Almatti: ಆಲಮಟ್ಟಿಯಲ್ಲಿ ಮಾಯಾಲೋಕ! ಇಲ್ಲಿದೆ ನೋಡಿ ವಿಡಿಯೋ

ವಿಜಯಪುರದ ಆಲಮಟ್ಟಿ ಡ್ಯಾಂ ಹಾಗೂ ಉದ್ಯಾನವನಗಳು ಪ್ರವಾಸಿಗರ ಪಾಲಿನ ಅಚ್ಚುಮೆಚ್ಚಿನ ತಾಣವಾಗಿದೆ. ಪ್ರವಾಸಿಗರು ಕುಟುಂಬ ಸಮೇತರಾಗಿ ಇಲ್ಲಿನ ಸೌಂದರ್ಯ ಸವಿಯಬಹುದಾಗಿದೆ. ಹಾಗಾದರೆ ಇಲ್ಲಿಗೆ ಬರೋದು ಹೇಗೆ? ಊಟ ವಸತಿ ಸೌಕರ್ಯಗಳೇನು? ನೋಡೋಕೆ ಏನೇನಿದೆ? ಎಲ್ಲ ವಿವರ ಇಲ್ಲಿದೆ.

ಆಲಮಟ್ಟಿಯ

ಆಲಮಟ್ಟಿಯ ಉದ್ಯಾನವನ

 • Share this:
  ವಿಜಯಪುರ : ಹೊಸ ಹೊಸ ಪ್ರವಾಸಿಗರ ಆಕರ್ಷಣೆಯ ಸ್ಥಳ ಒಂದೆಡೆಯಾದ್ರೆ, ಇನ್ನೊಂದೆಡೆ ಲಾಲ್ ಬಹದ್ದೂರ ಶಾಸ್ತ್ರಿ ಸಾಗರವನ್ನು ಹೊಂದಿರುವ ಕೇಂದ್ರ ಸ್ಥಾನವೇ ವಿಜಯಪುರ ಜಿಲ್ಲೆಯ (Vijayapura) ಆಲಮಟ್ಟಿ. ಈ ಆಲಮಟ್ಟಿ ಉದ್ಯಾನವನ (Almatti Garden) ವೀಕ್ಷಿಸಲು ರಾಜ್ಯದ ಮೂಲೆ ಮೂಲೆಯಿಂದ ನಿತ್ಯ ಸಾವಿರಾರು ಪ್ರವಾಸಿಗರು ಈ ಉದ್ಯಾನವನಕ್ಕೆ ಬರುತ್ತಾರೆ. ಆಲಮಟ್ಟಿ ಬಸ್ ನಿಲ್ದಾಣಕ್ಕೆ ಬಂದಿಳಿದರೆ ಸಾಕು ನಿಮ್ಮನ್ನ ಲಾಲ್ ಬಹದ್ದೂರ ಶಾಸ್ತ್ರಿ ಸಾಗರದ ಮಹಾದ್ವಾರವು ನಿಮ್ಮನ್ನ ಬರಮಾಡಿಕೊಳ್ಳುತ್ತದೆ. ಹಾಗೆ ನೂರು ಮೀಟರ ಒಳ ಪ್ರವೇಶಿಸಿದರೆ ಸಾಕು ಅಲ್ಲಿ ಕಾಣಸಿಗುವುದೇ ರಾಕ್ ಉದ್ಯಾನವನ. ಕೇವಲ 20 ರೂಪಾಯಿ ಕೊಟ್ಟು ಒಳ ಪ್ರವೇಶಿಸಿದರೆ ಒಂದು ಕ್ಷಣ ಬೆರಗಾಗುತ್ತಿರಿ.

  ಹೌದು, ಈ ರಾಕ್ ಉದ್ಯಾನವನ ಎಲ್ಲೆಲ್ಲೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಇಲ್ಲಿನ ಸಸ್ಯಕಾಶಿ ಮುಗಿಲಿಗೆ ತಾಕುವಂತೆ ಭಾಸವಾಗುತ್ತದೆ. ಎತ್ತರದಿಂದ ತಿರುಗಿ ನೋಡಿದ್ರೆ ಕೃಷ್ಣಾ ಅಣೆಕಟ್ಟೆಯ ವೈಯ್ಯಾರ, ಇನ್ನೊಂದೆಡೆ ಬಣ್ಣ ಬಣ್ಣದ ಚಿಟ್ಟೆಗಳು, ಹುಲ್ಲು ತಿನ್ನುತ್ತಿರುವ ದನಕರುಗಳು, ಒಂಟೆ, ಚಿರತೆ, ಬೇಟೆಗಾಗಿ ಕಾದು ಕುಳಿತ ಗಿಡುಗ, ಹದ್ದು, ಕಾಂಗರೂ, ಮರದ ಕೆಳಗೆ ಕಾಣುವ ಹೆಬ್ಬಾವು, ಮರದ ಮೇಲಿರುವ ವಿವಿಧ ಬಗೆಯ ಪಕ್ಷಿಗಳು, ಹುಲಿ, ಕರಡಿ, ದೂರದಲ್ಲಿ ಕಾಣುವ ಸಿಂಹ, ಮತ್ತೊಂದು ಕಡೆ ನವಿಲುಗಳ ನೃತ್ಯ, ಮೊಸಳೆ, ಜಿರಾಫೆ, ಘೇಂಡಾಮೃಗ, ಕಾಡುಕೋಣ, ದೂರದಲ್ಲಿ ನಮ್ಮನ್ನ ನೋಡುತ್ತಿರುವ ಅನಕೊಂಡ.! ವಾಸ್ತವದಲ್ಲಿ ಇವೆಲ್ಲವೂ ನಿಜವಾದ ಪ್ರಾಣಿ ಪಕ್ಷಿಗಳಲ್ಲ. ಅವೆಲ್ಲವೂ ಸಿಮೆಂಟ್ ಮತ್ತು ಕಲ್ಲುಗಳಿಂದ ಕಲಾವಿದರ ಕೈಯಲ್ಲಿ ಜನ್ಮತಾಳಿದ ಪ್ರಾಣಿ-ಪಕ್ಷಿಗಳು.

  ಎರಡು ಕಣ್ಣುಗಳು ಸಾಲದು
  ಈ ಉದ್ಯಾನವನದ ಇನ್ನೊಂದು ವಿಶೇಷವೆಂದರೆ ದೋಣಿ ವಿಹಾರ. ಮಧ್ಯದಲ್ಲಿ ಕಾಣುವ ಸಿಲ್ವರ್ ಲೇಕ್ ಅಲ್ಲದೇ ಹಳ್ಳಿಯಲ್ಲಿನ ಸಂಪ್ರದಾಯ, ಜನರ ಉಡುಗೆ ತೊಡುಗೆ, ಜಾತ್ರೆ ಹಬ್ಬ ಹರಿದಿನಗಳು ಮತ್ತು ಎತ್ತರದಿಂದ ಭಾರತದ ನಕಾಶೆಯನ್ನ ನೋಡದೆ ಇದ್ರೆ ಹೇಗೆ ? ಇದನ್ನೆಲ್ಲ ಕಣ್ಣು ತುಂಬಿಕೊಳ್ಳಲು ಎತ್ತರದ ಪ್ರದೇಶದಿಂದ ನೋಡಬಹುದಾಗಿದೆ. ಇದನ್ನ ನೋಡುವಾಗ ಸಂಪೂರ್ಣ ಉದ್ಯಾನವನ ಗೋಚರವಾಗುತ್ತದೆ. ಈ ಎಲ್ಲ ವೈಶಿಷ್ಟ್ಯತೆಯನ್ನ ನೋಡಲು ಪ್ರವಾಸಿಗರಿಗೆ ಎರಡು ಕಣ್ಣುಗಳು ಸಾಲದು, ಇವೆಲ್ಲ ವಸ್ತುಗಳು ಸರಿಸುಮಾರು 280 ಎಕರೆ ಜಾಗದಲ್ಲಿ ನಿರ್ಮಾಣವಾಗಿವೆ.

  20 ರೂ. ಗೆ ಪುಟಾಣಿ ರೈಲಲ್ಲಿ ಸುತ್ತು ಹೊಡೆಯಿರಿ!
  ಈ ನಡುವೆ ಉದ್ಯಾನವನಕ್ಕೆ ಬರುವ ಮಕ್ಕಳಿಗಾಗಿಯೇ ಪುಟಾಣಿ ರೈಲನ್ನು ಆರಂಭಿಸಲಾಗಿದೆ. ಅಲ್ಲದೇ ಮಕ್ಕಳ ಜಾಗರೂಕತೆಗಾಗಿ ಮಕ್ಕಳ ಪೊಷಕರಿಗೆ ಒಬ್ಬರಿಗೆ ಮಾತ್ರ ಅವಕಾಶವನ್ನ ಈ ಪುಟಾಣಿ ರೈಲಿನಲ್ಲಿ ಅವಕಾಶವನ್ನು ಮಾಡಿಕೊಡಲಾಗುತ್ತದೆ. ಈ ರೈಲಿನಲ್ಲಿ ನೀವು ಸಂಚರಿಸಬೇಕಾದರೆ ತಲಾ ಒಬ್ಬರಿಗೆ 20 ರೂಪಾಯಿಯಂತೆ ಟಿಕೇಟ್ ಪಡೆಯಬೇಕು. ಅಂದಾಜು 1 ಕಿಲೋಮೀಟರಗಿಂತಲು ಹೆಚ್ಚು ಉದ್ದದ ರೈಲು ಮಾರ್ಗವನ್ನು ಹೊಂದಿದೆ. ಒಂದು ಬೋಗಿಯಲ್ಲಿ ನಾಲ್ಕು ಜನರು ಕುಳಿತುಕೊಳ್ಳಬಹುದು. ಪ್ರವಾಸಿಗರನ್ನು ಉದ್ಯಾನವನದಲ್ಲಿ ಸುತ್ತಾಡಿಸಿಕೊಂಡು ಬರಲು ಈ ಪುಟಾಣಿ ರೈಲು ಸೂಕ್ತವೆನಿಸುತ್ತದೆ.

  ನಾಲಿಗೆಯಲ್ಲಿ ನೀರೂರಿಸೋ ರುಚಿರುಚಿ ತಿಂಡಿಗಳು
  ಇದೆಲ್ಲ ನೋಡಿದ ಮೇಲೆ ಇಲ್ಲಿನ ಸ್ಪೆಷಲ್ ಪಾವ್ ಬಾಜಿ, ಚುರುಮುರಿ ಗಿರಿಮಿಟ್, ವಡಾಪಾವ್ ಹೀಗೆ ಹಲವಾರು ವಿಶೇಷ ತಿಂಡಿ ತಿನಿಸುಗಳು ಇಲ್ಲಿವೆ. ಇಲ್ಲಿನ ಪಾವ್ ಬಾಜಿ ಅಂಗಡಿಯ ಹೆಸರೇ ವ್ಹಾವ್. ಉದ್ಯಾನವನ ಮುಂಭಾಗದಲ್ಲಿನ ಮರದ ಕೆಳಗೆ ನಿಂತರೆ ಸಾಕು ಮಸಾಲಾ ಪರಿಮಳ ಘಮ್ಮೆಂದು ನಮ್ಮ ಮುಖ ಅಂಗಡಿಯತ್ತ ತಿರುಗುವಂತೆ ಮಾಡುತ್ತದೆ.

  ಇದನ್ನೂ ಓದಿ: Madhavananda Prabhu: ಬ್ರಿಟೀಷರ ಎದೆ ನಡುಗಿಸಿದ್ದ ವಿಜಯಪುರದ ಸಂತ! 27 ಬಾರಿ ಜೈಲುವಾಸ ಅನುಭವಿದ್ದ ಮಾಧವಾನಂದ ಪ್ರಭು

  ಇಲ್ಲಿನ ವಡಾ ಪಾವ್ ಈ ಅಂಗಡಿಯಲ್ಲಿ ಫೇಮಸ್ ಜೊತೆಗೆ ಆಲೂ ಸಮೋಸಾ ಅಂತು ಸೂಪರಾಗಿರುತ್ತೆ. ಕೇವಲ 20 ರೂಪಾಯಿಯಲ್ಲಿ ನೀವು ಸವಿಯಬಹುದು, ಇದನ್ನೆಲ್ಲ ಸವಿದ ಮೇಲೆ ಶುಂಠಿ ಚಹಾ ಕುಡಿಯದಿದ್ರೆ ಹೇಗೆ? ಶುಂಠಿ ಚಹಾ ಕೂಡಾ ಇಲ್ಲಿನ ವಿಶೇಷ.

  ಈ ಚಹಾ ಸೇವನೆ ಮಾಡಿದ ಬಳಿಕ ನಿಮಗಿರುವ ಕೆಮ್ಮು, ನೆಗಡಿ, ತಲೆನೋವು ಕ್ಷಣಾರ್ದದಲ್ಲಿ ಮಾಯವಾಗುತ್ತೆ. ಹೀಗಾಗಿ ಇಲ್ಲಿಗೆ ಬರುವ ಪ್ರವಾಸಿಗರು ಇವೆಲ್ಲವನ್ನ ಸವಿದೇ ಮನೆಯತ್ತ ಹೆಜ್ಜೆ ಹಾಕುತ್ತಾರೆ.

  Almatti Garden
  ಆಲಮಟ್ಟಿ ಉದ್ಯಾನವನಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

  ಇದನ್ನೂ ಓದಿ: Vijayapura: ಕಾರಹುಣ್ಣಿಮೆ ಸಂಭ್ರಮವೋ ಸಂಭ್ರಮ! ವಿಜಯಪುರದಲ್ಲಿ ರೈತರ ಸಡಗರ

  ಒಟ್ಟಾರೆ ವಿಜಯಪುರ ಜಿಲ್ಲೆ ಪ್ರವಾಸಿಗರಿಗೆ ಉದ್ಯಾನವನ ವೀಕ್ಷಣೆಗೆ ಅನುಕೂಲ ಮಾಡಿಕೊಟ್ಟು ಪ್ರವಾಸಿಗರಲ್ಲಿ ಸಂತಸ ತಂದಿದೆ. ಅದರ ಜೊತೆಗೆ, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೂ ಲಾಭವಾಗುವತ್ತ ಸಾಗಿದೆ.

  ವರದಿ: ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ
  Published by:guruganesh bhat
  First published: