ಬಾಗಲಕೋಟೆ: ಬೃಹತ್ತಾದ ಗೋಪುರ, ಕಣ್ಮನ ಸೆಳೆಯೋ ನದಿ ನೀರಿನ (Krishna River) ಹರಿವು. ನೀರಲ್ಲೇ ನಿರ್ಮಾಣವಾದ ಗಟ್ಟಿಮುಟ್ಟಾದ ಕಾರಿಡಾರ್. ದೇವಾಲಯದ ಒಳಹೊಕ್ಕಾಗ ಸಿಗೋ ಆನಂದ, ಸದಾ ಕೇಳಿ ಬರುವ ಗಂಟೆ ನಾದ. ಹೀಗೆ ಈ ತಾಣವೇ ವಿಶಿಷ್ಟ ಅನುಭವ ನೀಡುವ ಕ್ಷೇತ್ರ. ಅಷ್ಟಕ್ಕೂ ಈ ಪುಣ್ಯಕ್ಷೇತ್ರ (Kudala Sangama) ಯಾವುದು ಅಂತೀರಾ? ಹೇಳ್ತೀವಿ ನೋಡಿ.
ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿರುವ ಜಗಜ್ಯೋತಿ ಬಸವೇಶ್ವರರ ಐಕ್ಯ ಸ್ಥಳ. ಇಲ್ಲಿ ಕಾಣೋ ಕೂಡಲ ಸಂಗಮನಾಥ ದೇಗುಲವು ಸುಂದರವಾದ ಕೆತ್ತನೆ ಹೊಂದಿರುವ ಕಲ್ಯಾಣ ಚಾಲುಕ್ಯರ ಕೊಡುಗೆಯಾಗಿದೆ. ಇಲ್ಲಿಗೆ ಆಗಮಿಸೋ ಭಕ್ತರು ದೇವಸ್ಥಾನದ ಒಳಗಡೆ ಶಿವನನ್ನ ಹೋಲುವ ಸಂಗಮನಾಥನಿಗೆ ಭಕ್ತಿಯಿಂದ ಕೈ ಮುಗಿಯುತ್ತಾರೆ. ಇಲ್ಲಿ ನಿತ್ಯ ವಿಶೇಷ ಪೂಜೆ, ಮಂಗಳಾರತಿ, ಕಳಸಾರತಿ ನೆರವೇರುತ್ತವೆ.
ಕೃಷ್ಣಾ, ಮಲಪ್ರಭಾ ನದಿಗಳ ಸಂಗಮ
ವಿಶೇಷ ಅಂದ್ರೆ ಪ್ರಮುಖವಾಗಿ ರಾಜ್ಯದ ಸಾಕಷ್ಟು ತೀರ್ಥ ಕ್ಷೇತ್ರಗಳಲ್ಲಿ ಕೂಡಲಸಂಗಮ ಮುಂಚೂಣಿಯಲ್ಲಿದೆ. ಕೃಷ್ಣಾ ಮತ್ತು ಮಲಪ್ರಭಾ ನದಿಗಳು ಇಲ್ಲೇ ವಿಲೀನಗೊಳ್ಳೋದು ಈ ಕ್ಷೇತ್ರದ ಇನ್ನೊಂದು ವಿಶೇಷ. ಪ್ರತಿನಿತ್ಯ ಇಲ್ಲಿ ನಸುಕಿನ ಜಾವ 5 ಗಂಟೆಗೆ ದೇವರ ಮೂರ್ತಿಗೆ ಪೂಜೆ ಸಲ್ಲಿಸಲಾಗುತ್ತೆ. ಬೆಳಗ್ಗೆ 6.30ಕ್ಕೆ ಅಭಿಷೇಕ, ಮತ್ತೆ 8.30ಕ್ಕೆ ಅಭಿಷೇಕ ಹಾಗೂ 10.30ಕ್ಕೆ ಪೂಜೆ ನೆರವೇರುತ್ತೆ. ಮಧ್ಯಾಹ್ನ 12 ಗಂಟೆಗೆ ದೇವರ ಮೂರ್ತಿಗೆ ನೈವೇದ್ಯ ಸಮರ್ಪಣೆ ಆಗುತ್ತದೆ. ಸಂಜೆ 5 ಗಂಟೆಗೆ ಪೂಜೆ ಮತ್ತು ಮಂಗಳಾರತಿ ಇರುತ್ತದೆ. ಮತ್ತೆ ರಾತ್ರಿ 8.30ಕ್ಕೆ ಪೂಜೆ ನೆರವೇರಿದ ಬಳಿಕ ದೇವಸ್ಥಾನವನ್ನ ಕ್ಲೋಸ್ ಮಾಡಲಾಗುತ್ತೆ.
ಸಮಾಧಿ ಸ್ಥಳ ತಲುಪುವುದು ಹೀಗೆ
ಬಸವೇಶ್ವರರ ಐಕ್ಯ ಮಂಟಪ ನೋಡಲೆಂದೇ ಇಲ್ಲಿಗೆ ಭಕ್ತರು ಆಗಮಿಸೋದು ಹೆಚ್ಚು. ನಾಲ್ಕು ಸ್ತಂಭಗಳ ಮೇಲೆ ನಿಂತಿರುವ ಗಟ್ಟಿಮುಟ್ಟಾದ ಸೇತುವೆ ಮಾದರಿಯ ಕಾರಿಡಾರ್ನಲ್ಲಿ ನಡೆದು ಮೆಟ್ಟಿಲಿನಿಂದ ಇಳಿದು ಹೋದರೆ ಬಸವಣ್ಣನವರ ಸಮಾಧಿ ಸ್ಥಳ ತಲುಪಬಹುದು.
ಇದನ್ನೂ ಓದಿ: Vijayapura: ಹೆಲಿಕಾಪ್ಟರ್ನಲ್ಲಿ ವಿಜಯಪುರ ಸುತ್ತಿ! ಆಕಾಶದಿಂದ ಹೀಗೆ ಕಾಣುತ್ತೆ ನೋಡಿ ಗೋಲ್ ಗುಂಬಜ್
ಪ್ರವಾಸಿಗರೇ ಹೀಗೆ ಬನ್ನಿ
ಇನ್ನು ಪ್ರವಾಸಿಗರು ಕೂಡಲ ಸಂಗಮಕ್ಕೆ ಆಗಮಿಸಲು ಬಸ್ ಮತ್ತು ರೈಲು ಎರಡೂ ಸೌಲಭ್ಯವಿದೆ. ಬಾಗಲಕೋಟೆಯಿಂದ ಕೂಡಲ ಸಂಗಮ ತಲುಪಲು ಸರ್ಕಾರಿ ಬಸ್ಸುಗಳು ಸೌಲಭ್ಯವಿದೆ. ಸಮೀಪದಲ್ಲೇ ಕೂಡಲ ಸಂಗಮ ಮತ್ತು ಬಾಗಲಕೋಟೆ ರೈಲು ನಿಲ್ದಾಣಗಳೂ ಇವೆ.
ಇದನ್ನೂ ಓದಿ: Siddheshwar Jatre: ಸಿದ್ದರಾಮೇಶ್ವರ ಜಾತ್ರೆಯಲ್ಲಿ ಬಿಳಿ ಬಟ್ಟೆಯನ್ನೇ ಧರಿಸೋದೇಕೆ?
ಕೂಡಲ ಸಂಗಮಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಕೂಡಲ ಸಂಗಮದಲ್ಲಿರೋ ಯಾತ್ರಿ ನಿವಾಸ ಮತ್ತು ಇತರ ವಸತಿಗೃಹಗಳಲ್ಲೇ ವಸತಿ ದೊರೆಯುತ್ತೆ. ಮಧ್ಯಾಹ್ನ ಮತ್ತು ರಾತ್ರಿಯೂಟವೂ ಉಚಿತವಾಗಿ ದೇಗುಲದ ಭೋಜನಾಲಯದಲ್ಲಿಯೇ ದೊರೆಯೋದು ಇಲ್ಲಿನ ಇನ್ನೊಂದು ವಿಶೇಷ. ನೀವೂ ಬಾಗಲಕೋಟೆಗೆ ಬಂದ್ರೆ ಕೂಡಲಸಂಗಮದ ಈ ಪವಿತ್ರ ಕ್ಷೇತ್ರದ ದರ್ಶನ ಮಾಡೋಕೆ ಮರೆಯಬೇಡಿ.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ