ಹಣ ಎಂಬುದು ವ್ಯಕ್ತಿಯ ಬದುಕಿನ ನಿರ್ವಹಣೆಯ ಅವಿಭಾಜ್ಯ ಅಂಗವಾಗಿದೆ. ಇದು ವ್ಯಕ್ತಿಯ ಅವಶ್ಯಕತೆಗಳನ್ನು ಪೂರೈಸುವುದಲ್ಲದೇ ಆಸೆ ಆಕಾಂಕ್ಷೆಗಳನ್ನು ಸಹ ನೆರವೇರಿಸುತ್ತದೆ. ಮೂಲಭೂತ ಅವಶ್ಯಕತೆಗಳಲ್ಲಿ ಒಂದು ಎನ್ನುವಷ್ಟರ ಮಟ್ಟಿಗೆ ಇರುವ ಹಣವು ಆರ್ಥಿಕ ಸಬಲತೆಗೂ ಪೂರಕವಾಗಿದೆ. ಆದರೆ ಕೆಲವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ ಎನ್ನುವಷ್ಟರ ಮಟ್ಟಿಗೆ ಶ್ರೀಮಂತರಾಗಿರುತ್ತಾರೆ.
ಕೆಲವರಿಗೆ ಕೆಲ ಬಣ್ಣದ ಪರ್ಸ್ ಗಳು ಅದೃಷ್ಟ, ಸಮೃದ್ಧಿಯನ್ನು ತಂದುಕೊಡುತ್ತದೆ. ಇನ್ನು ಕೆಲವು ಪರ್ಸ್ ಗಳು ನಷ್ಟವನ್ನು ತಂದು ಕೊಡುತ್ತದೆ ಎಂದು ಹೇಳುವ ಅಖಿಲ ಭಾರತ ಇನ್‌ಸ್ಟಿಟ್ಯೂಟ್ ಆಫ್ ಆಕ್ಟ್ಸ್ ನ ವಾಸ್ತು ಶಾಸ್ತ್ರಜ್ಞ ಡಿಂಪಲ್ ಕೌಶಲ್ ಅವರು ಅದೃಷ್ಟ ತಂದುಕೊಡುವ ಬಣ್ಣಗಳ ಪರ್ಸ್ ಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಈ ಬಣ್ಣದ ಪರ್ಸ್ ಗಳು ಅದೃಷ್ಟ, ಹಣ, ಯಶಸ್ಸು, ಬೆಳವಣಿಗೆ ಮತ್ತು ಸಮೃದ್ಧಿಯನ್ನು ನೀಡುತ್ತದೆ ಎಂದು ಕೂಡ ನಂಬಲಾಗಿದೆ.
ಹಸಿರು: ಹಸಿರು ಬಣ್ಣವು ಸಕಾರಾತ್ಮಕತೆ, ಜೀವಂತಿಕೆ ಮತ್ತು ಬೆಳವಣಿಗೆಯ ಸಂಕೇತವಾಗಿದೆ. ವೃದ್ದಿಯ ಜೊತೆಗೆ ಹಣವು ಹೆಚ್ಚಳವಾಗಿರಬೇಕೆಂದು ಇಚ್ಛಿಸಿದ್ದಲ್ಲಿ ಹಸಿರು ಬಣ್ಣದ ಪರ್ಸ್ ಸೂಕ್ತ ಆಯ್ಕೆಯಾಗಿದೆ. ಹಸಿರು ಬಣ್ಣವು ಬೆಳವಣಿಗೆ, ಹೊಸತನ, ಸಮೃದ್ದಿಯ ಮೂಲವಾಗಿದೆ. ಹಸಿರು ಬಣ್ಣದ ಪರ್ಸ್ ಬಳಸುವುದರಿಂದ ಸಮೃದ್ಧಿ ಮತ್ತು ಯಶಸ್ಸನ್ನು ಗಳಿಸಬಹುದು ಎಂದು ಹೇಳಲಾಗುತ್ತದೆ. ಇದು ಹೃದಯ ಚಕ್ರವನ್ನು ಪ್ರತಿನಿಧಿಸುವುದರಿಂದ ಪ್ರೀತಿ, ಸಹಾನುಭೂತಿ, ಸಮೃದ್ಧಿಯನ್ನು ನೀಡುತ್ತದೆ.
ಕೆಂಪು: ಇದು ಖ್ಯಾತಿ, ಹಣ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ. ಆದರೆ ಬೆಂಕಿಯ ಪ್ರತಿರೂಪ ಎಂದೆನಿಸಿಕೊಳ್ಳುವುದರಿಂದ ವೆಚ್ಚ ಹೆಚ್ಚಳವಾಗಲೂಬಹುದು. ಆದ್ದರಿಂದ ಸಂದರ್ಭೋಚಿತವಾಗಿ ಬಹಳ ಎಚ್ಚರದಿಂದ ಬಳಸಬೇಕಾಗುತ್ತದೆ. ಕೆಂಪು ಬಣ್ಣವು ಬಹಳ ಪ್ರಭಾವಶಾಲಿ ಬಣ್ಣವಾಗಿರುವುದರಿಂದ ಉತ್ಸಾಹ, ಶಕ್ತಿ ಮತ್ತು ಬಲದ ಪ್ರತೀಕವಾಗಿದೆ. ಇದು ಅದೃಷ್ಟ ತರುವುದರ ಜೊತೆಗೆ ಹಣಕಾಸಿನ ವಿಚಾರಗಳಲ್ಲಿ ಸಮೃದ್ಧಿ ತರುತ್ತದೆ ಎಂದು ನಂಬಲಾಗಿದೆ. ಇದು ಮೊದಲ ಚಕ್ರವನ್ನು ಪ್ರತಿನಿಧಿಸುವುದರಿಂದ ಸ್ಥಿರತೆ ಮತ್ತು ಸುರಕ್ಷತೆಯನ್ನು ನೀಡುತ್ತದೆ.