆ ಇರಲಿ: ಒಂದೇ ದಿನದಲ್ಲಿ ಶ್ರೀಮಂತರಾಗಬೇಕು ಎಂಬ ನಿಟ್ಟಿನಲ್ಲಿ ತಾಳ್ಮೆಯನ್ನು ಕಳೆದುಕೊಳ್ಳಬೇಡಿ ಅಂತೆಯೇ ಎಷ್ಟೇ ಕಷ್ಟ ಬಂದರೂ ನೀವು ಸಾಧಿಸಬೇಕೆಂದುಕೊಂಡಿರುವ ಗುರಿಯಿಂದ ಹಿಂತಿರುಗದಿರಿ. ಹೇಗೆ ಒಂದು ಓಕ್ ಮರ ಸಣ್ಣ ಸಸಿಯಾಗಿ ನಂತರ ದೊಡ್ಡ ಹೆಮ್ಮರವಾಗಿ ಬೆಳೆಯುತ್ತದೆಯೋ ಅಂತೆಯೇ ಸಿರಿವಂತಿಕೆ ನಿಮ್ಮದಾಗಬೇಕು ಎಂದಾದಲ್ಲಿ ತಾಳ್ಮೆ ಹಾಗೂ ನಿರಂತರತೆ ನಿಮ್ಮದಾಗಲಿ.