

ಬಜಾಜ್ ಆಟೋ ಕಂಪೆನಿಯ ಬಹುನಿರೀಕ್ಷಿತ ಕ್ಯೂಟ್ (Qute) ಕಾರು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಆಗಲಿದೆ. ವರದಿವೊಂದರ ಪ್ರಕಾರ ಕ್ಯೂಟ್ ಮುಂದಿನ ತಿಂಗಳಿಂದ ರಸ್ತೆಗಿಳಿಯುವ ಸಾಧ್ಯತೆ ಹೆಚ್ಚಿದೆ. ಬಜಾಜ್ ವತಿಯಿಂದ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಮೊದಲ ಕಾರು ಕ್ಯೂಟ್ ಆಗಿರಲಿದ್ದು, ಇದರ ಬೆಲೆ ಸುಮಾರು 1.70 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.


ಕಡಿಮೆ ವೆಚ್ಚ ಮತ್ತು ಅತೀ ಹೆಚ್ಚು ಮೈಲೇಜ್ ಹೊಂದಿರುವ ಕ್ಯೂಟ್ ಕಾರು ಈಗಾಗಲೇ ಯುರೋಪ್, ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾದಲ್ಲಿ ಬಿಡುಗಡೆಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಭಾರತದ ವಾಹನ ಉದ್ಯಮದಲ್ಲೂ ಹೊಸ ಸಂಚಲನ ಸೃಷ್ಟಿಸಲಿದೆ ಎನ್ನಲಾಗಿದೆ.


ಈ ಕಾರಿನಲ್ಲಿ ಬೈಕ್ ಮಾದರಿಯ 5-ಸ್ಪೀಡ್ ಯುನಿಟ್ ಗೇರ್ಬಾಕ್ಸ್ ಇರಲಿದ್ದು, 216.6 cc ಸಾಮರ್ಥ್ಯದ ಪೆಟ್ರೋಲ್ ಇಂಜಿನ್ ಅನ್ನು ಹೊಂದಿರಲಿದೆ. ಅಷ್ಟೇ ಅಲ್ಲದೆ CNG ಜೊತೆ LPG ಗ್ಯಾಸ್ ಇಂಧನ ಬಳಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. 13.2 PS ಎಂಜಿನ್ ಪವರ್ ಹೊಂದಿರುವ ಕ್ಯೂಟ್ ಕಾರು ಗಂಟೆಗೆ 70 ಕಿ.ಮೀ ಗರಿಷ್ಠ ವೇಗ ಮಿತಿ ಹೊಂದಿರಲಿದೆ.


ಕ್ಯೂಟ್ ಕಾರಿನ ಮತ್ತೊಂದು ವಿಶೇಷ ಎಂದರೆ ಆಕರ್ಷಕ ವಿನ್ಯಾಸ ಮತ್ತು ಮೈಲೇಜ್. ಹೌದು, ಒಂದು ಲೀಟರ್ ಪೆಟ್ರೋಲ್ಗೆಎ 36 ಕಿ.ಮೀ ಮೈಲೇಜ್ ನೀಡಲಿದ್ದು, ಭಾರತೀಯ ಗ್ರಾಹಕರನ್ನು ಆಕರ್ಷಿಸುವುದರಲ್ಲಿ ಸಂಶಯವಿಲ್ಲ ಎಂದು ಹೇಳಲಾಗುತ್ತಿದೆ.


2012 ರಲ್ಲಿ ದೆಹಲಿಯಲ್ಲಿ ನಡೆದ ಆಟೋ ಎಕ್ಸ್ಪೋನಲ್ಲಿ RE60 ಎಂಬ ಹೆಸರಿನಲ್ಲಿ ಬಜಾಜ್ ಕಂಪೆನಿಯು ಈ ಕಾರಿನ ಮೊದಲ ಮಾಡೆಲ್ ಅನ್ನು ಪ್ರದರ್ಶಿಸಿತ್ತು. ಇದೀಗ ಹೆಸರು ಬದಲಿಸಿ ಭಾರತೀಯ ಮಾರುಕಟ್ಟೆಗೆ ಬರಲಿದೆ.


ಈ ಹಿಂದೆಯೇ ಕ್ಯೂಟ್ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಬಜಾಜ್ ಕಂಪೆನಿ ತಯಾರಿ ನಡೆಸಿತ್ತು. ಆದರೆ ಕಾರಿನ ಮಾದರಿ ವಿರುದ್ಧ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಕಾರಿನ ಬಿಡುಗಡೆಗೆ ಅನುಮತಿ ದೊರೆಯಲು ವಿಳಂಬವಾಯಿತು ಎಂದು ಬಜಾಜ್ ಸಂಸ್ಥೆ ತಿಳಿಸಿದೆ.


ನಾಲ್ಕು ಮಂದಿ ಆರಾಮಾಗಿ ಕುಳಿತುಕೊಳ್ಳಬಹುದಾದ ಬಜಾಜ್ ಕ್ಯೂಟ್ ಕಾರಿನ ಎಕ್ಸ್ ಶೋರೂಂ ಬೆಲೆ 1 ಲಕ್ಷ 70 ಸಾವಿರ ಎಂದು ಅಂದಾಜಿಸಲಾಗಿದ್ದು, ಇದು ಭಾರತದ ಕಡಿಮೆ ಬೆಲೆಯ ಕಾರಾದ ಟಾಟಾ ನ್ಯಾನೊಗೆ ಪ್ರಮುಖ ಪ್ರತಿಸ್ಪರ್ಧಿಯಾಗುವ ನಿರೀಕ್ಷೆಯಿದೆ.