Vijayapura: ಬದುಕು ಬದಲಿಸಿದ ಕೊರೊನಾ! ಲಕ್ಷ ಲಕ್ಷ ಸಂಪಾದಿಸುತ್ತಿರುವ ವಿಜಯಪುರ ಯುವಕ

ಬೆಂಗಳೂರಿನಲ್ಲಿ ತಿಂಗಳಿಗೆ 40 ಸಾವಿರ ಸಂಬಳ ತೆಗೆದುಕೊಳ್ಳುತ್ತಿದ್ದ ಯುವಕನೋರ್ವ ವರ್ಷಕ್ಕೆ 10ರಿಂದ 14 ಲಕ್ಷ ಗಳಿಸುತ್ತಿದ್ದಾರೆ. ಅದೂ ಸ್ವಂತ ಊರಲ್ಲಿ! ಅದು ಹೇಗೆ?

ಕುತೂಹಲಕರ

ಕುತೂಹಲಕರ ವರದಿ ಓದಿ

 • Share this:
  ವಿಜಯಪುರ: ಶ್ರದ್ಧೆಯಿಂದ ಮಾಡುವ ಕೆಲಸ ಯಾವುದಾದರೇನು..? ಅದರ ಪ್ರತಿಫಲ ಖಂಡಿತಾ ಅಷ್ಟೇ ಉತ್ತಮವಾಗಿರುತ್ತದೆ ಅನ್ನೋದಕ್ಕೆ ವಿಜಯಪುರದ (Vijayapura) ಎಂಬಿಎ ಪದವೀಧರನೊಬ್ಬ ಸಾಕ್ಷಿಯಾಗಿದ್ದಾನೆ. ಕೋವಿಡ್ ಸಮಯದಲ್ಲಿ ಬೆಂಗಳೂರಿನಿಂದ ಕೆಲಸ ಬಿಟ್ಟು ಊರಿಗೆ ತೆರಳಿದ್ದ ಯುವಕ ಕಂಡುಕೊಂಡ ವಿಭಿನ್ನ ದಾರಿಯೇ (Self Employment) ಇದೀಗ ಆತನ ಬದುಕಿಗೊಂದು ಒಳ್ಳೆ ದಾರಿಯನ್ನು ತೋರಿಸಿದೆ.  ಅಲ್ಲದೇ ಆರ್ಥಿಕವಾಗಿಯೂ ಆ ಯುವಕನನ್ನು ಸಶಕ್ತನನ್ನಾಗಿಸಿದೆ. ಹೆಚ್​ಆರ್ ಆಗಿದ್ದ ಯುವಕ ಇದೀಗ ಸ್ವಂತ ಉದ್ಯಮಿ, ಸಾಧಕ. ಅಷ್ಟಕ್ಕೂ ಆ ಯುವಕ ಕಂಡುಕೊಂಡ ಉದ್ಯಮವೇ ಆಡು ಸಾಕಾಣಿಕೆ (Goat Farming) ಈ ವಿಶಿಷ್ಟ ಸುದ್ದಿ ನೋಡಿ.

  ಹೆಚ್ಆರ್ ನಿಂದ ಕುರಿಗಾಹಿವರೆಗೆ
  ಈ ರೀತಿಯಾಗಿ ಆಡು ಸಾಕಾಣಿಕೆ ಮೂಲಕ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿರುವ ಯುವಕನ ಹೆಸರು ಸಾಯಿನಾಥ್ ಶೇರಖಾನೆ. ವಿಜಯಪುರ ನಗರದ ಗ್ಯಾಂಗಬಾವಡಿ ಗ್ರಾಮದವರು. ಎಂಬಿಎ ಪದವೀಧರನಾದ ಸಾಯಿನಾಥ್ ಶೇರಖಾನೆ ಅರ್ಹವಾಗಿಯೇ ಬೆಂಗಳೂರಿನ ಕಾರ್ಪೊರೇಟ್ ಕಂಪೆನಿಯೊಂದರಲ್ಲಿ ಹೆಚ್ಆರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ತಿಂಗಳಿಗೆ ₹40ಸಾವಿರ ಸಂಬಳ ಪಡೆಯುತ್ತಿದ್ದರು. ಆದರೆ ಕೋವಿಡ್ ಕಾರಣದಿಂದಾಗಿ ಲಾಕ್ ಡೌನ್ ಆಗುತ್ತಲೇ ತಮ್ಮ ತವರಿಗೆ ವಾಪಾಸ್ ಆಗಿದ್ದರು.

  ಬದುಕು ಬದಲಿಸಿದ ಕೊರೊನಾ
  ಹೀಗೆ ಬಂದವರೇ ಮತ್ತೆ ರಾಜ್ಯ ರಾಜಧಾನಿಯ ಕನಸು ಕಾಣದೆ, ತಮ್ಮದೇ ಊರಲ್ಲಿ ಆಡು ಸಾಕಾಣಿಕೆ ನಡೆಸಲು ನಿರ್ಧರಿಸಿದರು. ಹೀಗೆ ಆರಂಭವಾದ ಅವರ ಹೊಸ ಉದ್ಯೋಗ ಈಗ ಉದ್ಯಮವಾಗಿ ಬದಲಾಗಿದೆ..

  ಲಕ್ಷ ಲಕ್ಷ ಸಂಪಾದನೆ
  ಸಾಯಿನಾಥ್ ಶೇರಖಾನೆ ಅವರ ಪರಿಶ್ರಮದಿಂದಾಗಿ ಆಡು ಸಾಕಾಣಿಕೆಯಿಂದಾಗಿ ವರ್ಷಕ್ಕೆ 10 ರಿಂದ 14 ಲಕ್ಷ ಆದಾಯ ಬರುತ್ತಿದೆ. ತಮಗಿರುವ 8 ಎಕರೆ ಜಮೀನಿನಲ್ಲಿ 6 ಎಕರೆಯಷ್ಟು ಕಬ್ಬು ಹಾಕಿ ಇನ್ನುಳಿದ ಎರಡು ಎಕರೆ ಪ್ರದೇಶದಲ್ಲಿ ಮೇವನ್ನು ಬೆಳೆಸಿದ್ದಾರೆ. ಬಹುಬೇಗ ಬೆಳೆಯುವ ಪಂಜಾಬ್ ಬಿಟಲ್ ತಳಿಯ ಆಳೆತ್ತರದ ಆಡುಗಳನ್ನೇ ಅವರು ಸಾಕುತ್ತಿದ್ದಾರೆ. ಸಾಮಾನ್ಯ ಆಡುಗಳಿಗಿಂತ ಇವುಗಳು ವಿಭಿನ್ನವಾಗಿ ಕಾಣುವುದರಿಂದ ಇವುಗಳ ಬೇಡಿಕೆ, ಜೊತೆಗೆ ಆದಾಯವೂ ಹೆಚ್ಚಾಗಿದೆ.

  ಸಾಯಿನಾಥ್ ಅವರ ಸಂಪರ್ಕ ಸಂಖ್ಯೆ: 98444 44752 

  ಎಷ್ಟು ಬೆಲೆಯಿದೆ?
  ಬಿಟೆಲ್ ತಳಿ ಆಡುಗಳ 1 ತಿಂಗಳ ಮರಿಗೆ ಸುಮಾರು 16 ರಿಂದ 20 ಸಾವಿರ ಬೆಲೆಯಿದೆ. ವಿಜಯಪುರದ ರೈತರು ಮಾತ್ರವಲ್ಲದೇ ರಾಜ್ಯದ ವಿವಿಧ ಜಿಲ್ಲೆಯ ಹಾಗೂ ಮಹಾರಾಷ್ಟ್ರದ ರೈತರು ಸಹ ಇವರಲ್ಲಿಗೆ ಬಂದು ಆಡುಗಳನ್ನು ಖರೀದಿಸುತ್ತಾರೆ. ಅದಲ್ಲದೇ, ಸಾಮಾಜಿಕ ಜಾಲತಾಣದ ಮೂಲಕವೂ ಆಡುಗಳ ವ್ಯಾಪಾರ ಮಾಡುತ್ತಾರೆ.

  ಇದನ್ನೂ ಓದಿ: Vijayapura: ಪ್ಲಾಸ್ಟಿಕ್, ಮದ್ಯದ ಬಾಟಲಿ ಹೆಕ್ಕಿದ ಸ್ವಾಮೀಜಿ! ವಿಡಿಯೋ ನೋಡಿ

  ಸ್ವತಃ ತಾವೇ ಬೆಳೆಯುವ ಮೇವು
  ಸಾಯಿನಾಥ್ ಅವರು ಆಡುಗಳಿಗಾಗಿಯೇ ಅತ್ಯಾಕರ್ಷಕ ಶೆಡ್ ನಿರ್ಮಿಸಿದ್ದಾರೆ. ಆಡುಗಳ ಹಿಕ್ಕಿ, ಮೂತ್ರದಿಂದ ಫಲವತ್ತಾದ ಗೊಬ್ಬರ ಕೂಡ ಸಿದ್ದವಾಗುತ್ತದೆ. ಶೆಡ್ ಪಕ್ಕದಲ್ಲೇ ಬಹು ವಾರ್ಷಿಕ ಹಸಿರು ಮೇವನ್ನು ಸಾಯಿನಾಥ್ ಬೆಳೆಯುತ್ತಿದ್ದಾರೆ. ಅವುಗಳಲ್ಲಿ ತೈವಾನ್ ಸೂಪರ್ ನೇಪಿಯರ್, ಇಂಡೋನೇಷಿಯಾ ಸ್ಮಾರ್ಟ್ ನೇಪಿಯರ್, ಸಿಒಎಪ್ಎಸ್-31 ತಳಿಯ ಮೇವು, ರೇಷ್ಮೆ ತಪ್ಪಲು, ಕುದುರೆ ಮೆಂತೆ, ಬೇಲಿ ಮೆಂತೆ ಹೀಗೆ ಹಲವು ಬಗೆಯ ಮೇವನ್ನು ಎರಡು ಎಕರೆಯಲ್ಲಿ ಬೆಳೆದು ಆಡುಗಳಿಗೆ ಹಾಕುತ್ತಿದ್ದಾರೆ.

  ಇದನ್ನೂ ಓದಿ: Belagavi: ನಾಯಿ ಬರ್ತ್​ಡೇ ಆಚರಣೆ ವಿಡಿಯೋ ನೋಡಿ! 1 ಕ್ವಿಂಟಲ್ ಕೇಕ್, 5 ಸಾವಿರ ಜನರಿಗೆ ಭರ್ಜರಿ ಊಟ!

  ಹಲವರಿಗೆ ಪ್ರೇರೇಪಣೆ
  ಬೆಂಗಳೂರು ಬಿಟ್ಟು ಬಂದ ಸಾಯಿನಾಥ್ ಇದೀಗ ಆಡುಗಳಿಂದಲೇ ವರ್ಷಕ್ಕೆ ಸುಮಾರು 10 ರಿಂದ 14 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಇವರಿಂದ ಹಲವು ಯುವ ರೈತರು ಸಹ ಪ್ರೇರೇಪಣೆಗೊಂಡಿದ್ದಾರೆ. ಈ ಮೂಲಕ ಸ್ವ ಉದ್ಯೋಗದ ಮಹತ್ವ ಸಾರಿದ್ದಾರೆ ಸಾಯಿನಾಥ್ ಶೇರಖಾನೆ.

  ವರದಿ: ಪ್ರಶಾಂತ ಹೂಗಾರ, ವಿಜಯಪುರ
  Published by:guruganesh bhat
  First published: