Vijayapura: ಸೈನಿಕನ ಸೈಕಲ್ ಯಾತ್ರೆ! ಬೆಂಗಳೂರು ಟು ಕಾರ್ಗಿಲ್ ಪಯಣ ಹೀಗಿತ್ತು ನೋಡಿ

ಭಾರತೀಯ ಸೇನೆಯ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ನಿವೃತ್ತ ಸೈನಿಕನೋರ್ವ ಸೈಕಲ್ ಯಾತ್ರೆ ನಡೆಸಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಿಂದ ಹಿಡಿದು ಕಾರ್ಗಿಲ್ ವರೆಗೆ ಸೈಕಲ್ ಯಾತ್ರೆ ನಡೆಸಿದ್ದಾರೆ. ಈ ಮೂಲಕ ಸೇನೆಗೆ ಯುವ ಜನತೆ ಸೇರುವಂತಾಗಲು ಹುರಿದುಂಬಿಸಿದ್ದಾರೆ.

ಬೆಂಗಳೂರು ಟು ಕಾರ್ಗಿಲ್

"ಬೆಂಗಳೂರು ಟು ಕಾರ್ಗಿಲ್"

 • Share this:
  ಹೀಗೆ ನಗುಮೊಗದಲ್ಲೇ ಸೈಕಲ್ ತುಳಿಯುತ್ತಾ ಒಂಟಿಯಾಗಿ ಸಾಗ್ತಾ ಇರೋ ಈ ವ್ಯಕ್ತಿ ನಮ್ಮ ದೇಶದ ಹೆಮ್ಮೆಯ ಸೈನಿಕ… ಈತ ದೇಶವನ್ನು ಜೋಪಾನ ಮಾಡೋ ಕೆಲ್ಸ ಮಾತ್ರ ಮಾಡ್ತಿಲ್ಲ, ಜೊತೆಗೆ ಯುವ ಜನರನ್ನ ಸೈನ್ಯಕ್ಕೆ (Indian Army) ಸೇರುವಂತೆ ಪ್ರೋತ್ಸಾಹಿಸೋಕೆ ವಿಶಿಷ್ಟ ದಾರಿಯನ್ನೂ ಹುಡುಕಿದ್ದಾರೆ. ಬೆಂಗಳೂರು ಮೂಲದ ಯೋಧ ಭರತ್ ತಮ್ಮ ಸೈಕಲ್ ಮೂಲಕ ಬೆಂಗಳೂರಿನಿಂದ ಕಾರ್ಗಿಲ್ ತನಕ ಹೋಗಿ ಬಂದಿದ್ದಾರೆ. ಅಷ್ಟೇ ಅಲ್ಲದೆ, ಕಾರ್ಗಿಲ್​ಗೆ (Kargil) ತೆರಳಿ ವಾಪಸ್ ಬರಬೇಕಾದರೆ ಅಲ್ಲಿನ ಮಣ್ಣನ್ನು ಜೋಪಾನವಾಗಿ ಕಟ್ಟಿಕೊಂಡು ಬಂದಿದ್ದಾರೆ. ಜೊತೆಗೆ, ಸೈನ್ಯ ಸೇರಲು ಇಷ್ಟ ಇರೋ ಯುವಕ ಯುವತಿಯರಿಗೆ ಉಚಿತ ತರಬೇತಿ ಕೇಂದ್ರ ಓಪನ್ ಮಾಡ್ಬೇಕು ಅನ್ನೋ ಆಸೆ ಅವರದ್ದಾಗಿದೆ.

  ಭಾರತೀಯ ಸೇನೆಯಲ್ಲಿ 15 ವರ್ಷಕ್ಕೂ ಹೆಚ್ಚು ಸಮಯ ಭರತ್ ನಾಯ್ಡು ಸೇವೆ ಸಲ್ಲಿಸಿದ್ದಾರೆ. ತಮ್ಮ ತಂದೆಯ ಸ್ಫೂರ್ತಿಯಿಂದ ಸೇನೆ ಸೇರಿದ ಇವರು ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಸೇನೆಯಲ್ಲಿ ಸೇವೆ ಸಲ್ಲಿಸೋಕೆ ಅನೇಕ ಯುವಕ ಯುವತಿಯರು ಹೆದರುತ್ತಾರೆ. ಅಂತಹವರಿಗೆ ಧೈರ್ಯ ತುಂಬುವ ಕೆಲಸವನ್ನೂ ಭರತ್ ಮಾಡುತ್ತಾ ಬಂದಿದ್ದಾರೆ.

  ಸೇನೆ ಬಗ್ಗೆ ಭಯ ಬೇಡ
  ಸಾಮಾನ್ಯವಾಗಿ ಸೇನೆಗೆ ಸೇರುವ ಯುವ ಜನತೆಯಲ್ಲಿ ಹಾಗೂ ಅವರ ಪೋಷಕರಲ್ಲಿ ಒಂದು ಬಗೆಯ ಆತಂಕವಿರುತ್ತದೆ. ಆದರೆ, ಅಂತಹ ಆತಂಕವನ್ನೂ ದೂರ ಮಾಡುವಲ್ಲಿಯೂ ಭರತ್ ಸೈಕಲ್ ಯಾತ್ರೆ ಸಾಗಿದೆ. ‘‘ಸೇನೆ ಅಂದರೆ ಎಲ್ಲರೂ ಅಂದುಕೊಂಡಂತೆ ಅಷ್ಟೆಲ್ಲಾ ರಿಸ್ಕ್ ಇರೋ ಕೆಲಸವಲ್ಲ. ಸೇನೆ ಬಗ್ಗೆ ಜನರಿಗೆ ಹೆಚ್ಚು ಅರಿವು ಇಲ್ಲದೇ ಇರೋದರಿಂದ ಎಲ್ರೂ ಹಾಗಂದ್ಕೊಂಡಿದಾರೆ ಅಷ್ಟೇ‘‘ ಎನ್ನುತ್ತಾರೆ ಭರತ್.

  ಬೆಂಗಳೂರು ಟು ಕಾರ್ಗಿಲ್
  ಭರತ್ ಸೈಕಲ್ ಯಾತ್ರೆಯು ರಾಜ್ಯ ರಾಜಧಾನಿ ಬೆಂಗಳೂರಿನಿಂದ ಮಾರ್ಚ್ 9ಕ್ಕೆ ಹೊರಟು ನೇರವಾಗಿ ಹೋಗಿ ತಲುಪಿದ್ದು ಕಾರ್ಗಿಲ್ ಗೆ. ಚಿತ್ರದುರ್ಗ, ರಾಯಚೂರು, ಬೀದರ್ ಮೂಲಕ ಮಹಾರಾಷ್ಟ್ರ, ಝಾನ್ಸಿ, ಗ್ವಾಲಿಯರ್, ಮಥುರಾ, ಆಗ್ರಾ, ಉದ್ಧಮಪುರ, ಜಮ್ಮು, ಶ್ರೀನಗರ ಬಾಲಟಾಲ್ ಸೋನಾ ಮಾರ್ಗ ಮೂಲಕ ಕಾರ್ಗಿಲ್ ಯುದ್ದಭೂಮಿಯನ್ನ ತಲುಪಿದರು. ಆ ವೀರ ಭೂಮಿಯಿಂದ ಮಣ್ಣನ್ನು ತಗೊಂಡು ಅದರ ಸಮೇತ ಸೈಕಲ್ ಮೂಲಕವೇ ತಮ್ಮೂರಿಗೆ ವಾಪಸ್ ಬರುತ್ತಿದ್ದಾರೆ.

  ಹೋದಲ್ಲೆಲ್ಲ ಭವ್ಯ ಸ್ವಾಗತ
  ನಿವೃತ್ತ ಸೈನಿಕ ಭರತ್ ಸೈಕಲ್ ಯಾತ್ರೆ ಮುಗಿಸಿ ಅದೇ ಸೈಕಲ್ ನಲ್ಲಿ ವಾಪಸ್ ಆಗುತ್ತಿದ್ದಂತೆ ಹೋದ ಕಡೆಯೆಲ್ಲಾ ಜನ ಖುಷಿಯಿಂದ ಇವರನ್ನು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಳ್ಳುತ್ತಿದ್ದಾರೆ. ಇವರ ಸಾಹಸ, ಶೌರ್ಯ ಮೆಚ್ಚಿ ವಿಜಯಪುರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಮ್ಮ ಕಚೇರಿಗೆ ಕರೆದು ಸನ್ಮಾನ ಮಾಡಿದ್ದಾರೆ.

  ಕನ್ನಡಿಗ ಯೋಧರ ಭೇಟಿ
  ನಿವೃತ್ತ ಸೈನಿಕನ ಈ ಸೈಕಲ್ ಯಾತ್ರೆ ವೇಳೆ ಆರ್ಮಿ, ಬಿ.ಎಸ್.ಎಫ್, ಸಿ.ಐ.ಎಸ್.ಎಫ್, ಸಿ.ಆರ್.ಪಿ.ಎಫ್, ಎಸ್.ಎಸ್.ಬಿ, ಇಂಡಿಯನ್ ನೇವಿ ಸೇರಿದಂತೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಕನ್ನಡಿಗ ಸೈನಿಕರನ್ನ ಭರತ್ ಭೇಟಿಯಾದರು. ಕಿರಿದಾದ ರಸ್ತೆ, ಬೆಟ್ಟ-ಗುಡ್ಡ, ಮಳೆ-ಗಾಳಿ ಹಿಮಪಾತ ಇದ್ಯಾವುದಕ್ಕೂ ಹೆದರದೆ ಸೈಕಲ್ ನಲ್ಲಿಯೇ ಅಮರನಾಥ ಯಾತ್ರೆಯನ್ನು ಸಹ ಮುಗಿಸಿದರು.

  ಇದನ್ನೂ ಓದಿ: Krishna River Origin Video: ಕೃಷ್ಣಾ ನದಿ ಉಗಮದ ಅಪರೂಪದ ವಿಡಿಯೋ ಇಲ್ಲಿದೆ, ಕಣ್ತುಂಬಿಸಿಕೊಳ್ಳಿ!

  ಹೀಗಿತ್ತು ಸೈಕಲ್ ಜರ್ನಿ
  ದಿನಾ ಬೆಳಗಿನ ಜಾವ 4 ಗಂಟೆಗೆ ಭರತ್ ಸೈಕಲ್ ಯಾತ್ರೆಯನ್ನ ಆರಂಭಿಸಿ ಸುಮಾರು 6 ಗಂಟೆಗಳ ಕಾಲ ಸೈಕಲ್ ತುಳಿಯುತ್ತಾರೆ. ಊರುಗಳಿಲ್ಲದೇ ಬರೀ ಕಾಡು ದಾರಿ ಇರುವ ಕಡೆ ಅನೇಕ ಸಲ ದಿನಕ್ಕೆ ನೂರು ಕಿಲೋಮೀಟರ್ ಸೈಕಲ್ ತುಳಿದಿದ್ದಾರಂತೆ.ನಡುವೆ ಸುಸ್ತಾದ್ರೆ ರಸ್ತೆಯ ಪಕ್ಕದ ಉದ್ಯಾನವನ, ದೇವಸ್ಥಾನ, ಆಶ್ರಮಗಳಲ್ಲಿ ಸ್ವಲ್ಪ ರೆಸ್ಟ್ ಮಾಡಿ ಮುಂದೆ ಹೋಗುತ್ತಿದ್ದರು.

  ಇದನ್ನೂ ಓದಿ: Belagavi: ಆಸ್ಪತ್ರೆ ಎಂದರೆ ಮಕ್ಕಳು ಖುಷ್! ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಏನಿದು ಜಾದೂ?

  ಒಟ್ಟಿನಲ್ಲಿ ನಿವೃತ್ತಿ ಆದ ನಂತರ ನೆಮ್ಮದಿಯ ಜೀವನ ನಡೆಸೋ ಜನರ ನಡುವೆ ಸೇವೆ ಸಲ್ಲಿಸಿದ ಸೇನೆಗೆ ಮತ್ತಷ್ಟು ಯುವಜನರನ್ನು ಸೇರಿಸೋ ಪಣ ತೊಟ್ಟು ಅದಕ್ಕಾಗಿ ಶ್ರಮಿಸುತ್ತಿರೋ ಇವರ ಕೆಲಸಕ್ಕೆ ಹ್ಯಾಟ್ಸಾಪ್ ಎನ್ನಲೇಬೇಕು.

  ವರದಿ: ಪ್ರಶಾಂತ್ ಹೂಗಾರ್, ವಿಜಯಪುರ
  Published by:guruganesh bhat
  First published: