ವಿಜಯಪುರ: ಅಬ್ಬಬ್ಬ! ಶಸ್ತ್ರ ಹಿಡಿದು ಬೀಸೋ ಪರಿ ನೋಡ್ಬೇಕು. ಲೀಲಾಜಾಲವಾಗಿ ದೇಹದ ಭಾಗಗಳಿಗೆ ಚುಚ್ಚಿಸಿಕೊಳ್ಳೋ ಆ ದೃಶ್ಯ ನೋಡ್ಬೇಕು. ಎಂಟೆದೆ ಬಂಟನೂ ಒಂದು ಕ್ಷಣ ಹೌಹಾರೋದು ಗ್ಯಾರಂಟಿ. “ಆಹಾ ವೀರ, ಆಹಾ ರುದ್ರ, ಆಹಾ ಶರಭ” ಅಂತಾ ಮೊಳಗೋ ಘೋಷಣೆ ಈ ಪುರವಂತರ (Puravantaru) ಮೈ ಝುಮ್ಮ್ ಎನ್ನಿಸೋ ಈ ಕುಣಿತ ಎಂಥವರನ್ನೂ ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತೆ.
ಹೌದು, ಇಂತಹ ದೃಶ್ಯ ಕಂಡುಬಂದಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಸಂತಿವಡವಡಿಗಿ ಗ್ರಾಮದ ಆರಾಧ್ಯ ದೈವ ನಂದೀಶ್ವರ ದೇವರ ಜಾತ್ರೆಯಲ್ಲಿ. ಬೆಳಗ್ಗೆ ದೇವರ ಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಇದಾದ ಬಳಿಕ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶವನ್ನ ಮಾಡಿಕೊಡಲಾಯಿತು. ನಂತರ ಗ್ರಾಮದ ಪ್ರಮುಖ ಬೀದಿ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಸಡಗರ ಸಂಭ್ರಮದಿಂದ ಜರುಗಿತು. ಈ ಜಾತ್ರೆಯ ಕೇಂದ್ರ ಬಿಂದುವೇ ಈ ಪುರವಂತಿಕೆ.
ಪುರವಂತಿಕೆ ಮೇಳದ ವೈಭವ
ಪುರವಂತಿಕೆ ಮೇಳ ಸಾಂಸ್ಕೃತಿಕವಾಗಿ ಅತ್ಯಂತ ಮಹತ್ವದ ಆಚರಣೆ ಮತ್ತು ಕಲೆ. ಅಂದರೆ ಪುರಗಳನ್ನು ಹಿಂದೊಮ್ಮೆ ಶತ್ರುಗಳಿಂದ ರಕ್ಷಿಸಲೆಂದೇ ಶಸ್ತ್ರಧಾರಿಗಳಾಗಿದ್ದವರು ಈ ಪುರವಂತರು. ವೀರಗಾಸೆ ಅಥವಾ ವೀರಭದ್ರನ ಕುಣಿತದ ಕಲಾವಿದರ ಬಗ್ಗೆ ಇರುವ ನಂಬಿಕೆಯಂತೆ ಪುರವಂತರೂ ವೀರಭದ್ರನ ಅವತಾರವೆಂಬ ಪ್ರತೀತಿ ಇದೆ.
ಆಕರ್ಷಕ ವೇಷಧಾರಿ
ಪುರವಂತರು ವೀರಾವೇಶದಿಂದ ಕುಣಿಯುತ್ತಾ ಬರುವಾಗ ಮಧ್ಯದಲ್ಲಿ ಹರಕೆ ಹೊತ್ತವರು ಇವರ ಕೈಯಿಂದ ಶಸ್ತ್ರಗಳನ್ನು ದೇಹದ ವಿವಿಧ ಭಾಗಗಳಲ್ಲಿ ಶಸ್ತ್ರವನ್ನ ಹಾಕಿಸಿಕೊಳ್ಳುವುದುಂಟು. ಇನ್ನು ಪುರವಂತರು ಧರಿಸುವ ವೇಷಭೂಷಣ ನೋಡಲು ಆಕರ್ಷಕ ಹಾಗೂ ವರ್ಣಮಯವಾಗಿರುತ್ತದೆ. ವೀರಗಾಸೆ ಹಾಕಿದ ಕಾವಿ ರೇಷ್ಮೆ ಧೋತ್ರ ಹಾಗೂ ಕಾವಿ ಅಂಗಿ ಧರಿಸಿ ಸೊಂಟಕ್ಕೆ ನಡುಕಟ್ಟನ್ನು ಕಟ್ಟಿರುತ್ತಾರೆ. ಕೆಲವು ಕಡೆ ಬಿಗಿ ಪೈಜಾಮ ಹಾಕಿ ತುದಿಯಲ್ಲಿ ಕಾಲಿಗೆ ಹತ್ತಿಕೊಳ್ಳುವಂತೆ ಕಟ್ಟಿರುತ್ತಾರೆ.
ಇದನ್ನೂ ಓದಿ: Vijayapura Apple Farming: ಬರದ ನಾಡಿನಲ್ಲಿ ಕಾಶ್ಮೀರಿ ಸೇಬು ಬೆಳೆದು ಸೈ ಎನಿಸಿಕೊಂಡ ರೈತ!
ವಿಭಿನ್ನ ವೇಷಭೂಷಣ
ಮೈಮೇಲೆ ಹಾಕಿಕೊಳ್ಳುವ ಈ ವಸ್ತ್ರದ ಅಂಚು ಚುಂಗುಗಳಿಂದ ಅಲಂಕಾರವಾಗಿರುತ್ತದೆ. ತಲೆಗೆ ರೇಷ್ಮೆ ರುಮಾಲು, ತೊಳಿಗೆ ಬೆಳ್ಳಿಯ ನಾಗರಗಳು. ಎದೆಗೆ ತೀರ್ಥ ಮುಖಗಳು. ದರ್ಪಣ ನಡುವಿಗೆ ನರಸಿಂಹ ಮುಖ ಹಾಗೂ ರುಂಡಮಾಲೆಗಳ ತರಹ ರುದ್ರಾಕ್ಷಿ ಸರಗಳು. ಕೈಮಣಿಕಟ್ಟಿಗೆ ರುದ್ರಾಕ್ಷಿ, ಕೊರಳಿಗೆ ರುದ್ರಾಕ್ಷಿ ಮಾಲೆ ಕಿವಿಗಳಿಗೆ ರುದ್ರಾಕ್ಷಿ ಪಕ್ಕದಲ್ಲಿ ಸಣ್ಣ ರಕ್ಷಾ ಜೋಳಿಗೆ .ಹಣೆಗೆ ವಿಭೂತಿ ಇವಿಷ್ಟು ಪುರವಂತರ ವೇಷಭೂಷಣಗಳು. ಕಲಾವಿದರು ಬಲಗೈಯಲ್ಲಿ ಖಡ್ಗ ಅಥವಾ ತ್ರಿಶೂಲ ಹಿಡಿದಿರುತ್ತಾರೆ.
ಪುರವಂತರು ಆವೇಶಭರಿತರಾಗಿ ಕುಣಿಯುತ್ತಾ'' ಆಹಾ ವೀರ, ಆಹಹಾ ರುದ್ರ" ಎಂದು ಪ್ರಾರಂಭಿಸಿ ವೀರಭದ್ರನ ರೌದ್ರಾವತಾರವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಾರೆ. ಜೊತೆಗೆ ಶರಭಾವತಾರ ಮತ್ತು ಶಿವನ ವರ್ಣನೆಗಳನ್ನು ಸೊಗಸಾಗಿ ಹೇಳುತ್ತಾರೆ.
ಇದನ್ನೂ ಓದಿ: Banashankari Temple History: ಬನಶಂಕರಿ ದೇವಿಯ ಹೆಸರಿನ ಹಿಂದಿದೆ ಈ ವಿಶೇಷ ಅರ್ಥ!
ಶಸ್ತ್ರ ಪವಾಡ
ಇನ್ನು ಕಲಾವಿದರು ಆವೇಶದಿಂದ ಕುಣಿಯುವಾಗ ಶಸ್ತ್ರಗಳನ್ನು ಲೀಲಾಜಾಲವಾಗಿ ದೇಹದ ವಿವಿಧ ಭಾಗಗಳಿಗೆ ಚುಚ್ಚಿಕೊಳ್ಳುತ್ತಾರೆ. ನೋಡುವವರಿಗೆ ಭಯಾನಕ ದೃಶ್ಯವೆನಿಸಿದ್ರೂ, ಕಲಾವಿದರಿಗೆ ಇದೊಂದು ಸಾಮಾನ್ಯ ಕ್ರಿಯೆ. “ದೇವರ ಬಗ್ಗೆ ಪೂರ್ಣವಾದ ನಂಬಿಕೆಯನ್ನಿಟ್ಟು ಶಸ್ತ್ರವನ್ನು ಚುಚ್ಚಿದರೆ ನಮಗೆ ನೋವಾಗುವುದಿಲ್ಲ” ಎನ್ನುವ ಕಲಾವಿದರು ಪಣಿ ಶಸ್ತ್ರನಾಭಿಶಸ್ತ್ರ, ಜನಿವಾರ ಶಸ್ತ್ರ, ಕಂಠಶಸ್ತ್ರ, ಗುಪ್ತಶಸ್ತ್ರ ಹೀಗೆ ಹತ್ತಾರು ಬಗೆಯ ಶಸ್ತ್ರ ಪವಾಡ ನಡೆಸುತ್ತಾರೆ. ಹೀಗೆ ನಂದೀಶ್ವರ ಜಾತ್ರೆಯಲ್ಲಿ ಪುರವಂತಿಕೆ ಮೇಳ ಭಾರೀ ಕುತೂಹಲ ಹುಟ್ಟಿಸುತ್ತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ