• Home
 • »
 • News
 • »
 • vijayapura
 • »
 • Snake Rescue Team: ಹಾವು ಕಂಡರೆ ಹೆದರಬೇಡಿ, ನಮಗೆ ಫೋನ್ ಮಾಡಿ! ಮೂವರು ಯುವಕರ ಈ ತಂಡ ಹೀಗಂತಿದೆ

Snake Rescue Team: ಹಾವು ಕಂಡರೆ ಹೆದರಬೇಡಿ, ನಮಗೆ ಫೋನ್ ಮಾಡಿ! ಮೂವರು ಯುವಕರ ಈ ತಂಡ ಹೀಗಂತಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿಜಯಪುರ ಜಿಲ್ಲೆಯ ಸಾರ್ವಜನಿಕರು ದಿನದ 24 ಗಂಟೆಯ ಯಾವುದೇ ಸಂದರ್ಭದಲ್ಲಿ ತಮ್ಮ, ರಸ್ತೆ, ಮನೆ ಜಮೀನಿನಲ್ಲಿ ಹಾವು ಕಂಡುಬಂದರೆ ಶಿವಾನಂದ, ಸೋಯಲ್, ಸಂಗನಗೌಡ ಇವರ ತಂಡಕ್ಕೆ ಮಾಹಿತಿ ನೀಡಬಹುದು. ಅರೇ! ಇವರಿಗೆ ಏಕೆ ಹಾವಿನ ಮಾಹಿತಿ ನೀಡಬೇಕು? ಅವರ ಕಾಂಟಾಕ್ಟ್ ನಂಬರ್ ಎಲ್ಲಿದೆ? ಎಲ್ಲದಕ್ಕೂ ಇತ್ತರ ಇಲ್ಲಿದೆ.

ಮುಂದೆ ಓದಿ ...
 • Share this:

  ವಿಜಯಪುರ: ಹಾವುಗಳೆಂದರೆ ಎಲ್ಲರಿಗೂ ಸಹಜವಾಗಿ ಭಯ. ಹಾವುಗಳಲ್ಲಿ ನಾಗರ ಹಾವನ್ನು ಕಂಡರಂತೂ ಕುಳಿತಲ್ಲೇ ಬೆವರುತ್ತೇವೆ. ಹಾವು ಕಂಡರೆ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಮಾರುದೂರ ಓಡುವ ಮನೋಭಾವ ನಮ್ಮಲ್ಲಿದೆ.  ಆದರೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ (Basavana Bagevadi) ಶಿವಾನಂದ ಬೇವನೂರ ಎಂಬ ಉರಗ ತಜ್ಞರ ತಂಡ ಸ್ವಯಂ ಪ್ರೇರಣೆಯಿಂದ ಜಿಲ್ಲೆಯಲ್ಲಿ ಹಾವುಗಳ ಜಾಗೃತಿ ಮೂಡಿಸುತ್ತಿದೆ. ವಿಜಯಪುರದ (Vijayapura Snake Capture Team) ಯಾರದ್ದೇ ಮನೆಯಲ್ಲಿ ಅಥವಾ ಜಮೀನಿನಲ್ಲಿ ಹಾವು ಕಂಡ ಕೂಡಲೇ ಇವರ ಮೊಬೈಲ್​ಗೆ ತಕ್ಷಣ ರಿಂಗಣಿಸುತ್ತದೆ.  ಹಾವು ಇದ್ದ ಸ್ಥಳಕ್ಕೇ ಹಾಜರಾಗುವ ಈ ತಂಡ (Snake Capture Team) ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಡುತ್ತದೆ. 


  ಶಿವಾನಂದ, ಸೋಯಲ್ ಮತ್ತು ಸಂಗನಗೌಡ ಈ ಮೂವರು ಕಾರ್ಯಪ್ರವೃತ್ತರಾಗಿ ಹಾವು ಹಿಡಿಯಲು ತೆರಳುತ್ತಾರೆ. ಹಾವು ರಕ್ಷಣೆ ಬಳಿಕ ನೆರೆಹೊರೆಯವರನ್ನ ಕರೆದು ವಾತಾವರಣದಲ್ಲಿ ಕಂಡು ಬರುವ ಹಾವುಗಳು ಹಾವುಗಳೆಲ್ಲ ವಿಷಕಾರಿಯಾಗಿರುವುದಿಲ್ಲ, ಅವುಗಳನ್ನ ದಯವಿಟ್ಟು ಕೊಲ್ಲಬೇಡಿ ಎಂದು ಸಲಹೆ ನೀಡುತ್ತಾರೆ.


  ಹಾವು ಜಾಗೃತಿ ಪುಸ್ತಕ, ಅದೂ ಕನ್ನಡದಲ್ಲಿ
  ಕನ್ನಡದಲ್ಲಿ ಹಾವುಗಳ ರಕ್ಷಣೆ ಮತ್ತು ಜಾಗೃತಿ ಕುರಿತು ಪುಸ್ತಕಗಳು ಕಡಿಮೆ. ಸದ್ಯ ಈ ಮೂವರು ಸೇರಿಕೊಂಡು ಪುಸ್ತಕ ರೂಪದಲ್ಲಿ ಬರೆದು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದ್ದಾರೆ.  ಆದರೆ ಇವರು 6 ವರ್ಷಗಳಿಂದ ಯಾವ ಹಾವು ವಿಷಕಾರಿ, ಯಾವ ಹಾವು ವಿಷಕಾರಿಯಲ್ಲವೆಂದು ಹಾವುಗಳ ಗುಣಲಕ್ಷಣ ತಿಳಿದು, ಅದರ ಕುರಿತು ಅಧ್ಯಯನ ಮಾಡಿ  ಸದ್ಯ ಪುಸ್ತಕದ ರೂಪದಲ್ಲಿ ಹೊರತರುವ ಪ್ರಯತ್ನ ಕೈಗೊಂಡಿದ್ದಾರೆ. 


  ಒಂದು ಘಟನೆ ಕೇಳಿ...
  ಇವರ ನೆರೆಯ ಗ್ರಾಮದಲ್ಲಿ ಸಣ್ಣ ಬಾಲಕನಿಗೆ ಕೊಳಕು ಮಂಡಲ ಹಾವು ಕಚ್ಚಿ ಗಾಯಗೊಳಿಸಿತ್ತು. ಕುಟುಂಬಸ್ಥರು ಮೂಢನಂಬಿಕೆಯ ಮೊರೆ ಹೋಗಿದ್ದರು. ಆ ಬಾಲಕನನ್ನು ಕಡೆಗೆ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವುದರಲ್ಲಿ ಮೃತಪಟ್ಟಿದ್ದ. ಈ ಯುವಕನನ್ನು ಕಣ್ಣಾರೆ ಕಂಡ ಶಿವಾನಂದ ಅವರಿಗೆ 2 ದಿನಗಳ ಬಳಿಕ ಯುವಕ ಮೃತಪಟ್ಟ ಬಗ್ಗೆ ಸುದ್ದಿ ಗೊತ್ತಾಗುತ್ತದೆ. ಇದರಿಂದ ಮನನೊಂದು ಇವರು ಸ್ವಯಂ ಪ್ರೇರಣೆಯಿಂದ ಯಾರ ಸಹಾಯವಿಲ್ಲದೇ, ಹಾವುಗಳ ರಕ್ಷಣೆಗೆ ಮುಂದಾಗಿದ್ದಾರೆ.


  ಇಲ್ಲಿವರೆಗೆ ಎಷ್ಟು ಹಾವುಗಳನ್ನು ರಕ್ಷಿಸಿದ್ದಾರೆ?
  ಇಲ್ಲಿಯವರೆಗೆ ಅಂದಾಜು 2 ಸಾವಿರದವರೆಗೆ ಹಾವುಗಳ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ವಿಷಕಾರಿ ಹಾವುಗಳನ್ನು ರಕ್ಷಿಸಿ ಅರಣ್ಯ ಇಲಾಖೆಯ ಸಹಾಯದಿಂದ ದೂರಕ್ಕೆ ಸಾಗಿಸಿ ಕಾಡಿನಲ್ಲಿ ಬಿಡುತ್ತಾರೆ. ಆದರೆ ವಿಷಮುಕ್ತ ಹಾವುಗಳನ್ನು ಸ್ಥಳೀಯ ಅರಣ್ಯದಲ್ಲಿ ತಾವೇ ಬಿಟ್ಟುಬರುತ್ತಾರೆ. 


  ಹಾವುಗಳ ಬಗ್ಗೆ ನಿಮಗೆಷ್ಟು ಗೊತ್ತು?
  ನಮ್ಮ ಬರಪೀಡಿತ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ, ಕಲಬುರ್ಗಿ ಜಿಲ್ಲೆಗಳಲ್ಲಿ ಅಂದಾಜು 25 ರಿಂದ 30 ಜಾತಿಯ ಹಾವುಗಳು ಕಂಡುಬರುತ್ತವೆ. ಆದರೆ ಅದರಲ್ಲಿ 6 ಜಾತಿಯ ಹಾವುಗಳು ಮಾತ್ರ ವಿಷಕಾರಿಯಾಗಿವೆ. ಹೀಗಾಗಿ ಸಾರ್ವಜನಿಕರು ಎಲ್ಲ ಹಾವುಗಳನ್ನೂ ವಿಷಕಾರಿಯೆಂದು ಭಾವಿಸಿ ಕೊಲ್ಲಲು ಮುಂದಾಗುತ್ತಾರೆ. ಇನ್ನುಳಿದ ಹಾವುಗಳು ವಿಷಮುಕ್ತವಾಗಿರುತ್ತವೆ. ನಾಗರಹಾವು ಮತ್ತು ಕೊಳಕುಮಂಡಲದಂತಹ ಹಾವುಗಳು ಕಚ್ಚಿದರೆ ಅಪಾಯಕಾರಿಯಾಗಿರುತ್ತದೆ ಎನ್ನುತ್ತಾರೆ ಶಿವಾನಂದ ಬೇವನೂರ. 


  ನಾಗರಹಾವುಗಳಿಗೆ ಕೋಪ ಹೆಚ್ಚೇ?
  ಉತ್ತರ ಕರ್ನಾಟಕದ ಬಯಲು ಪ್ರದೇಶ ಸೇರಿದಂತೆ ಹಲವಾರು ಭಾಗಗಳಲ್ಲಿ ಕರಿನಾಗರ, ಮಿಡಿನಾಗರ, ಗೋಧಿ ಬಣ್ಣದ ನಾಗರಹಾವುಗಳು ಹೆಚ್ಚಾಗಿ ಕಾಣಿಸುತ್ತವೆ. ಈ ಹಾವು ಬುಸುಗುಟ್ಟುವುದನ್ನು ಕಂಡರೆ ಎಂತವರಿಗೂ ನಡುಕ ಹುಟ್ಟದೇ ಇರದು. ಹೀಗಾಗಿ ಈ ಹಾವಿನ ತಂಟೆಗೆ ಯಾರೂ ಹೋಗಲ್ಲ. ಕೆಲವರಂತೂ ಕಂಡರೆ ಸಾಕು, ದೂರದಿಂದಲೇ ದೈವಿ ಸ್ವರೂಪವಾದ ನಾಗರಹಾವೆಂದು ಭಾವಿಸಿ ಕೈ ಮುಗಿದು ಹೊರಡುತ್ತಾರೆ.  ಆದರೆ ಹಾವು ಕಚ್ಚಿದರೆ ಪ್ರಥಮ ಚಿಕಿತ್ಸೆ ಏನು ? ಹಾವು ಕಚ್ಚಿದ ಕೂಡಲೇ ಗಾಬರಿಯಾಗದೆ ನೆರೆಹೊರೆಯವರ ಆಸರೆಯೊಂದಿಗೆ ಸಮೀಪದ ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ ವೈದ್ಯರಿಗೆ ಹಾವು ಕಚ್ಚಿದ ಬಗ್ಗೆ ಮಾಹಿತಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು.


  ಔಷಧ ಇದೆ, ಹೆದರಬೇಡಿ
  ಹಾವು ಕಚ್ಚಿದ 30 ನಿಮಿಷದಲ್ಲಿ ಆಸ್ಪತ್ರೆಯಲ್ಲಿರಬೇಕು. ಹಾವುಗಳಿಂದ ಕಚ್ಚಿಸಿಕೊಂಡು ಸೂಕ್ತ ಚಿಕಿತ್ಸೆ ಇಲ್ಲದೇ ಸಾವನ್ನಪ್ಪಿದ ಸಾಕಷ್ಟು ಪ್ರಕರಣ ನಮ್ಮ ಮುಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲ ಆಸ್ಪತ್ರೆಗಳಲ್ಲಿ ‘ಪಾಲಿವೆಂಟ್ ಆ್ಯಂಟಿ ಸ್ನೇಕ್ ವೆನಮ್’ ಔಷಧಿಯನ್ನು ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸರ್ಕಾರ ದೊರೆಯುವಂತೆ ಮಾಡಿದೆ. ಈ ಇಂಜೆಕ್ಷನ್ ಪಡೆದುಕೊಂಡರೆ ವೈದ್ಯರು ನೀಡಿದ ಸಲಹೆಯೊಂದಿಗೆ ಸಾವಿನಿಂದ ಪಾರಾಗಬಹುದು ಎನ್ನುತ್ತಾರೆ ಸೋಯಲ್.


  ದಯವಿಟ್ಟು ದುಸ್ಸಾಹಸಕ್ಕೆ ಮುಂದಾಗಬೇಡಿ…
  ಹಳ್ಳಿಯಜನರು ಬಹುತೇಕ ಹಾವು ಕಚ್ಚಿದಾಗ ಬೇರೆ ಬೇರೆ ಪ್ರಯೋಗಕ್ಕೆ ಮುಂದಾಗುತ್ತಾರೆ. ವ್ಯಕ್ತಿಗೆ ಹಾವು ಕಚ್ಚಿದ ಕೂಡಲೇ ಕಚ್ಚಿದ ಸ್ಥಳದಲ್ಲಿ ಕಲ್ಲಿನಿಂದ ಜಜ್ಜುವುದು, ಬಾಯಿಯಿಂದ ವಿಷವನ್ನು ಹೀರುವುದು, ಬ್ಲೇಡ್​ನಿಂದ ಕತ್ತರಿಸುವುದು ಇತ್ಯಾದಿಗಳನ್ನು ಮಾಡಬಾರದು. ಇದು ಗಾಯಗೊಂಡ ವ್ಯಕ್ತಿಯನ್ನು ಮತ್ತಷ್ಟು ಅಶಕ್ತರನ್ನಾಗಿ ಮಾಡುತ್ತದೆ. ಹಲವರು  ದೇವಸ್ಥಾನಕ್ಕೆ ತೆರಳಿ ನೀರು ಹಾಕಿಸಿಕೊಳ್ಳುವುದು,  ಹರಳು ಕಟ್ಟುವುದು ಮಾಡುತ್ತಾರೆ. ದಯವಿಟ್ಟು ಯಾರೂ ಹೀಗೆಲ್ಲ ಮಾಡದೇ ಸಮರ್ಪಕ ಚಿಕಿತ್ಸೆ ಪಡೆಯಬೇಕು ಎನ್ನುತ್ತದೆ ಈ ತಂಡ.


  10ಕ್ಕೂ ಹೆಚ್ಚು ಬಾರಿ ಕಚ್ಚಿದ ಹಾವು
  ಮನೆ, ತೋಟ, ಆಟದ ಮೈದಾನಗಳಲ್ಲಿ ಹಾವು ರಕ್ಷಿಸುವ ವೇಳೆ ಶಿವಾನಂದ ಅವರು ಅಂದಾಜು 10ಕ್ಕೂ ಹೆಚ್ಚು ಬಾರಿ ಹಾವುಗಳಿಂದ ಕಚ್ಚಿಸಿಕೊಂಡಿದ್ದಾರೆ. ಶಿವಾನಂದ ಅವರು ಎದುರಿಸುವ ಅಪಾಯ ಮನಗಂಡ ಅರಣ್ಯ ಇಲಾಖೆ ಅಧಿಕಾರಿಗಳು ಇವರಿಗೆ ಹಾವು ಹಿಡಿಯಲು ಬಳಸುವ ವಸ್ತುಗಳ ಕಿಟ್ ನೀಡಿದ್ದಾರೆ. ಸದ್ಯ ಈ ಕಿಟ್ ಬಳಸಿ  ಹಾವುಗಳನ್ನು ಹಿಡಿಯುತ್ತಿದ್ದಾರೆ.


  ಹಾವು ಕಂಡರೆ ತಕ್ಷಣ ಮಾಹಿತಿ ನೀಡಿ
  ವಿಜಯಪುರ ಜಿಲ್ಲೆಯ ಸಾರ್ವಜನಿಕರು ದಿನದ 24 ಗಂಟೆಯ ಯಾವುದೇ ಸಂದರ್ಭದಲ್ಲಿ ತಮ್ಮ, ರಸ್ತೆ, ಮನೆ ಜಮೀನಿನಲ್ಲಿ ಹಾವು ಕಂಡುಬಂದರೆ ಶಿವಾನಂದ, ಸೋಯಲ್, ಸಂಗನಗೌಡ ಇವರ ತಂಡಕ್ಕೆ ಮಾಹಿತಿ ನೀಡಬಹುದಾಗಿದೆ.


  ಶಿವಾನಂದ ಅವರ ಸಂಪರ್ಕ ಸಂಖ್ಯೆ:  ಶಿವಾನಂದ ಬೇವನೂರ 9535887944


  ನೀವು ಮಾಹಿತಿ ನೀಡಿದ ಸ್ಥಳಕ್ಕೆ ಬಂದು ಹಾವುಗಳನ್ನು ರಕ್ಷಣೆ ಮಾಡಿ ಕಾಡಿಗೆ ಬಿಡುತ್ತದೆ ಈ ತಂಡ.  ಮರೆಯಬೇಡಿ!
  ವರದಿ:  ಪ್ರಶಾಂತ ಹೂಗಾರ, ವಿಜಯಪುರ

  Published by:guruganesh bhat
  First published: