ವಿಜಯಪುರ: ಗೊಂಚಲು ಗೊಂಚಲಾಗಿ ಫಸಲು ನೀಡಿರೋ ದ್ರಾಕ್ಷಿ. ಸುತ್ತಲೂ ಕೇಳಿ ಬರ್ತಿರೋ ಸೈರನ್.ಇದೇನಿದು ಡೇಂಜರ್ ಸಿಗ್ನಲ್ ಅಂತಾ ಕೇಳ್ತೀರ? ಗುಮ್ಮಟ ನಗರಿಯ (Vijayapura News) ದ್ರಾಕ್ಷಿ ಬೆಳೆಗಾರರು ಸೈರನ್ ಮೊಳಗಿಸೋ ಮೂಲಕ ಫಸಲಿನ ರಕ್ಷಣೆಗೆ (Grapes Protection) ಮುಂದಾಗಿದ್ದಾರೆ. ಪಕ್ಷಿ, ಪ್ರಾಣಿಗಳು ಬಿಡಿ ಈ ಸೈರನ್ ಕೇಳ್ತಿದ್ರೆ ಕಳ್ಳ ಕಾಕರು ಸುಳಿಯಲಾರರು.ಹಾಗಿದ್ರೆ ಹೇಗಿರುತ್ತೆ ಈ ಸೈರನ್ ಕೆಲಸ ಅನ್ನೋದನ್ನ ನೀವೇ ನೋಡಿ.
ಯೆಸ್, ವಿಜಯಪುರ ದ್ರಾಕ್ಷಿ ಬೆಳೆಗೆ ಭಾರೀ ಫೇಮಸ್. ಆದ್ರೆ ಬರದ ನಾಡಿನಲ್ಲಿ ಬೆಳೆಯುವ ಯಾವುದೇ ಫಸಲು ಇದ್ರೂ ಅದು ಹಕ್ಕಿಗಳ ಪಾಲಿಗೆ ಸುಲಭ ತುತ್ತಾಗೋದು ಕಾಮನ್. ಅದಕ್ಕಾಗಿಯೇ ವಿಜಯಪುರದ ರೈತರು ಈ ಸೈರನ್ ಮೊರೆ ಹೋಗಿದ್ದಾರೆ. ಹೀಗೆ ಸುಲಭವಾಗಿ ಪಕ್ಷಿಗಳು ಹಾರಿಕೊಂಡು ಬಾರದಂತೆ ಈ ಸೈರನ್ ತಡೆಯುತ್ತೆ. ಅದೇನೋ ಕರ್ಕಶ ಶಬ್ದ ಮೊಳಗುತ್ತಲೇ ದ್ರಾಕ್ಷಿ ಕಂಡ್ರೂ ದೂರ ಸರಿಯುತ್ತವೆ. ಸೋಲಾರ್ ಸಿಗ್ನಲ್ ಇದಾಗಿದ್ದು, ಇದ್ರಿಂದ ರೈತರು ನಿಟ್ಟುಸಿರು ಬಿಡುವಂತಾಗಿದೆ.
ಹೆಚ್ಚಿದ ಫಸಲು, ಲಾಭ!
ಈ ಹಿಂದೆ ದ್ರಾಕ್ಷಿ ಬೆಳೆದ ರೈತರು ಬೆಳೆಯನ್ನ ರಕ್ಷಿಸಲು ಸಿಡಿ ಮದ್ದು, ಪಟಾಕಿ, ವಿದ್ಯುತ್ ತಂತಿ ಹೀಗೆ ಹತ್ತು ಹಲವಾರು ಪ್ರಯೋಗಗಳನ್ನ ಮಾಡುತ್ತಿದ್ದರು. ಸದ್ಯ ಇದೆಲ್ಲವನ್ನ ಕೈ ಬಿಟ್ಟು ಹೊಸ ತಂತ್ರಜ್ಞಾನ ಬಳಸಿ ನೆಮ್ಮದಿ ಕಂಡುಕೊಂಡಿದ್ದಾರೆ.
ವಿಜಯಪುರ ರೈತರು ತಮ್ಮ ತೋಟದಲ್ಲಿರುವ ದ್ರಾಕ್ಷಿ ಹಣ್ಣಿನ ಬೆಳೆಯನ್ನ ರಕ್ಷಣೆ ಮಾಡಿಕೊಳ್ಳಲು ಗನ್ ಫೈರಿಂಗ್ ಸೌಂಡ್ ಬಳಸುವ ಮೂಲಕ ದ್ರಾಕ್ಷಿ ಬೆಳೆ ರಕ್ಷಣೆಯಲ್ಲಿ ರೈತರು ಯಶಸ್ವಿ ಆಗಿದ್ದಾರೆ. ಹೀಗಾಗಿ ವಿಜಯಪುರದಲ್ಲಿ ದ್ರಾಕ್ಷಿ ಬೆಳೆಗಾರರ ಸಂಖ್ಯೆ ಅಧಿಕವಾಗಿದೆ. ಜೊತೆಗೆ, ದ್ರಾಕ್ಷಿ ಬೆಳೆಯಿಂದ ಲಾಭವೂ ಹೆಚ್ಚಾಗಿದೆ.
ಕೈ ಹಿಡಿಯಿತು ಹೊಸ ಐಡಿಯಾ
ಇನ್ನು ಪ್ರಾಣಿ ಪಕ್ಷಿಗಳು ಅಷ್ಟೇ ಅಲ್ದೇ ಕಳ್ಳ ಕಾಕರು ಕೂಡ ಈ ಸೈರನ್ ಮೊಳಗುತ್ತಿದ್ರೆ ಸುಲಭವಾಗಿ ದ್ರಾಕ್ಷಿ ತೋಟಕ್ಕೆ ನುಸುಳಲಾರರು. ಹಿಂದೆ ಪ್ರತಿವರ್ಷ ದ್ರಾಕ್ಷಿ ಕಟಾವು ಬಂತೆಂದರೆ ಹಗಲು- ರಾತ್ರಿ ಎನ್ನದೇ ನಿದ್ದೆಯಿಲ್ಲದೇ ತೋಟ ಕಾಯುವುದು ಅನಿವಾರ್ಯ ಆಗುತ್ತಿತ್ತು. ಆದರೂ ತೋಟದ ಎಲ್ಲ ಮೂಲೆಗಳನ್ನು ಸಂರಕ್ಷಣೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಆದ್ರೀಗ ಶಬ್ದವೇ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸವನ್ನ ಮಾಡುತ್ತೆ. ಹೀಗಾಗಿ ದ್ರಾಕ್ಷಿ ಬೆಳೆ ರಕ್ಷಣೆಗೆ ಬಳಸುತ್ತಿದ್ದ ಕಲ್ಲು ಬೀಸುವ ಕವಣಿ, ಪಾತ್ರೆ ಅಥವಾ ಖಾಲಿ ಡಬ್ಬಗಳಿಗೆ ವಿಶ್ರಾಂತಿ ಸಿಕ್ಕಂತಾಗಿದೆ.
ತೀಕ್ಷ್ಣ ಶಬ್ದ ಮೊಳಗಿಸೋ ಸೈರನ್
ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಮಣ್ಣೂರು, ಟಕ್ಕಳಕಿ, ಕಾರಜೋಳ ಸೇರಿ ದ್ರಾಕ್ಷಿ ಬೆಳೆಯುವ ಕಡೆಗಳಲ್ಲಿ ರೈತರು ಸೌಂಡ್ ಸಿಸ್ಟಂ ಮೂಲಕ ಗನ್ಫೈರಿಂಗ್ ಮಾಡುವ ರಕ್ಷಣಾ ತಂತ್ರವನ್ನು ಬಳಕೆ ಮಾಡುತ್ತಿದ್ದಾರೆ. ಬಂದೂಕಿನಿಂದ ಗುಂಡು ಹಾರಿಸುವ ತೀಕ್ಷ್ಣ ಶಬ್ದಕ್ಕೆ ದ್ರಾಕ್ಷಿ ಹೊಲಗಳತ್ತ ಹಕ್ಕಿ, ಪಕ್ಷಿಗಳು ಸುಳಿಯುತ್ತಿಲ್ಲ.
ಇದನ್ನೂ ಓದಿ: Bagalkote: 24 ಗಂಟೆ ತೆರೆದೇ ಇರುತ್ತೆ ಈ ಗ್ರಾಮ ಪಂಚಾಯತ್!
ಸವಾಲಾಗಿದ್ದ ದ್ರಾಕ್ಷಿ ರಕ್ಷಣೆ!
ಪ್ರತಿ ಒಂದು ಎಕರೆಗೆ 2 ಸೋಲಾರ್ ಸೌಂಡ್ ಸಿಸ್ಟಮ್ ಅಳವಡಿಕೆ ಮಾಡಲಾಗಿದೆ. ಹಕ್ಕಿಗಳಿಂದ ದ್ರಾಕ್ಷಿ ಕಾಯೋದಕ್ಕಾಗಿಯೇ ತಿಂಗಳಿಗೆ 15 ರಿಂದ 20 ಸಾವಿರ ಖರ್ಚು ಮಾಡ್ತಿದ್ದ ರೈತರು, ಈಗ ಕೇವಲ 2 ಸಾವಿರ ರೂ.ಗಳಲ್ಲಿ ಸೌಂಡ್ ಸಿಸ್ಟಂ ಅಳವಡಿಸಿ ದ್ರಾಕ್ಷಿ ಸಂರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Vijayapura: ಕೃಷಿಕರಿಗೆ ನೆರವಾಗಲು ಬೃಹತ್ ಮೇಳ, ರೈತರ ಚಿತ್ತ ಸೆಳೆದ ಸಿರಿಧಾನ್ಯಗಳು
ಇನ್ನು ಇದು ಸೋಲಾರ್ ಸೌಂಡ್ ಸಿಸ್ಟಂ ಆಗಿರೋದ್ರಿಂದ ಕರೆಂಟ್ ಕೈಕೊಟ್ಟರೂ ಯಾವುದೇ ಸಮಸ್ಯೆಯಾಗೋದಿಲ್ಲ. ಒಟ್ಟಿನಲ್ಲಿ ದ್ರಾಕ್ಷಿ ಬೆಳೆಗಾರರು ಕಂಡುಕೊಂಡ ಸ್ಮಾರ್ಟ್ ಐಡಿಯಾ ದ್ರಾಕ್ಷಿ ಫಸಲನ್ನು ಹೆಚ್ಚಿಸಿದೆ, ಜೊತೆಗೆ ಲಾಭವನ್ನು ಕೂಡ!
ವರದಿ: ಪ್ರಶಾಂತ ಹೂಗಾರ್, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ