ವಿಜಯಪುರ: ಅವರು ಜಾತ್ಯಾತೀತ ಮಠದ ಮಠಾಧೀಶರು. ಆದ್ರೆ ಅವರ ಜೀವಿತಾವಧಿಯ ತುಂಬೆಲ್ಲ ಮಾಡಿದ್ದು ಬ್ರಿಟೀಷರ (Freedom Fighting) ವಿರುದ್ಧದ ಹೋರಾಟ! ತಮ್ಮ ಮಠದ ಸಾವಿರಾರು ಭಕ್ತರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿಸಿದ ರಾಷ್ಟ್ರದ ಏಕೈಕ ಸಂತ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಅಪ್ಪಟ ದೇಶಪ್ರೇಮಿ ವಿಜಯಪುರ ಜಿಲ್ಲೆಯ (Vijayapura) ಇಂಡಿ ತಾಲೂಕಿನ ಇಂಚಗೇರಿ ಮಠದ ಮಾಧವಾನಂದ ಪ್ರಭು ಅವರು. ಬ್ರಿಟೀಷರ ವಿರುದ್ಧ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡ ರಾಷ್ಟ್ರದ ಬೆರಳೆಣಿಕೆಯಷ್ಟು ಮಠಗಳಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ (Indi) ಇಂಚಗೇರಿ ಮಠವು ಪ್ರಮುಖವಾದದ್ದು. ಈ ಮಠದ ಮಾಧವಾನಂದ ಪ್ರಭು ಅವರ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು
ತಮ್ಮ ಮಠದ ಸಾವಿರಾರು ಭಕ್ತರನ್ನೂ ಸಹ ಸ್ವಾತಂತ್ರ ಹೋರಾಟದಲ್ಲಿ ಧುಮುಕುವಂತೆ ಮಾಡಿದ ಹೆಗ್ಗಳಿಕೆ ಇದೇ ಮಠದ ಮಠಾಧೀಶರಾಗಿದ್ದ ಮಾಧವಾನಂದ ಪ್ರಭು ಅವರಿಗೆ ಸಲ್ಲುತ್ತೆ. 1935ರ ವೇಳೆಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಮಾಧವಾನಂದ ಪ್ರಭು ಅವರು ತಮ್ಮೊಂದಿಗೆ 20 ಸಾವಿರಕ್ಕೂ ಅಧಿಕ ಭಕ್ತರನ್ನು ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದರು.
ಬ್ರಿಟೀಷ್ ಸೈನಿಕರು ಬೆಚ್ಚಿಬಿದ್ದರು!
1938 ರಲ್ಲಿ ಆ ಸಂದರ್ಭದಲ್ಲಿ ಮಾಧವಾನಂದರ ಹೋರಾಟಕ್ಕೆ ಬೆಚ್ಚಿಬಿದ್ದಿದ್ದ ಬ್ರಿಟಿಷ್ ಸರ್ಕಾರ ಅವರಿಗೆ ಕಂಡಲ್ಲಿ ಗುಂಡಿಕ್ಕುವ ಆದೇಶ ಹೊರಡಿಸಿತ್ತು! ಒಮ್ಮೆ ಸ್ವಾತಂತ್ರ್ಯ ಹೋರಾಟಕ್ಕಾಗಿ ಭಕ್ತರನ್ನು ಒಟ್ಟುಗೂಡಿಸಲು ಮಾಧವಾನಂದ ಪ್ರಭು ಅವರು ತಮ್ಮ ವಾಹನದಲ್ಲಿ ಹೊರಟಿದ್ದರು. ಆಗ ಬೆಳಗಾವಿ ಜಿಲ್ಲೆಯ ಗೋಕಾಕ್ ಬಳಿ ಬ್ರಿಟಿಷ್ ಪೊಲೀಸರು ಇವರ ಮೇಲೆ ಗುಂಡು ಹಾರಿಸಿದ್ದರು.
27 ಬಾರಿ ಜೈಲುವಾಸ
ಹಲವು ಸುತ್ತು ಗುಂಡು ಹಾರಿಸಿ ಸ್ಥಳಕ್ಕೆ ಬಂದ ಪೊಲೀಸರಿಗೆ ಮಾಧವಾನಂದ ಪ್ರಭು ಅವರು ಪತ್ತೆಯೇ ಇಲ್ಲ! ಬ್ರಿಟೀಷ್ ಪೊಲೀಸರು ಕಕ್ಕಾಬಿಕ್ಕಿಯಾಗಿದ್ದರು. ಬರೋಬ್ಬರಿ 27 ಬಾರಿ ಜೈಲು ವಾಸ ಅನುಭವಿಸಿದ್ದಾರೆ ಮಾಧನಾವಂದ ಪ್ರಭುಗಳು!
ಇದನ್ನೂ ಓದಿ: Vijayapura: ಕಾರಹುಣ್ಣಿಮೆ ಸಂಭ್ರಮವೋ ಸಂಭ್ರಮ! ವಿಜಯಪುರದಲ್ಲಿ ರೈತರ ಸಡಗರ
ಇನ್ನೆಂದೂ ಗುಂಡು ಹಾರಿಸಿಲ್ಲ!
ಆದರೆ ಇತ್ತ ಮಾಧವಾನಂದ ಪ್ರಭು ಅವರು ಗೋಕಾಕ ಬಳಿಯ ಹಳ್ಳಿಯೊಂದ್ರಲ್ಲಿ ನಡೆದ ಗುಪ್ತ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದನ್ನು ಮಾಧವಾನಂದ ಪ್ರಭು ಅವರ ಪವಾಡ ಎಂದೇ ನಂಬಲಾಗುತ್ತದೆ. ಈ ಚಮತ್ಕಾರ ಕಂಡಿದ್ದ ಬ್ರಿಟಿಷ್ ಪೊಲೀಸರು ಇನ್ನೆಂದಿಗೂ ಮಾಧವಾನಂದರ ಮೇಲೆ ಗುಂಡು ಹಾರಿಸುವ ಪ್ರಯತ್ನ ಮಾಡಲಿಲ್ಲವಂತೆ.
ಇದನ್ನೂ ಓದಿ: Mother Temple Vijayapura: ತಾಯಿಯೇ ದೇವರು ಎಂದು ದೇವಸ್ಥಾನ ನಿರ್ಮಿಸಿದ ಮಕ್ಕಳು! ವಿಜಯಪುರದಲ್ಲಿದೆ ಅಮ್ಮನ ಮಂದಿರ!
ಮಾಧವಾನಂದ ಪ್ರಭು ಅವರ ಮಠಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಈ ಪವಾಡದ ನಂತರವಂತೂ ಮಾಧವಾನಂದರ ಅನುಯಾಯಿಗಳು ಅವರನ್ನು ದೇವರು ಅಂತಲೇ ಸಂಬೋಧಿಸುತ್ತಿದ್ದರು. ಇಂತಹ ಮಾಧವಾನಂದ ಪ್ರಭು ಅವರ ಸ್ಮರಣೋತ್ಸವ ಈಚೆಗೆ ಸಾಂಗವಾಗಿ ನಡೆಯಿತು. ವಿಜಯಪುರಕ್ಕೆ ಬಂದಾಗ ನೀವೂ ಈ ಮಾಧವಾನಂದರ ಮಠದ ದರ್ಶನ ಪಡೆಯುವುದನ್ನು ಮರೆಯಬೇಡಿ!
ವರದಿ - ಪ್ರಶಾಂತ ಹೂಗಾರ ನ್ಯೂಸ್18 ಕನ್ನಡ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ