• Home
  • »
  • News
  • »
  • vijayapura
  • »
  • Hanuman Temple Yalagureshwara: ಜೈ ಆಂಜನೇಯ ಯಲಗೂರೇಶ್ವರ! 350 ವರ್ಷದ ಹಳೆಯ ದೇಗುಲ ಹೀಗಿದೆ ನೋಡಿ

Hanuman Temple Yalagureshwara: ಜೈ ಆಂಜನೇಯ ಯಲಗೂರೇಶ್ವರ! 350 ವರ್ಷದ ಹಳೆಯ ದೇಗುಲ ಹೀಗಿದೆ ನೋಡಿ

ಯಲಗೂರೇಶ್ವರನ ಸನ್ನಿಧಿ

"ಯಲಗೂರೇಶ್ವರನ ಸನ್ನಿಧಿ"

ಊರಿಗೊಂದು ಹನುಮ ದೇಗುಲ ಇರುವುದು ಸಾಮಾನ್ಯ. ಆದರೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನಲ್ಲಿ ಏಳು ಗ್ರಾಮಗಳಿಗೆ ಒಬ್ಬನೇ ಅಧಿಪತಿಯಾಗಿ ಹನುಮ ದೇವರು ನೆಲೆ ನಿಂತಿದ್ದಾರೆ. ಹಾಗಾಗಿ ಈ ಗ್ರಾಮವನ್ನು ಯಲಗೂರು ಅಂತಲೇ ಕರೆಯುತ್ತಾರೆ.

  • Share this:

    ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಯಲಗೂರದ ಯಲಗೂರೇಶ್ವರ ದೇವಸ್ಥಾನಕ್ಕೆ (Yalagureshwara Hanuman Temple) ಸರಿಸುಮಾರು 350 ವರ್ಷಗಳ ಇತಿಹಾಸವಿದೆ. ಭಕ್ತರ ಕಷ್ಟಗಳನ್ನ ಪರಿಹರಿಸುವ ಪವನ ಸುತ, ಯಲಗೂರದ ಹನುಮಪ್ಪ ‘ಏಳು ಗ್ರಾಮಗಳ ಒಡೆಯ' ಅಂತಲೇ ಪ್ರಸಿದ್ಧಿ. ಈ ಭಾಗದ ಯಲಗೂರ, ಚಂದ್ರಗಿರಿ, ಅರಳಲದಿನ್ನಿ, ಕಾಶಿನಕುಂಟಿ, ಬೂದಿಹಾಳ, ನಾಗಸಂಪಿಗೆ, ಮಸೂತಿ ಹೀಗೆ ಏಳು ಗ್ರಾಮಗಳಿಗೆ ಯಲಗೂರಪ್ಪನೇ ಒಡೆಯನಾಗಿದ್ದಾನೆ. ಸಾಮಾನ್ಯವಾಗಿ ಊರಿಗೊಂದು ಆಂಜನೇಯನ ದೇವಾಲಯವಿರುತ್ತದೆ. ಆದರೆ, ಇಲ್ಲಿ ಏಳೂ ಊರುಗಳಿಗೆ ಒಬ್ಬನೇ ಆಂಜನೇಯ ಎಂಬುದೇ ವಿಶೇಷ. ಶ್ರೀರಾಮನ ಆಜ್ಞೆಯಂತೆ ಕೃಷ್ಣೆಯ ತೀರದ ವಿಜಯಪುರದ (Vijayapura) ಯಲಗೂರ ಗ್ರಾಮದಲ್ಲಿ ಹನುಮಂತ ನೆಲೆ ನಿಂತಿದ್ದಾನೆ ಅನ್ನೋ ಐತಿಹ್ಯವಿದೆ. ಪೇಶ್ವೆ ಮತ್ತು ಆದಿಲ್ ಶಾಹಿ ಕಾಲದಲ್ಲಿ ಈ ದೇವಸ್ಥಾನ ಜೀರ್ಣೋದ್ಧಾರಗೊಂಡಿದೆ.


    ದೇವಸ್ಥಾನದ ವಿಶಾಲವಾದ ಪ್ರಾಂಗಣದ ಕಂಬದಲ್ಲಿ ಆಂಜನೇಯನ ಮೂರ್ತಿಯನ್ನ ಕೆತ್ತಲಾಗಿದೆ, ದೇವಾಲಯದ ಆವರಣದಲ್ಲಿ ಎರಡು ಬದಿಗೆ ಆನೆಗಳ ಮೂರ್ತಿಗಳಿವೆ. ಮತ್ತು ದೇವಸ್ಥಾನ ಪ್ರವೇಶಿಸುವ ಮುನ್ನ ಮುಖ್ಯ ಗೋಡೆಯ ಮೇಲೆ ಸಂಜೀವಿನಿ ಪರ್ವತವನ್ನ ಎತ್ತಿ ಹಿಡಿದಿರುವ ಆಂಜನೇಯನನ್ನ ನೀವಿಲ್ಲಿ ಕಾಣಬಹುದಾಗಿದೆ.


    ಹನುಮ ಕೀರ್ತನೆಯನ್ನ ಬಿಂಬಿಸುವ ಕಲಾಕೃತಿಗಳು
    ಇನ್ನೊಂದೆಡೆ ಮಹಾದ್ವಾರದ ಮುಂದೆ ಎರಡು ಪುರಾತನ ವೀರಗಲ್ಲುಗಳಿವೆ. ಗರ್ಭಗುಡಿಯಲ್ಲಿ ಸುಮಾರು 7 ಅಡಿ ಎತ್ತರದ ಆಂಜನೇಯನ ವಿಗ್ರಹ ದೇಗುಲದ ಇತಿಹಾಸವನ್ನು ತಿಳಿಸುತ್ತಿದೆ. ಪ್ರಾಂಗಣದ ಬಲಭಾಗದಲ್ಲಿ ಸೂರ್ಯನಾರಾಯಣನ ಚಿಕ್ಕ ದೇವಾಲಯ, ಹಿಂಬದಿಯಲ್ಲಿ ತುಳಸಿ ಬೃಂದಾವನ ಇದೆ. ಗರ್ಭ ಗುಡಿಯ ಸುತ್ತಲು ಗೋಡೆಯನ್ನು ಆವರಿಸಿರುವ ವರ್ಣರಂಜಿತ ಹನುಮ ಕೀರ್ತನೆಯನ್ನ ಬಿಂಬಿಸುವ ಕಲಾಕೃತಿಗಳು, ರಾಮಾಯಣ ಕಾಲಘಟ್ಟದ ಸನ್ನಿವೇಶದ ಚಿತ್ರಗಳು ಕಣ್ಮನ ಸೆಳೆಯುತ್ತವೆ.


    ಪ್ರತಿದಿನ ಮೂರು ಬಾರಿ ವಿಶೇಷ ಪೂಜೆ
    ಇಲ್ಲಿ ಯಲಗೂರೇಶನಿಗೆ ಪ್ರತಿ ದಿನ ಮೂರು ಬಾರಿ ವಿಶೇಷ ಪೂಜೆ ನಡೆಯುತ್ತದೆ. ನಸುಕಿನಲ್ಲಿ ಕಾಕಡಾರತಿ, ನಂತರ ಕೃಷ್ಣಾ ನದಿ ನೀರಿನಿಂದ ಅಭಿಷೇಕ ಹಾಗೂ ಮಹಾಪೂಜೆ ಮತ್ತು ಸಂಜೆ ಧೂಪಾರತಿ ಜರುಗುತ್ತದೆ. ಇದಲ್ಲದೆ ಪ್ರತಿ ಶನಿವಾರದಂದು ವಿವಿಧ ಬಗೆಯ ಪೂಜಾ ಕೈಂಕರ್ಯಗಳು ಜರುಗುತ್ತವೆ.


    ಇದನ್ನೂ ಓದಿ: Vijayapura: ಮಳೆಗಾಗಿ 5 ದಿನ ನಿರಂತರ ಭಜನೆ! ಕೊನೆಗೂ ಮಳೆ ಬಂತಾ? ವಿಡಿಯೋ ನೋಡಿ


    ಸಂಜೆ ಉತ್ಸವ ಮೂರ್ತಿಯನ್ನ ಪಲ್ಲಕ್ಕಿಯಲ್ಲಿಟ್ಟು ಕೃಷ್ಣಾ ನದಿಯಲ್ಲಿ ಜಲಾಭಿಷೇಕವನ್ನ ಮಾಡಲಾಗುತ್ತದೆ. ಬಳಿಕ ದೇಗುಲದ ಪ್ರಾಂಗಣದಲ್ಲಿ ಪಲ್ಲಕ್ಕಿ ಕರೆ ತರುವ ವೇಳೆ ಸಣ್ಣ ಮಕ್ಕಳಿಂದ ವಯೋವೃದ್ಧರವರೆಗೂ ಉದ್ದಲಾಗಿ ಮಲಗಿ ನಮಸ್ಕರಿಸುತ್ತಾರೆ. ಈ ವೇಳೆ ಭಕ್ತರ ಮೇಲೆಯೇ ಪಲ್ಲಕ್ಕಿಯನ್ನ ಹೊತ್ತು ಸಾಗಲಾದರೂ ಯಾರೊಬ್ಬರಿಗೂ ನೋವುಟಾಂಗುವುದಿಲ್ಲ. ಇದನ್ನೆ ಭಕ್ತರು ಪವಾಡವಾಗಿ ನಂಬುತ್ತಾರೆ.


    Yalogooreshwara
    ಯಲಗೂರೇಶ್ವರನ ಸನ್ನಿಧಿಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


    ಇದನ್ನೂ ಓದಿ: Kittur Rani Chennamma Zoo: ಬೆಳಗಾವಿ ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಹುಲಿ ಸಫಾರಿ! ವಿಡಿಯೋ ನೋಡಿ


    ಖುದ್ದು ಶ್ರೀರಾಮನೇ ಸೀತಾ ಮಾತೆಯ ಅನ್ವೇಷಣೆ ಸಮಯದಲ್ಲಿ ಲಂಕೆಗೆ ಹೋಗುವ ವೇಳೆ ಇಲ್ಲಿಗೆ ಆಗಮಿಸಿದ್ದರು ಅನ್ನೋ ಐತಿಹ್ಯವಿದೆ. ಹೀಗಾಗಿ ಇಲ್ಲಿ ಪ್ರತಿ ವರ್ಷವೂ ರಾಮನವಮಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಮಹಿಳೆಯರು ಶ್ರದ್ದಾ ಭಕ್ತಿಯಿಂದ ರಾಮನ ಮೂರ್ತಿಯನ್ನ ತೊಟ್ಟಿಲಿಗೆ ಹಾಕಿ ಜೋಗುಳ ಹಾಡುವ ಮೂಲಕ ತೊಟ್ಟಿಲೋತ್ಸವ ಆಚರಿಸುತ್ತಾರೆ. ಅಲ್ಲದೇ ಗ್ರಾಮದ ಜನರು ಜಾತಿ ಮತ ಬೇಧವಿಲ್ಲದೇ ಯಲಗೂರೇಶ್ವರನ ಮುಂದೆ ಒಂದಾಗಿ ತಮ್ಮ ಸೇವೆ ಸಲ್ಲಿಸುತ್ತಿರುವುದು ಇಲ್ಲಿನ ವಿಶೇಷವಾಗಿದೆ.


    ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ವಿಜಯಪುರ

    Published by:guruganesh bhat
    First published: