ವಿಜಯಪುರ: ದೇಗುಲಕ್ಕೆ ಸರತಿ ಸಾಲಿನಂತೆ (Slippers In Temple) ಬರುತ್ತಿರೋ ಭಕ್ತರು. ದೇವಸ್ಥಾನಕ್ಕೆ ಬಂದವರ ಚಪ್ಪಲಿಗಳನ್ನ ತೆಗೆದಿರಿಸುತ್ತಿರೋ ಸ್ವಯಂ ಸೇವಕರು. ಹೌದು, ಎಲ್ಲ ದೇಗುಲದಲ್ಲಿದ್ದಂತೆ ಇಲ್ಲೂ ಚಪ್ಪಲಿಗಳನ್ನ (Slippers) ಹೊರಗಡೆ ಇಡೋ ವ್ಯವಸ್ಥೆಯಿದೆ. ವ್ಯವಸ್ಥೆಯೇನೋ ಚೆನ್ನಾಗಿದೆ. ಆದ್ರೆ ಬೇರೆಲ್ಲ ಕಡೆ ಇದ್ದಂತೆ ಇಲ್ಲಿ ಚಪ್ಪಲಿ ಬಿಟ್ಟು ಹೋಗಿದ್ದಕ್ಕೆ ಹಣ ಪಾವತಿ ಮಾಡಬೇಕಿಲ್ಲ. ಇದು ದೇವರ ಸೇವೆ ಎಂದೇ ಭಾವಿಸಿಕೊಂಡು ಸಂಸ್ಥೆಯೊಂದು ಇಂತಹ ಕೆಲಸ ನಡೆಸಿಕೊಂಡು ಬರುತ್ತಿದೆ.
ಯೆಸ್, ವಿಜಯಪುರದ ನಿಡಗುಂದಿ ತಾಲೂಕಿನ ಸಪ್ತಗ್ರಾಮಗಳ ಅಧಿಪತಿ, ಯಲಗೂರು ಗ್ರಾಮದ ಯಲಗೂರೇಶನ ಸನ್ನಿಧಿಯಲ್ಲಿ ಪತ್ರಿ ವರ್ಷ ನಡೆಯುವ ಕಾರ್ತಿಕೋತ್ಸವ ಮತ್ತು ಜಾತ್ರೆಯಲ್ಲಿನ ಚಪ್ಪಲಿ ಸೇವೆಯೇ ಈ ವಿಶೇಷ. ಈ ಸೇವೆಯನ್ನ ವಿಜಯಪುರದ ಮಿತ್ರ ವೃಂದ ಸೇವಾ ಸಂಘ ಕಾರ್ಯನಿರ್ವಹಿಸುತ್ತಾ ಬಂದಿದೆ.
ಒಂದು ಪೈಸೆಯನ್ನೂ ಪಡೆಯಲ್ಲ!
ಈ ಮಿತ್ರ ಮಂಡಳಿ ಯಾವುದೇ ಭಕ್ತರಿಂದಲೂ ಒಂದು ಪೈಸೆ ಪಡೆಯದೇ ಅದೆಷ್ಟೇ ಜೋಡಿ ಚಪ್ಪಲಿಗಳಿದ್ದರೂ ಅದನ್ನ ನೀಟಾಗಿ ತೆಗೆದಿರಿಸಿ ಅವರು ವಾಪಸ್ ಬಂದ ಬಳಿಕ ನೀಡುತ್ತೆ.
ಚಪ್ಪಲಿ ಕಳ್ಳತನದ ಭಯ ಕಾಡ್ತಿತ್ತು!
ಮೂರು ದಶಕಗಳ ಹಿಂದೆ ಭಕ್ತರು ನೆಮ್ಮದಿಯಿಂದ ದೇವರ ದರ್ಶನ ಮಾಡಲು ಆಗುತ್ತಿರಲಿಲ್ಲ. ಏಕೆಂದರೆ, ಬೆಲೆಬಾಳುವ ಚಪ್ಪಲಿಗಳನ್ನು ಕಳ್ಳತನವಾಗುತ್ತಿತ್ತು. ಇದರಿಂದ ದರ್ಶನಕ್ಕೆ ಬಂದವರಲ್ಲಿ ಆತಂಕ ಕಾಡುತ್ತಿತ್ತು. ಇದಕ್ಕೆ ತೆರೆ ಎಳೆಯಬೇಕೆಂದು ಮಿತ್ರವೃಂದ ಸೇವಾ ಸಂಘದ ಸದಸ್ಯರು ಮೂವತ್ತು ವರ್ಷಗಳಿಂದ ಭಕ್ತರ ಚಪ್ಪಲಿಗಳಿಗೆ ಭದ್ರತೆ ಒದಗಿಸುವ ಕೆಲಸ ಮಾಡ್ತಾ ಬಂದಿದ್ದಾರೆ.
ಇದನ್ನೂ ಓದಿ: Vijayapura: ಇಲ್ಲಿ ಐದು ರೂಪಾಯಿಗೆ ಸಿಗುತ್ತೆ ಬೆಳಗಿನ ತಿಂಡಿ! ಜನ ನೋಡಿದ್ರೆ ಜಾತ್ರೆ ನೆನಪಾಗುತ್ತೆ!
ಮೂವರಿಂದ ಮೂವತ್ತಾದ ಸದಸ್ಯರು!
ಮೊದಲು ಕೇವಲ ಮೂರು ಸದಸ್ಯರಿಂದ ಆರಂಭವಾದ ಈ ಸೇವಾ ಕಾರ್ಯ ಬರುಬರುತ್ತಾ ಕೇಂದ್ರ, ರಾಜ್ಯ ಸರ್ಕಾರಿ ನೌಕರರು, ನ್ಯಾಯವಾದಿಗಳು, ಖಾಸಗಿ ನೌಕರರನ್ನು ಒಳಗೊಂಡಿದೆ. ಸದ್ಯ ಸುಮಾರು 30ಕ್ಕೂ ಅಧಿಕ ಸದಸ್ಯರು ಸಂಘದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: Bagalkot Viral Video: ಮದುವೆ ಅರಿಶಿನ ಶಾಸ್ತ್ರದಲ್ಲಿ ವಿದೇಶಿ ಪ್ರಜೆಗಳು!
ಒಟ್ಟಿನಲ್ಲಿ ಯಲಗೂರೇಶ್ವರನೆಡೆಗೆ ಹೋಗೋದಿದ್ದರೆ ಅದೆಷ್ಟೇ ಬೆಲೆ ಬಾಳುವ ಚಪ್ಪಲಿ ಹಾಕಿಕೊಂಡರೂ ಕದಿಯುವ ಭಯ ಇರದು. ಏನೇ ಇರಲಿ, ಇಂತಹ ಸೇವೆಯನ್ನ ಮಾಡ್ತಾ ಅದ್ರಲ್ಲಿ ದೇವರನ್ನ ಕಾಣುವ ಇಂತಹ ಸಂಘ ಸಂಸ್ಥೆಗಳ ಸ್ವಯಂ ಸೇವಕರಿಗೆ ಶಹಬ್ಬಾಸ್ ಎನ್ನಲೇಬೇಕು.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ