ಯುಗಾದಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದೆ. ಹೊಸವರ್ಷದ ಆರಂಭಕ್ಕೆ ಎಲ್ಲರೂ ಸಜ್ಜಾಗಿದ್ದಾರೆ. ಈ ಯುಗಾದಿ ಹೊಸವರ್ಷದಲ್ಲಿ ನಿಮ್ಮ ದಿನಗಳು ಹೇಗಿರಲಿದೆ, ಯಾವ ರಾಶಿಗೆ ಶುಭ ಲಾಭ, ಯಾರಿಗೆ ಸಂಕಷ್ಟ ಎಂಬುದನ್ನ ತಿಳಿದುಕೊಳ್ಳುವ ತವಕ ಇರುತ್ತದೆ. ಜ್ಯೋತಿಷ್ಯದ ಪ್ರಕಾರ ಮಕರ ರಾಶಿಯವರಿಗೆ ಈ ವರ್ಷ ಹೇಗಿರಲಿದೆ ಎಂಬುದು ಇಲ್ಲಿದೆ.
ಸಾಡೆಸಾತಿನ ಕಡೆಯ ಪರ್ಯಾಯದಲ್ಲಿರುವ ನಿಮಗೆ ಚತುರ್ಥದ ಗುರು ಸಣ್ಣ ಆಶಾದಾಯಕವಾಗಲಿದ್ದಾನೆ. ದ್ವಿತೀಯದ ಶನಿಯ ಪ್ರಭಾವದಿಂದಾಗಿ ಕೌಟುಂಬಿಕ ಸುಖದ ಕೊರತೆ ದೇಶ ಅಥವಾ ಸ್ವಗ್ರಾಮ ಬಿಡುವ ಯೋಗ ಇದೆ.
ಹಿತ ಶತ್ರುಗಳ ಬಾಧೆ ಹೆಚ್ಚಾಗಲಿದೆ. ಪೂರ್ವಾರ್ಜಿತ ಸಂಪತ್ತುಗಳನ್ನು ಕಳೆದುಕೊಳ್ಳುವಿಕೆ. ಮುಖ ಭಾಗದಲ್ಲಿ ರೋಗರುಜಿನಗಳು ಹೆಚ್ಚಾಗಲಿದೆ. ಸಂಸಾರದಲ್ಲಿ ಸಮಸ್ಯೆ ಹಾಗೂ ಅನಾರೋಗ್ಯ ಬಾಧೆಯಿಂದ ಆಸ್ಪತ್ರೆ ಅಲೆದಾಟ ಹೆಚ್ಚಾಗುತ್ತದೆ.
ಕೆಟ್ಟ ಮಾತುಗಳನ್ನು ಆಡುವುದು ಹಾಗೂ ಕೇಳುವುದು ಅಪವಾದ ಭೀತಿ ಮುಂತಾದ ದುಷ್ಪಲಗಳಿವೆ. ಜೊತೆಗೆ ವ್ಯವಹಾರಸ್ತರಿಗೆ ನಷ್ಟಭೀತಿ, ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳಿಂದ ಕಿರಿಕಿರಿ ಆಗಲಿದ್ದು, ಯಾವುದೇ ಸಮಸ್ಯೆಗೆ ಪರಿಹಾರ ಇಲ್ಲವೇನೋ ಅನಿಸುತ್ತದೆ.
ಹಿನ್ನಡೆ, ಸ್ಥಾನಪಲ್ಲಟ ಮುಂತಾದ ದುಷ್ಪಲಗಳ ಕಾರಣದಿಂದ ಮಾನಸಿಕ ಆರೋಗ್ಯ ಸಹ ಹಾಳಾಗುತ್ತದೆ. ಜೀವನದಲ್ಲಿ ನೆಮ್ಮದಿ ಎನ್ನುವುದು ಇರುವುದಿಲ್ಲ. ಕಷ್ಟ ಮುಗಿಯುವ ಯಾವುದೇ ಸೂಚನೆ ಇಲ್ಲ.
ವಿಪರೀತ ಖರ್ಚು ವೆಚ್ಚಗಳಿಂದಾಗಿ ಎಷ್ಟು ಆದಾಯವಿದ್ದರೂ ಸಾಲದು ಎಂಬ ಪರಿಸ್ಥಿತಿ ನಿರ್ಮಾಣವಾಗಲಿದೆ. ಆದರೂ ಸುಖದ ಗುರುವಿನಿಂದಾಗಿ ನೂತನ ಗ್ರಹ ನಿರ್ಮಾಣ ಯೋಗವಿದೆ ಅಥವಾ ಭೂ ನಿವೇಶನ ಖರೀದಿ ಯೋಗವಿರುತ್ತದೆ.
ಬಂಧು ಬಾಂಧವರ ಗುರುಹಿರಿಯರ ಸಹಕಾರದಿಂದಾಗಿ ಆರ್ಥಿಕ ಮಟ್ಟದಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಬರುತ್ತದೆ. ಶತ್ರುಪೀಡೆ ನಿರಂತರವಿದ್ದರೂ ಅಂತಿಮ ಜಯ ನಿಮ್ಮದಾಗಿರುತ್ತದೆ ಹಾಗಾಗಿ ಯಾವುದೇ ಚಿಂತೆ ಬೇಡ.