ಒನ್ಪ್ಲಸ್ ಕಂಪೆನಿ ಇತ್ತೀಚೆಗೆ ಒನ್ಪ್ಲಸ್ 11 5ಜಿ ಮೊಬೈಲ್ ಅನ್ನು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಿದೆ. ಇದು Qualcomm Snapdragon 8 Gen 2 ಪ್ರೊಸೆಸರ್, ಕ್ಯೂಹೆಚ್ಡಿ ಪ್ಲಸ್ ಅಮೋಲ್ಡ್ ಡಿಸ್ಪ್ಲೇ, ಮೂರನೇ ಜನ್ ಹ್ಯಾಸೆಲ್ಬ್ಲಾಡ್ ಕ್ಯಾಮೆರಾ, ಸೂಪರ್ಫಾಸ್ಟ್ ಚಾರ್ಜಿಂಗ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ನ ಆರಂಭಿಕ ಬೆಲೆ ರೂ.56,999 ಆಗಿದೆ.
ಒನ್ಪ್ಲಸ್ 11 5ಜಿ ಸ್ಮಾರ್ಟ್ಫೋನ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. 8ಜಿಬಿ ರ್ಯಾಮ್ ಮತ್ತು 128ಜಿಬಿ ಸ್ಟೋರೇಜ್ ರೂಪಾಂತರದ ಬೆಲೆ ರೂ 56,999 ಆಗಿದ್ದರೆ, 12ಜಿಬಿ ರ್ಯಾಮ್ ಮತ್ತು 256ಜಿಬಿ ಸ್ಟೋರೇಜ್ ರೂಪಾಂತರದ ಬೆಲೆ ರೂ 61,999 ಆಗಿದೆ.
ಇನ್ನು ಒನ್ಪ್ಲಸ್ ಕಂಪೆನಿಯ ಈ ಸ್ಮಾರ್ಟ್ಫೋನ್ಗಳು ಎಟರ್ನಲ್ ಗ್ರೀನ್ ಮತ್ತು ಟೈಟಾನ್ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ಗಳು ಇಂದಿನಿಂದ ಅಂದರೆ ಫೆಬ್ರವರಿ 14 ರಂದು ಖರೀದಿಗೆ ಲಭ್ಯವಾಗುತ್ತದೆ. ಇದನ್ನು ಅಮೆಜಾನ್ ಮತ್ತು ಒನ್ಪ್ಲಸ್ನ ಅಧಿಕೃತ ವೆಬ್ಸೈಟ್ನಲ್ಲಿ ಖರೀದಿಸಬಹುದು.
ರೂ.24,940 ಮೌಲ್ಯದ ಪ್ರಯೋಜನಗಳು ಒನ್ಪ್ಲಸ್ ಅಧಿಕೃತ ವೆಬ್ಸೈಟ್ನಲ್ಲಿ ಖರೀದಿದಾರರಿಗೆ ಲಭ್ಯವಿರುತ್ತವೆ. ರೆಡ್ ಕೇಬಲ್ ಕ್ಲಬ್ ಲಿಂಕ್ಡ್ ಡಿವೈಸ್ ಬೆನಿಫಿಟ್ ಅಡಿಯಲ್ಲಿ ರೂ.2,000 ರಿಯಾಯಿತಿ ಲಭ್ಯವಿದೆ. ಸ್ಕ್ರೀನ್ ಪ್ರೊಟೆಕ್ಷನ್ ಪ್ಲಾನ್ ರೂ. 99 ಬೆಲೆಯಲ್ಲಿ ಲಭ್ಯವಿದೆ. ಜಿಯೋ ಸಿಮ್ ಹೊಂದಿರುವವರು ರೂ 11,200 ಮೌಲ್ಯದ ಆಫರ್ಗಳನ್ನು ಪಡೆಯುತ್ತಾರೆ ಎಂದು ಒನ್ಪ್ಲಸ್ ಕಂಪೆನಿ ಹೇಳಿದೆ.
ಇನ್ನು ಆರು ತಿಂಗಳವರೆಗೆ ಗೂಗಲ್ ಒನ್ನಿಂದ 100ಜಿಬಿ ಕ್ಲೌಡ್ ಸ್ಟೋರೇಜ್ ಸೌಲಭ್ಯವನ್ನು ಪಡೆಯಬಹುದು. 6 ತಿಂಗಳ Spotify ಪ್ರೀಮಿಯಂ ಉಚಿತವಾಗಿದೆ. ರೆಡ್ ಕೇಬಲ್ ಲೈಫ್ ಪ್ಲಾನ್ ಉಚಿತವಾಗಿ ಈ ಸ್ಮಾರ್ಟ್ಫೋನ್ ಅನ್ನು ಖರೀದಿ ಮಾಡುವ ಮೂಲಕ ಪಡೆಯಬಹುದು. ಈ ಎಲ್ಲಾ ಕೊಡುಗೆಗಳು ಒನ್ಪ್ಲಸ್ ಕಂಪೆನಿ ಅಧಿಕೃತ ವೆಬ್ಸೈಟ್ನಲ್ಲಿ ಖರೀದಿದಾರರಿಗೆ ಲಭ್ಯವಿವೆ.
ಇನ್ನು ಒನ್ಪ್ಲಸ್ 11 5ಜಿ ಸ್ಮಾರ್ಟ್ಫೋನ್ನ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದು 120Hz ರಿಫ್ರೆಶ್ ದರದೊಂದಿಗೆ 6.7-ಇಂಚಿನ QHD+ AMOLED ಡಿಸ್ಪ್ಲೇಯನ್ನು ಒಳಗೊಂಡಿವೆ. ಇದು ಗೊರಿಲ್ಲಾ ಗ್ಲಾಸ್ ವಿಕ್ಟರ್ ರಕ್ಷಣೆಯನ್ನು ಪಡೆಯುತ್ತದೆ. Qualcomm Snapdragon 8+ Gen 2 ಪ್ರೊಸೆಸರ್ನಿಂದ ಈ ಸ್ಮಾರ್ಟ್ಫೋನ್ ರನ್ ಆಗುತ್ತದೆ.
ಕ್ಯಾಮೆರಾ ಫೀಚರ್ಸ್: ಈ ಸ್ಮಾರ್ಟ್ಫೋನ್ನಲ್ಲಿ 50 ಮೆಗಾಪಿಕ್ಸೆಲ್ ಸೋನಿ IMX890 ಪ್ರಾಥಮಿಕ ಕ್ಯಾಮೆರಾ, 48 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ, 32 ಮೆಗಾಪಿಕ್ಸೆಲ್ ಟೆಲಿಫೋಟೋ ಸಂವೇದಕಗಳೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇನ್ನು ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನುಅಳವಡಿಸಲಾಗಿದೆ.
ಇನ್ನು ಒನ್ಪ್ಲಸ್ 11 5ಜಿ ಸ್ಮಾರ್ಟ್ಫೋನ್ 5,000mAh ಸಾಮರ್ಥ್ಯ ಬ್ಯಾಟರಿಯನ್ನು ಹೊಂದಿದೆ ಮತ್ತು ಇದು 100W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಡಾಲ್ಬಿ ಆಟ್ಮೋಸ್ ಬೆಂಬಲದೊಂದಿಗೆ ಸ್ಟೀರಿಯೋ ಸ್ಪೀಕರ್ ಅನ್ನು ಹೊಂದಿದೆ.