ವಿಶಾಲ ಬಯಲು, ಅಲ್ಲಲ್ಲಿ ವಿಜ್ಞಾನ ಮಾದರಿಗಳು, ಒಂದಿಷ್ಟು ಆಟ, ಒಂದಿಷ್ಟು ಪಾಠದ ಜೊತೆಗೆ ಹಲವು ವಿಷಯ ಕಲಿಕೆಯಲ್ಲಿ ಮಗ್ನರಾಗಿರೋ ಮಕ್ಕಳು. ಅತ್ತ ಅರಳಿ ನಗುತ್ತಿರೋ ಹೂಗಿಡಗಳು, ಇತ್ತ ಪ್ರಾಕ್ಟಿಕಲ್ ಕ್ಲಾಸ್. ಹಾಗಿದ್ರೆ ಯಾವುದು ಈ ಪಾರ್ಕ್ ಅಂತೀರಾ? ಹೇಳ್ತೀವಿ ನೋಡಿ. ಇದು ವಿಜಯಪುರದ (Vijayapura News) ಆಲಮಟ್ಟಿ ಡ್ಯಾಂ (Almatti Dam) ಬಳಿ ಇರೋ ಸೈನ್ಸ್ ಪಾರ್ಕ್. ಡಿಸೆಂಬರ್ ಬಂತಂದ್ರೆ ಸಾಕು, ಶಾಲಾ ಮಕ್ಕಳೆಲ್ಲ ಪ್ರವಾಸಕ್ಕಾಗಿ ಆಲಮಟ್ಟಿಗೆ ಆಗಮಿಸ್ತಾರೆ. ಹೀಗೆ ಆಗಮಿಸಿದ ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗಿ ಆಲಮಟ್ಟಿಯ ಮೊಘಲ್ ಉದ್ಯಾನದ ಸಮುಚ್ಛಯದಲ್ಲಿ ವಿಜ್ಞಾನ ಪಾರ್ಕ್ (Science Park) ನಿರ್ಮಿಸಲಾಗಿದೆ.
ಈ ಪಾರ್ಕ್ನಲ್ಲಿ ಮಕ್ಕಳ ಪಠ್ಯ ಚಟುವಟಿಕೆಗೆ ಪೂರಕವಾದ ವಿಜ್ಞಾನದ ಪ್ರಾಯೋಗಿಕ ಮಾದರಿಗಳನ್ನ ಇಡಲಾಗಿದೆ. ಇದು ಸಹಜವಾಗಿಯೇ ಮಕ್ಕಳನ್ನು ಆಕರ್ಷಿಸುತ್ತಿದೆ. ಆಡುತ್ತಾ ಕಲಿ ಎಂಬ ತತ್ವದಡಿ ವಿಜ್ಞಾನದ ಹಲವು ಅಂಶಗಳನ್ನು ಪ್ರತಿಯೊಬ್ಬರೂ ಸರಳವಾಗಿ ತಿಳಿಯುವ ಉದ್ದೇಶದಿಂದ ಈ ಪಾರ್ಕ್ ನಿರ್ಮಿಸಲಾಗಿದೆ.
81 ಪ್ರಾಯೋಗಿಕ ಆಕರ್ಷಣೀಯ ಮಾದರಿಗಳು
ಸುಮಾರು 1 ಕೋಟಿ ವೆಚ್ಚದಲ್ಲಿ 1.2 ಎಕರೆ ಪ್ರದೇಶದಲ್ಲಿ ಮೂರು ವಿಭಾಗಗಳಲ್ಲಿ ಈ ಪಾರ್ಕ್ ನಿರ್ಮಿಸಲಾಗಿದೆ. ಗಣಿತ, ಭೌತಶಾಸ್ತ್ರ, ಜೀವಶಾಸ್ತ್ರ, ಭೂಗೋಳದ ಪ್ರಮುಖ ಅಂಶಗಳ ಸುಮಾರು 81 ಪ್ರಾಯೋಗಿಕ ಮಾದರಿಗಳು ಆಕರ್ಷಣೀಯವಾಗಿ ಅಳವಡಿಸಲಾಗಿದೆ.
ಇದನ್ನೂ ಓದಿ: Kalaburagi: ಮಲ್ಲಗಂಬ ಏರಿದ ಅಂಧ ಮಕ್ಕಳು! ಶಾಲೆ ಕಟ್ಟೋದೇ ಇವರ ಉದ್ದೇಶವಂತೆ
ಮಕ್ಕಳಲ್ಲಿ ತೀವ್ರ ಕುತೂಹಲದ ಜತೆ ಹಲವು ಸಂಶಯಗಳಿಗೆ ಉತ್ತರವೂ ದೊರೆಯುತ್ತಿದೆ. ಜಾಗತಿಕ ಸಮಯ, ಬೆಳಕಿನ ನಾನಾ ಪ್ರಯೋಗಗಳು, ಪೆರಿಸ್ಕೋಪ್, ಮಸೂರಗಳ ಮಾದರಿಗಳು, ಕನ್ನಡಿಯೊಳಗಿನ ಆಟ, ಪ್ರಚ್ಛನ್ನ ಶಕ್ತಿಯಿಂದ ಚಲನಶಕ್ತಿ ಪ್ರಯೋಗ, ಪೈಥಾಗೋರಸ್ ಪ್ರಮೇಯ, ಸರಳ ಕ್ಯಾಮರಾ, ಗುರುತ್ವಾಕರ್ಷಣೆಯ ಚೆಂಡು, ಪ್ರತಿಧ್ವನಿ, ಜಲ ವಿದ್ಯುತ್ ಉತ್ಪಾದನೆ ಹೀಗೆ ಹಲವು ಪ್ರಾಯೋಗಿಕ ಮಾದರಿಗಳು ಇಲ್ಲಿವೆ.
ಸ್ಕ್ಯಾನ್ ಮಾಡಿದರೆ ಪ್ರಯೋಗದ ಸಂಪೂರ್ಣ ವಿವರ
ಜೊತೆಗೆ ಅವುಗಳ ಹೆಸರು ಮತ್ತು ಉಪಯೋಗದ ಮಾಹಿತಿ ಜೊತೆಗೆ ಕ್ಯೂ ಆರ್ ಕೋಡ್ ಅಳವಡಿಸಲಾಗಿದೆ. ಸ್ಕ್ಯಾನ್ ಮಾಡಿದರೆ ಆ ಪ್ರಯೋಗದ ಸಂಪೂರ್ಣ ವಿವರವೂ ದೊರೆಯುತ್ತಿದೆ.
ಇದನ್ನೂ ಓದಿ: Special Talent: ಕಲಬುರಗಿಯ ಈ ಪೋರನಿಗೆ ಇಂಗ್ಲೀಷ್ ಸುಲಿದ ಬಾಳೆಹಣ್ಣಿನಷ್ಟೇ ಸಲೀಸು!
ಪಾರ್ಕ್ಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಒಟ್ಟಿನಲ್ಲಿ ಆಲಮಟ್ಟಿಯ ಉದ್ಯಾನವನದಲ್ಲಿ ಇಂತಹ ವಿಜ್ಞಾನ ಪಾರ್ಕ್ ಶಾಲಾ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗಿದೆ. ಹಾಗಿದ್ರೆ ಇನ್ನೇಕೆ ನೀವೇನಾದ್ರೂ ಮಕ್ಕಳನ್ನು ಆಲಮಟ್ಟಿ ಡ್ಯಾಂ ನೋಡಲು ಕರೆದೊಯ್ಯುತ್ತೀರೆಂದರೆ ಈ ವಿಜ್ಞಾನ ಪಾರ್ಕ್ ಮಿಸ್ ಮಾಡ್ಬೇಡಿ..
ವರದಿ: ಪ್ರಶಾಂತ ಹೂಗಾರ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ