ಮುಗಿಲೆತ್ತರಕ್ಕೆ ಮುಖ ಮಾಡಿಕೊಂಡಿರೋ ಬಂಡೆ.. ಕೆಳಗಡೆ ಕಲ್ಲು ಕೊರೆದು ನಿರ್ಮಿಸಿದ ಅದ್ಭುತ ಕೋಟೆ. ಮೇಲೇರಿ ನಿಂತ್ರೆ ಆಗುತ್ತೆ ಇಡೀ ಊರಿನ ದರ್ಶನ! (Badami Travel Plan) ಇಂತಹ ಅದ್ಭುತ ಅನುಭವ ಪಡೆಯೋಕೆ ಬಾಗಲಕೋಟೆಯ ಬಾದಾಮಿಗೆ (Badami) ಬರಲೇಬೇಕು. ಹೌದು, ಅದ್ಭುತ ಕೆತ್ತನೆ, ಗುಹೆ ಹೊಂದಿರೋ ಈ ಮೇಣ ಬಸದಿ ಜಗತ್ತಿನ ಅಪರೂಪದ ಸ್ಥಳಗಳಲ್ಲಿ ಒಂದು.
ಬಂಡೆಯ ಮೇಲೇರಿದರಂತೂ ಇಡೀ ಊರಿನ ದರ್ಶನ. ಅಲ್ಲಲಿ ಕಾಣೋ ಗುಡಿ ಗೋಪುರ, ವಿಶಾಲವಾಗಿ ಹರಡಿಕೊಂಡಿರುವ ಸರೋವರ ಕಣ್ಣಿಗೆ ಸೋಜಿಗವೆನಿಸುತ್ತೆ. ಇಲ್ಲಿನ ಕೆತ್ತನೆಗಳಂತೂ ಅದ್ಯಾವ ಕಾಲಕ್ಕೂ ಸರಿಸಾಟಿಯಾಗದ ಅದ್ಭುತ ತಾಂತ್ರಿಕತೆ ಹೊಂದಿದೆ. ಎತ್ತರದ ಈ ಬೆಟ್ಟವನ್ನ ಏರುತ್ತಲೇ ನೀಡುವ ಅನುಭವವೇ ಬೇರೆ. ಪ್ರವಾಸಿಗರಂತೂ ಬಾದಾಮಿಯ ಈ ಮೇಣ ಬಸದಿಯನ್ನ ಮಿಸ್ ಮಾಡದೇ ಕಣ್ತುಂಬಿಕೊಳ್ಳುತ್ತಾರೆ.
ನಿಸರ್ಗವೇ ನೀಡಿದ ಕೊಡುಗೆ
ಈಗಾಗಲೇ ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸ ಆರಂಭವಾಗಿದೆ. ಈ ಐತಿಹಾಸಿಕ ಪ್ರವಾಸಿ ತಾಣ ಬಾದಾಮಿ ಮೇಣ ಬಸದಿ ವೀಕ್ಷಿಸಲು ವಿದ್ಯಾರ್ಥಿಗಳ ದಂಡೇ ಆಗಮಿಸುತ್ತಿದೆ. ಹಲವೆಡೆ ಎಷ್ಟೋ ರಾಜರು ಸೈನಿಕರ ಸಹಾಯದಿಂದ ಕೋಟೆಗಳನ್ನ ಕಟ್ಟಿಸಿದರೆ ಬಾದಾಮಿಗೆ ನಿಸರ್ಗವೇ ಈ ಕೋಟೆಯನ್ನ ನೀಡಿದೆ. ಇಲ್ಲಿನ ಸಾಕಷ್ಟು ಸ್ತಂಭಗಳು ಸುಂದರವಾದ ಕೆತ್ತನೆಯನ್ನ ಹೊಂದಿದ್ದು ವಿಶೇಷವಾಗಿದೆ. ಇಲ್ಲಿ 45 ಗುಹಾಲಯಗಳೂ ಇದ್ದು, ಒಂದೊಂದು ಗುಹಾಲಯಕ್ಕೂ ಒಂದೊಂದು ಕಥೆಯಿದೆ.
ಇದನ್ನೂ ಓದಿ: Real Singham: ಶಾಲಾ ಮಕ್ಕಳ ಪ್ರವಾಸದ ಬಸ್ ತಳ್ಳಿದ PSI, ಇವರೇ ನೋಡಿ ರಿಯಲ್ ಸಿಂಗಂ ಎಂದ ವಿದ್ಯಾರ್ಥಿಗಳು
ಇಲ್ಲಿರುವ ಬಾಹುಬಲಿಯ ಮೂರ್ತಿಗೆ ದಕ್ಷಿಣ ಭಾರತದಲ್ಲೇ ಅತ್ಯಂತ ಪುರಾತನ ಮೂರ್ತಿಯೆಂಬ ಖ್ಯಾತಿ ಇದೆ. ಇಲ್ಲಿಗೆ ಬರುವ ಪ್ರವಾಸಿಗರು ಈ ಬಂಡೆಗಳನ್ನೇರುತ್ತ ಮೇಲೆ ಸಾಗಿ ಚಿಕ್ಕ ಚಿಕ್ಕ ಮೆಟ್ಟಿಲುಗಳನ್ನೇರುತ್ತ ಹೋದರೆ ವಿಶಾಲ ದಿಗಂತ, ಇಡೀ ಊರಿನ ಅಂದದ ದೃಶ್ಯ ನೋಡಿ ಆನಂದಿಸಬಹುದು. ಅಷ್ಟೇ ಎತ್ತರದಿಂದ ಅಗಸ್ತ್ಯ ತೀರ್ಥವನ್ನ ಕಣ್ತುಂಬಿಕೊಳ್ಳಬಹುದು.
ಪವಿತ್ರ ಅಗಸ್ತ್ಯ ತೀರ್ಥದ ಮಹಿಮೆ
5 ನೇ ಶತಮಾನದಲ್ಲಿ ನಿರ್ಮಿಸಲಾದ ಈ ಸರೋವರವನ್ನು ನೀರಿನ ಗುಣಪಡಿಸುವ ಶಕ್ತಿಯಿಂದಾಗಿ ಪವಿತ್ರವೆಂದು ಪರಿಗಣಿಸಲಾಗಿದೆ. ಅಗಸ್ತ್ಯ ತೀರ್ಥ ಪೂರ್ವ ದಂಡೆಗಳು ಭೂತನಾಥ ದೇವಾಲಯಗಳಿಂದ ಕೂಡಿದ್ದು, ಗುಹೆಗಳ ದೇವಾಲಯಗಳು ನೈಋತ್ಯ ಭಾಗದಲ್ಲಿ ಮತ್ತು ಕೋಟೆಯು ವಾಯುವ್ಯ ತುದಿಯಲ್ಲಿದೆ.
ಇದನ್ನೂ ಓದಿ: Tagaru Kalaga: ಬಾಗಲಕೋಟೆಯಲ್ಲಿ ಮೈನವಿರೇಳಿಸಿದ ಟಗರು ಕಾಳಗ! ವಿಡಿಯೋ ನೋಡಿ
ಒಟ್ಟಿನಲ್ಲಿ ಬಾದಾಮಿಯ ಈ ಕೋಟೆ ಅದ್ಭುತ ಅನುಭವ ನೀಡಬಲ್ಲ ಸುಂದರವಾದ ಕೆತ್ತನೆ ಹೊಂದಿರೋ ವಾಸ್ತುಶಿಲ್ಪಕ್ಕೂ ಹೆಸರುವಾಸಿ. ಇಂತಹ ಕೋಟೆಯನ್ನ ಜೀವಮಾನದಲ್ಲಿ ಒಮ್ಮೆಯಾದರೂ ಕಣ್ತುಂಬಿಕೊಳ್ಳಬೇಕು.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ