ವಿಜಯಪುರ: ಸಾವಿರಾರು ಜನರ ಸಮ್ಮುಖದಲ್ಲಿ ರಥೋತ್ಸವದ ಸಂಭ್ರಮ. ಎತ್ತಿನ ಬಂಡಿಯಲ್ಲಿ ಸಾಗಿ ಬಂತು ತೇರಿನ ಕಳಸ. ರಥೋತ್ಸವದುದ್ದಕ್ಕೂ ಅಭಿಮಾನ ಮೆರೆದ್ರು ನೋಡಿ ಪವರ್ ಸ್ಟಾರ್ ಫ್ಯಾನ್ಸ್ (Power Star Puneeth Rajkumar). ಈ ಎಲ್ಲ ದೃಶ್ಯ ಕಂಡು ಬಂದಿದ್ದು ವಿಜಯಪುರದ ಶ್ರೀ ಯಲ್ಲಾಲಿಂಗ ಮಹಾರಾಜರ (Yallalinga Maharaj Jatra) ಜಾತ್ರೋತ್ಸವದಲ್ಲಿ.
ತೇರಿನ ಕಳಸ ಮೆರವಣಿಗೆ
ಹೌದು, ಯಲ್ಲಾಲಿಂಗ ಮಹಾರಾಜರ ನೇತೃತ್ವದಲ್ಲಿ ನಡೆದ ಜಾತ್ರಾ ಸಂಭ್ರಮಕ್ಕೆ ಭಕ್ತರು ವಿಶೇಷ ಕಳೆ ತುಂಬಿದರು. ಕರಡಿ ಮಜಲು, ಡೊಳ್ಳು, ನಾನಾ ಕಲಾ ತಂಡಗಳು ಮೆರುಗು ನೀಡಿದವು. ಬೆಳಗ್ಗೆ ಸಾವಿರಾರು ಭಕ್ತರ ಮಧ್ಯೆ ದೇವರ ಮೂರ್ತಿಗೆ ವಿಶೇಷ ಪೂಜೆಗಳು ಜರುಗಿದವು. ಬಳಿಕ ಆಲಕೊಪ್ಪರ ಗ್ರಾಮದಿಂದ ತೇರಿನ ಮಿಣಿ ಮತ್ತು ಗುಂಡಕರಜಗಿ ಗ್ರಾಮದಿಂದ ತೇರಿನ ಕಳಸವನ್ನು ಗ್ರಾಮಕ್ಕೆ ತಂದು, ಅದ್ಧೂರಿಯ ಮೆರವಣಿಗೆ ನಡೆಯಿತು.
ಇದನ್ನೂ ಓದಿ: Vijayapura: ಇಡೀ ವರ್ಷ ಹೆಸರಿಲ್ಲದೇ ಬೆಳೆಯುವ ಮಕ್ಕಳು!
ಅಪ್ಪು ನೆನಪು
ಗ್ರಾಮದ ಬಂಜಾರ ಸಮಾಜದಿಂದ ತೇರಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ಮಠದ ಶ್ರೀಗಳಾದ ಯಲ್ಲಾಲಿಂಗ ಮಹಾರಾಜರು ಸೇರಿದಂತೆ ಗಣ್ಯ ವ್ಯಕ್ತಿಗಳಿಂದ ರಥೋತ್ಸವಕ್ಕೆ ಚಾಲನೆ ನೀಡಲಾಯ್ತು. ಇನ್ನು ರಥೋತ್ಸವದ ಸಂಭ್ರಮಲ್ಲಿ ಭಕ್ತರು ನಟ ಪುನೀತ್ ರಾಜ್ ಕುಮಾರ್ ಅವರನ್ನು ನೆನಪಿಸಿಕೊಂಡರು. ಅವರ ಅಭಿಮಾನಿಗಳು ಪವರ್ ಸ್ಟಾರ್ ಭಾವಚಿತ್ರವನ್ನು ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಇದೇ ವೇಳೆ ಜಾತ್ರೆಗೆ ಆಗಮಿಸಿದ್ದ ನಾನಾ ಜಿಲ್ಲೆಯ ಭಕ್ತರು ಉತ್ತತ್ತಿ, ಬಾಳೆಹಣ್ಣು ರಥೋತ್ಸವಕ್ಕೆ ಎಸೆದು ಭಕ್ತಿ ಸಮರ್ಪಿಸಿದರು.
ಇದನ್ನೂ ಓದಿ: Success Story: 40 ಸಾವಿರ ಖರ್ಚು, ಒಂದೂವರೆ ಲಕ್ಷ ಆದಾಯ! ಜೇಬು ತುಂಬಿಸುತ್ತಿದೆ ಈ ಬೆಳೆ
ವಿವಿಧ ಧಾರ್ಮಿಕ ಕಾರ್ಯಕ್ರಮ
ಇನ್ನು ದೇವಿಗೆ ಉಡಿ ತುಂಬುವ ಕಾರ್ಯಕ್ರಮ, ಪುರಾಣ ಪ್ರವಚನ, ಅಗ್ನಿ ಪೂಜೆ, ಪುರಾಣ ಮಂಗಲೋತ್ಸವ, ಡೊಳ್ಳಿನ ಹಾಡಿಕೆ, ಪಂಚಮುಖ ಪಲ್ಲಕ್ಕಿಗಳ ಮಹಾಪೂಜೆ, ಶ್ರೀಕೃಷ್ಣ ಪಾರಿಜಾತ, ಮಹಾರಥೋತ್ಸವ ಸೇರಿದಂತೆ ಹಲವು ದಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಒಟ್ಟಿನಲ್ಲಿ ಎರಡು ದಿನಗಳ ಕಾಲ ನಡೆದ ಶ್ರೀಯಲ್ಲಾಲಿಂಗ ಮಹಾರಾಜರ ಜಾತ್ರೆ ಅದ್ದೂರಿಯೊಂದಿಗೆ ಸಂಪನ್ನಗೊಂಡಿತು.
ವರದಿ: ಪ್ರಶಾಂತ ಹೂಗಾರ್, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ