ವಿಜಯಪುರ: ಹಚ್ಚ ಹಸಿರಿನಿಂದ ಕಂಗೊಳಿಸ್ತಿರೋ ವೀಳ್ಯದೆಲೆ ತೋಟ. ಇದನ್ನ ನೋಡ್ತಿದ್ರೆ ಇದ್ಯಾವುದೋ ಮಲೆನಾಡಿನ ತೋಟ ಅಂದ್ಕೊಂಡ್ರೆ ನಿಮ್ಮ ಊಹೆಯೇ ತಪ್ಪು. ಬಿಸಿಲ ನಾಡಿನಲ್ಲೂ (Vijayapura News) ವೀಳ್ಯದೆಲೆ ಬೇಸಾಯ (Betel Leaves Farming) ಮಲೆನಾಡಿನಂತಹ ರೂಪ ನೀಡಿದೆ. ಅಧಿಕ ಲಾಭದ ಜೊತೆಗೆ ಬೆಳೆಗಾರರ ಕೈ ಹಿಡಿದಿದೆ.
ಯೆಸ್, ಇದು ಉತ್ತರ ಕರ್ನಾಟಕದ ಸುಡು ಬಿಸಿಲ ಜಿಲ್ಲೆ ವಿಜಯಪುರದ ಕೊಲ್ಹಾರ ತಾಲೂಕಿನಲ್ಲಿ ಕಂಡು ಬರುವ ವೀಳ್ಯದೆಲೆ ತೋಟದ ಸೊಬಗು. ಈ ಭಾಗದಲ್ಲಿ ಅಪರೂಪದ ಬೆಳೆ ಎನಿಸಿಕೊಂಡಿರುವ ವೀಳ್ಯದೆಲೆ ಬೇಸಾಯದಿಂದ ಬೆಳೆಗಾರರು ನಿರಂತರ ಆದಾಯ ಕಂಡುಕೊಂಡಿದ್ದಾರೆ.
ಒಂದು ಎಕರೆ ಪ್ರದೇಶದಲ್ಲಿ ಸಂಪೂರ್ಣ ಸಾವಯವ ಪದ್ಧತಿಯಲ್ಲೇ ಯುವ ರೈತ ಬಸೀರ ಇನಾಮದಾರ ಎಂಬವರು ಎಲೆಬಳ್ಳಿಯ ತೋಟ ಮಾಡಿ ವರ್ಷಕ್ಕೆ 15 ಲಕ್ಷದವರೆಗೆ ಆದಾಯ ಪಡೆಯುತ್ತಿದ್ದಾರೆ ಅಂದ್ರೆ ನೀವ್ ನಂಬಲೇಬೇಕು.
ಅಂಬಾಡಿ ವೀಳ್ಯದೆಲೆ
ಒಂದು ಎಕರೆಯಲ್ಲಿ ವೀಳ್ಯದೆಲೆ ತೋಟ ಮಾಡಿರುವ ಬಸೀರ ಇನಾಮದಾರ, ಉಳಿದಂತೆ ತೊಗರಿ, ಗೋವಿನ ಜೋಳ, ಸಜ್ಜೆ ಬೆಳೆಗಳನ್ನು ಎರಡೂ ಎಕರೆಯಲ್ಲಿ ಬೆಳೆದಿದ್ದಾರೆ. ಸುಮಾರು 10 ವರ್ಷಗಳ ಕಾಲ ಫಸಲು ನೀಡುವ ಹಾಗೂ ಬಹು ಬೇಡಿಕೆಯ ಅಂಬಾಡಿ ಜಾತಿಯ ವೀಳ್ಯದೆಲೆಯನ್ನು ನಾಲ್ಕು ವರ್ಷಗಳಿಂದ ಬೆಳೆಯುತ್ತಾ ಬಂದಿದ್ದಾರೆ.
ನೆರಳಿಗಾಗಿ ನುಗ್ಗೆಗಿಡ!
ಎಲೆಬಳ್ಳಿ ಹಬ್ಬಲು ಮತ್ತು ಬಳ್ಳಿಗಳಿಗೆ ಹೆಚ್ಚು ಬಿಸಿಲು ತಟ್ಟದಂತೆ ನೆರಳು ಸಿಗುವಂತಾಗಲು ನಿಗದಿತ ಅಂತರದಲ್ಲಿ ನುಗ್ಗೆ ಗಿಡಗಳನ್ನು ಬೆಳೆಸಿದ್ದಾರೆ. ಎಲೆಬಳ್ಳಿ ಬೆಳೆದಂತೆ ನುಗ್ಗೆ ಗಿಡಗಳಿಗೆ ಅದನ್ನು ಆಧಾರವಾಗಿರಿಸುತ್ತಾ ತೋಟ ತುಂಬೆಲ್ಲ ಹರಡುವಂತೆ ಮಾಡುತ್ತಾರೆ.
ಇದನ್ನೂ ಓದಿ: Vijayapura: ಮನೆ ಮನೆಗೆ ಭೇಟಿ ಕೊಡೋ ದೇವರು, ದುಷ್ಟಶಕ್ತಿಯಿದ್ರೆ ಆಗುತ್ತೆ ಹಾಜರ್!
ತಿಳಿ ಹಸಿರು ಹಾಗೂ ಸಖತ್ ರುಚಿ ಆಗಿರೋ ಈ ವೀಳ್ಯದೆಲೆಗೆ ಹೊರ ರಾಜ್ಯದಿಂದಲೂ ಭಾರೀ ಬೇಡಿಕೆಯಿದೆ. ಹೀಗಾಗಿ ಕೊಲ್ಹಾರ ತಾಲೂಕಿನ ಕೂಡಗಿ ಗ್ರಾಮದಲ್ಲಿ ಎಲೆ ಬೆಳೆಗಾರರು ತಮ್ಮ ಅನುಕೂಲಕ್ಕಾಗಿ ಬಸ್ ನಿಲ್ದಾಣದ ಸಮೀಪದಲ್ಲಿಯೇ ಸಣ್ಣ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಉತ್ತಮ ಆದಾಯ
ಪ್ರತಿ ದಿನ ಇಲ್ಲಿಂದ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶಕ್ಕೆ ವೀಳ್ಯದೆಲೆ ರಫ್ತು ಮಾಡಲಾಗುತ್ತೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ಒಂದು ಬುಟ್ಟಿ ಎಲೆಗೆ 1000 ರೂ. ಆದಾಯ ಸಿಗುತ್ತದೆ. ಹೊರ ರಾಜ್ಯದ ಮಾರುಕಟ್ಟೆಯಲ್ಲಿ 1500 ದಿಂದ 2000 ರೂಪಾಯಿವರೆಗೂ ಲಾಭ ಸಿಗುತ್ತದೆ.
ಇದನ್ನೂ ಓದಿ: Success Story: ಉತ್ತರ ಕರ್ನಾಟಕದ ಹಳ್ಳಿಯಲ್ಲೇ ಇದ್ದು ತಿಂಗಳಿಗೆ 50 ಸಾವಿರ ಆದಾಯ!
ಅಲ್ಲದೇ, ದೇಶದ ಹಲವು ಭಾಗಗಳಿಗೂ ರೈಲ್ವೆ ಮೂಲಕ ಈ ವೀಳ್ಯದೆಲೆಗಳನ್ನು ಸಾಗಿಸಲಾಗುತ್ತದೆ. ಸಾಮಾನ್ಯವಾಗಿ ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುವ ಈ ತಳಿಯನ್ನು ಇದೀಗ ವಿಜಯಪುರ ಜಿಲ್ಲೆಯ ಕೊಲ್ಹಾರ, ಕೂಡಗಿ, ತಳೇವಾಡ, ಮಸೂತಿ, ಗೊಳಸಂಗಿ ಭಾಗದಲ್ಲಿ ಯಥೇಚ್ಛವಾಗಿ ಬೆಳೆಯಲಾಗುತ್ತಿದೆ. ಒಟ್ಟಿನಲ್ಲಿ ಹವಾಮಾನಕ್ಕೆ ತಕ್ಕಂತೆ ವೀಳ್ಯದೆಲೆ ಬೆಳೆಯುತ್ತಾ ಬಿಸಿಲ ನಾಡಿನಲ್ಲೂ ರೈತರು ಕ್ರಾಂತಿ ಮಾಡಿದ್ದಾರೆ.
ವರದಿ: ಪ್ರಶಾಂತ ಹೂಗಾರ್, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ