ಉತ್ತರ ಪ್ರದೇಶದ ಮೀರತ್‌ನ ರೈತ ಯೋಗೇಶ್ ಬಲ್ಯಾನ್ ಎಂಬುವವರು ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಹೈಟೆಕ್ ಕಬ್ಬಿನ ವಿವಿಧ ಉತ್ಪನ್ನ ತಯಾರಿಸುವ ವಾಹನ ಆವಿಷ್ಕಾರ ಮಾಡಿದ್ದಾರೆ. ಏಳು ಲಕ್ಷ ರೂಪಾಯಿಯಿಂದ ಈ ವಾಹನವನ್ನು ಸಿದ್ಧಪಡಿಸಿದ್ದಾರೆ. ಯುಪಿಯಲ್ಲಿ ಕೃಷಿ ಮೇಳಗಳು ನಡೆಯುವಲ್ಲೆಲ್ಲಾ ಈ ವಾಹನವು ಪ್ರಮುಖ ಆಕರ್ಷಣೆಯಾಗಿದೆ. ಈ ವಾಹನದಲ್ಲಿ ಕಬ್ಬಿನ ರಸ ಸದಾ ಸಿದ್ಧವಾಗಿರುತ್ತದೆ. ಇವರು ಕಬ್ಬಿನ ಹಾಲಿನಿಂದ ಟೀ ಮತ್ತು ಕಬ್ಬಿನ ಕುಲ್ಫಿಯನ್ನೂ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.
ಇದಕ್ಕೂ ಮುನ್ನ ಮೀರತ್‌ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಕೃಷಿ ವಿಶ್ವವಿದ್ಯಾಲಯಕ್ಕೆ ಬಂದಿದ್ದ ಯುಪಿ ಗವರ್ನರ್ ಆನಂದಿ ಬೆನ್ ಪಟೇಲ್ ಅವರು ಕಬ್ಬಿನ ಜ್ಯೂಸ್, ಟೀ ಮತ್ತು ಕುಲ್ಫಿ ಮಾರಾಟ ಮಾಡುವ ಹೈಟೆಕ್ ವಾಹನವನ್ನ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೇ ವೇಳೆ ರಾಜ್ಯ ಕೃಷಿ ಸಚಿವ ಡಾ.ಸಂಜೀವ್ ಬಲ್ಯಾನ್ ಕೂಡ ಈ ಹೈಟೆಕ್ ವಾಹನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸದ್ಯ ಯೋಗೇಶ್ 5 ಎಕರೆಯಲ್ಲಿ ನೈಸರ್ಗಿಕ ಕೃಷಿ ಮಾಡುತ್ತಿದ್ದಾರೆ. ಮುಖ್ಯ ಬೆಳೆಯಾಗಿ ಕಬ್ಬು ಬೆಳೆಯುತ್ತಿದ್ದಾರೆ. ಜೊತೆಗೆ ಮನೆಗೆ ಬೇಕಾದ ಸಾಸಿವೆ, ಗೋಧಿ, ತರಕಾರಿ, ಹಣ್ಣಿನ ಗಿಡಗಳನ್ನೂ ನೆಟ್ಟಿದ್ದಾರೆ. ಜೊತೆಗೆ ತಾವೇ ಬೆಳೆದ ಕಬ್ಬಿನಿಂದ ಬೆಲ್ಲ ತಯಾರಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಯೋಗೇಶ್ ನೈಸರ್ಗಿಕ ಕೃಷಿಯಲ್ಲಿ ಎಕರೆಗೆ 30 ಟನ್ ಕಬ್ಬು ಬೆಳೆಯುತ್ತಿದ್ದಾರೆ