ವಾಸ್ತುಶಾಸ್ತ್ರ ಒಂದು ಪುರಾತನ ವಿಜ್ಞಾನ. ಮನೆಯ ನೆಮ್ಮದಿ, ಶೈಕ್ಷಣಿಕ ಬೆಳವಣಿಗೆ, ಸಂಪತ್ತು ವೃದ್ಧಿ, ಉತ್ತಮ ಸಂಬಂಧ ಹೀಗೆ ಹಲವುವಿಷಯಗಳಿಗೆ ಪರಿಹಾರ ನೀಡುವ ಶಾಸ್ತ್ರ. ಹಾಗಾಗಿ ಪ್ರತಿ ಮನೆಯನ್ನು ವಾಸ್ತುವಿನಿಂದ ಕೂಡಿರಲಿ ಎಂದು ಇಚ್ಛಿಸಿ ವಾಸ್ತುವಿನ ಪ್ರಕಾರವೇ ರೂಪಿಸಲಾಗುತ್ತದೆ. ಇದು ಮಾನಸಿಕ ನೆಮ್ಮದಿಯನ್ನು ತಂದು ಕೊಡುವುದರ ಜೊತೆಗೆ ಧನಾತ್ಮಕ ಅಂಶಗಳನ್ನು ವೃದ್ಧಸುತ್ತದೆ ಎಂಬ ನಂಬಿಕೆ ಇಂದಿಗೂ ಇದೆ.
ವಿದ್ಯಾಭ್ಯಾಸ ಮಕ್ಕಳ ಬೆಳವಣಿಗೆಗೆ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಮನೆಯಲ್ಲಿ ಅಧ್ಯಯನ ಕೋಣೆ ಇದ್ದೇ ಇರುತ್ತದೆ. ಅಧ್ಯಯನ ಕೊಠಡಿ ಎಂಬುದು ವಿದ್ಯಾಭ್ಯಾಸದ ಮೇಲೆ ಕೇಂದ್ರೀಕರಿಸುವ ಜಾಗ. ಅಧ್ಯಯನದ ವೇಳೆ ಯಾವ ದಿಕ್ಕಿಗೆ ಕುಳಿತುಕೊಳ್ಳಬೇಕು. ಅಧ್ಯಯನ ಕೋಣೆಯಲ್ಲಿ ವಿದ್ಯಾಭ್ಯಾಸ ಟೇಬಲ್ ಅನ್ನು ಯಾವ ದಿಕ್ಕಿಗೆ ಇಡಬೇಕು ಹಾಗೂ ಯಾವ ಬಣ್ಣ ಹಚ್ಚಬೇಕು ಎಂಬುದೆಲ್ಲವನ್ನು ನಿರ್ಣಯಿಸಲಾಗುತ್ತದೆ.
ಸಾಧಕರ ಚಿತ್ರ: ಸಾಧಕರು ಪ್ರತಿ ವ್ಯಕ್ತಿಯ ಜೀವನದಲ್ಲಿ ಸ್ಫೂರ್ತಿಯ ಚಿಲುಮೆಗಳಾಗಿರುತ್ತದೆ. ಅವರ ಬದುಕು, ಕಷ್ಟಗಳು, ನೋವಿನ ಕ್ಷಣಗಳು, ಅನುಭವಗಳು ಮತ್ತೊಬ್ಬರಿಗೆ ಗಟ್ಟಿತನವನ್ನು ಕಟ್ಟಿಕೊಡುತ್ತದೆ. ಶ್ರಮ ವಹಿಸಿದರೆ ಎಲ್ಲವೂ ಸಾಧ್ಯ ಎಂಬ ಮನೋಭಾವವನ್ನು ಹೆಚ್ಚಿಸಿ ಅಧ್ಯಯನದ ಕಡೆಗೆ ಹೆಚ್ಚು ನಿಗಾ ವಹಿಸುವಂತೆ ಮಾಡುತ್ತದೆ. ಹಾಗಾಗಿ ಸಾಧಕರ ಫೋಟೋಗಳು ಇದ್ದಷ್ಟು ಒಳ್ಳೆಯದು.