ಬಾಗಲಕೋಟೆ: ಇಳಕಲ್ ಸೀರೆ ಉಟ್ಕೊಂಡು ಮಿಂಚಿದ ಹುಡುಗಿಯರು, ಪಂಚೆ, ಧೋತಿ ಧರಿಸಿ ಕಾಲೇಜಿಗೆ ಬಂದಿದ್ದ ಹುಡುಗರು. ಕ್ಯಾಂಪಸ್ನಲ್ಲಂತೂ ರಂಗೋಲಿಯದ್ದೇ ರಂಗು. ಊಟೋಪಚಾರ, ವಿವಿಧ ಬಗೆಯ ತಿಂಡಿ ತಿನಿಸುಗಳ ಕಲರವ. ಹೌದು, ಇಡೀ ಕಾಲೇಜು ಕ್ಯಾಂಪಸ್ (Collage Campus) ಮದುವಣಗಿತ್ತಿಯಂತೆ ಕಂಗೊಳಿಸುತ್ತಿದ್ರೆ, ಕಾಲೇಜಲ್ಲೇನೋ ಹಳ್ಳಿ ಸೊಗಡಿನ ಹಬ್ಬ (Sankranthi Festival) ಅನ್ನೋ ವಾತಾವರಣ ಮೂಡಿಸಿತ್ತು.
ನಿಜ, ಬಾಗಲಕೋಟೆ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಸಂಕ್ರಾಂತಿ ಹಬ್ಬ ವಿಶೇಷ ಕಳೆ ತುಂಬಿತ್ತು. ಕಾಲೇಜ್ ಕ್ಯಾಂಪಸ್ ಎಲ್ಲೆಡೆ ಖುಷಿಯ ವಾತಾವರಣ, ಬಗೆಬಗೆಯ ಔತಣ, ಸುಂದರ ತಳಿರು ತೋರಣ, ಬಣ್ಣ ಬಣ್ಣದ ಉಡುಗೆ ತೊಡೆಗೆಗಳ ಸಂಭ್ರಮಕ್ಕೆ ಸಾಕ್ಷಿಯಾಯಿತು. ಕಾಲೇಜು ಆವರಣ ಹಳ್ಳಿ ಸೊಗಡಿಗೆ ಪೈಪೋಟಿ ನೀಡುವಂತೆ ನಿರ್ಮಾಣಗೊಂಡಿತ್ತು.
ಹೀಗಿತ್ತು ಸಂಭ್ರಮದ ಉಡುಗೆ ತೊಡುಗೆ
ಹಳ್ಳಿ ಹೈದರಂತೆ ಬಂದಿದ್ದ ವಿದ್ಯಾರ್ಥಿಗಳು ಧೋತಿ, ಪಂಚೆ, ತಲೆಗೆ ರುಮಾಲು ಸುತ್ತಿ ಮಿಂಚಿದರೆ, ಇಳಕಲ್ ಸೀರೆಯಲ್ಲಿ ವಿದ್ಯಾರ್ಥಿನಿಯರು ಕಂಗೊಳಿಸುತ್ತಿದ್ದರು. ಕಬ್ಬು, ತಳಿರು ತೋರಣಗಳಿಂದ ಸಿಂಗಾರಗೊಂಡ ಕಾಲೇಜು ಸಂಭ್ರಮಕ್ಕೊಂದು ಕಳಶವಾಗಿತ್ತು. ರಂಗೋಲಿ ಸ್ಪರ್ಧೆಯಂತೂ ಕಾಲೇಜಿನ ಅಂದವನ್ನು ಇಮ್ಮಡಿಗೊಳಿಸಿತ್ತು.
ಇದನ್ನೂ ಓದಿ: Siddeshwar Swamiji: ದಾಸೋಹಿಗೆ ಅಕ್ಕಿಯ ನಮನ! ಇಲ್ಲಿದೆ ನೋಡಿ ಭಾವನಾತ್ಮಕ ವಿಡಿಯೋ
ತಿಂಡಿ ತಿನಿಸೂ ಕಡಿಮೆಯಿರಲಿಲ್ಲ!
ವಿದ್ಯಾರ್ಥಿಗಳು ಫುಡ್ ಫೆಸ್ಟ್ ಹಮ್ಮಿಕೊಳ್ಳುವುದರ ಮೂಲಕ ಬಗೆ ಬಗೆಯ ತಿಂಡಿ ತಿನಿಸುಗಳನ್ನು ಮನೆಯಲ್ಲೇ ಸಿದ್ದಪಡಿಸಿಕೊಂಡು ಬಂದಿದ್ದರು. ಸಜ್ಜೆ ರೊಟ್ಟಿ, ಶೇಂಗಾ ಹೋಳಿಗೆ, ಬಾಣ, ಹಪ್ಪಳ ಊಟದ ರುಚಿ ಹೆಚ್ಚಿಸಿದ್ದರೆ ಸಿಹಿ ತಿನಿಸುಗಳಾದ ಗುಲಾಬ್ ಜಾಮೂನ್, ಎಳ್ಳುಂಡೆ, ಚಕ್ಕುಲಿ, ಶಂಕರಪೋಳೆ, ಶೇಂಗಾ ಚಿಕ್ಕಿಗಳು ಸಂಭ್ರಮಕ್ಕೆ ಮತ್ತಷ್ಟು ಸಿಹಿ ತುಂಬಿದ್ದವು. ವಿದ್ಯಾರ್ಥಿಗಳು ಮತ್ತು ಕಾಲೇಜು ಸಿಬ್ಬಂದಿಗಳು ಖರೀದಿಸಿ ಊಟದ ಸವಿ ಸವಿದರು. ಇನ್ನು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬಗೆಬಗೆಯ ಗಾಳಿಪಟಗಳನ್ನು ತಯಾರಿಸಿ ಬಾನಂಗಳದಲ್ಲಿ ಹಾರಿಸಿದ್ದು ವಿವಿಧ ಹಕ್ಕಿಗಳು ರೆಕ್ಕೆ ಚಾಚಿ ಆಕಾಶಕ್ಕೆ ನೆಗೆದಂತೆ ಕಾಣುತ್ತಿತ್ತು.
ಇದನ್ನೂ ಓದಿ: Vijayapura: ಮಣ್ಣು ಉಳಿಸೋಕೆ ಕಾಶ್ಮೀರದಿಂದ ಕನ್ಯಾಕುಮಾರಿಗೆ ಕಾಲ್ನಡಿಗೆ ಹೊರಟ ಯುವಕ!
ಒಟ್ಟಿನಲ್ಲಿ ಸಂಕ್ರಾಂತಿ ಸಂಭ್ರಮದಲ್ಲಿ ಬಾಗಲಕೋಟೆಯ ಬಸವೇಶ್ವರ ಮಹಾವಿದ್ಯಾಲಯ ಹಳ್ಳಿ ಸೊಗಡಿನತ್ತ ವಾಲಿದ್ದರೆ, ವಿದ್ಯಾರ್ಥಿ-ವಿದ್ಯಾರ್ಥಿನಿಯರೆಲ್ಲರೂ ಸಂಭ್ರಮದ ಕಡಲಲ್ಲಿ ಮಿಂದೆದ್ದರು.
ವರದಿ: ಪ್ರಶಾಂತ ಹೂಗಾರ, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ