ವಿಜಯಪುರ: ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾ ನದಿ ತಟದಲ್ಲಿದೆ ಚಂದ್ರಗಿರಿಯ ಚಂದ್ರಮ್ಮದೇವಿ ದೇವಸ್ಥಾನ ಮತ್ತು ಯಲಗೂರು ಗ್ರಾಮದ ಯಲಗೂರೇಶ್ವರನ ದೇವಸ್ಥಾನ. ಕರ್ನಾಟಕದಿಂದ (Karnataka) ಒಂದೇ ಅಲ್ಲ, ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರಪ್ರದೇಶದಿಂದಲೂ ಅಸಂಖ್ಯಾತ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ. ಆದರೆ ಭಕ್ತರು ಕೃಷ್ಣಾ ನದಿಯಲ್ಲಿ ತ್ಯಜಿಸಿದ ಬಟ್ಟೆಗಳು ಈ ಪ್ರದೇಶವನ್ನು ಕಲುಷಿತಗೊಳಿಸಿದ್ದವು. ಪಾಪಕರ್ಮ ಕಳೆಯಬೇಕಿದ್ದ ಕೃಷ್ಣಾ ನದಿಗೆ (Krishna River) ಪ್ಲಾಸ್ಟಿಕ್, ಮದ್ಯದ ಬಾಟಲಿಗಳು ಸೇರಿ ಮಲಿನಗೊಂಡಿತ್ತು. ಆದರೆ ಈ ಪ್ರದೇಶ ಈಗ ಶುದ್ಧಗೊಂಡಿದೆ. ಅದು ಹೇಗೆ? ಯಾರಿಂದ ಈ ಕೆಲಸ ಆಗಿದೆ? ಎಲ್ಲ ವಿವರ ಇಲ್ಲಿದೆ.
ಆದರೆ ಈಗ ಈ ಸಮಸ್ಯೆಗೆ ಪರಿಹಾರ ದೊರೆತಿದೆ. ಕೃಷ್ಣೆಯನ್ನು ಪವಿತ್ರವಾಗಿಯೇ ಇರಿಸಬೇಕು ಎಂದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಹುಲಜಂತಿ ಮಾಳಿಂಗರಾಯ ಸ್ವಾಮೀಜಿ ಸ್ವಯಂ ಪ್ರೇರಣೆಯಿಂದ ನೂರಾರು ಜನರೊಂದಿಗೆ ನದಿ ಸ್ವಚ್ಛತೆಗೆ ಇಳಿದಿದ್ದಾರೆ.
ಸ್ವಾಮೀಜಿ ನೇತೃತ್ವದ ಯುವಕರ ತಂಡದಿಂದ ಸ್ವಚ್ಛತೆ
ಭಕ್ತರು ಮಡಿಸ್ನಾನ ಮಾಡಿ ಎಲ್ಲೆಂದರಲ್ಲಿ ಬಿಸಾಕಿದ ಬಟ್ಟೆಗಳು, ಮತ್ತೊಂದೆಡೆ ಹೂಮಾಲೆ, ಭಂಡಾರ, ತೆಂಗು, ಪ್ಲಾಸ್ಟಿಕ್ ಹಾಳೆ, ಬಾಟಲ್, ನಿಂಬೆಹಣ್ಣು, ಮೀನದ ಬಲೆಗಳ ರಾಶಿ ಕಣ್ಣು ಹಾಯಿಸಿದಲ್ಲೆಲ್ಲ ಕಸದ ರಾಶಿ ಕಾಣುತ್ತಿತ್ತು. ಆದರೆ ಈ ಮಲಿನವನ್ನೆಲ್ಲ ಸಂಗ್ರಹಿಸಿದ ಸ್ವಾಮೀಜಿ ನೇತೃತ್ವದ ಯುವಕರ ತಂಡ ಟ್ರಾಕ್ಟರ್ ಮೂಲಕ ಊರಾಚೆಗೆ ಸಾಗಿಸುತ್ತಿದೆ.
ಇದನ್ನೂ ಓದಿ: Madhavananda Prabhu: ಬ್ರಿಟೀಷರ ಎದೆ ನಡುಗಿಸಿದ್ದ ವಿಜಯಪುರದ ಸಂತ! 27 ಬಾರಿ ಜೈಲುವಾಸ ಅನುಭವಿದ್ದ ಮಾಧವಾನಂದ ಪ್ರಭು
ಕೃಷ್ಣಾ ನದಿಯ ತೀರದಲ್ಲಿರುವ ಚಂದ್ರಗಿರಿ ಚಂದ್ರಮ್ಮದೇವಿ ದೇವಸ್ಥಾನ, ಯಲಗೂರು ಗ್ರಾಮದ ಆಂಜನೇಯನ ದೇವಸ್ಥಾನ ತಟದಲ್ಲಿ ಸ್ವಚ್ಛತೆ ಭರದಿಂದ ಸಾಗುತ್ತಿದೆ. ಹುಲಜಂತಿಯ ಮಾಳಿಂಗರಾಯ ಸ್ವಾಮೀಜಿಗಳು ಇಲ್ಲಿನ ಜನರಿಗೆ ಮತ್ತು ಬರುವ ಪ್ರವಾಸಿಗರ ಹಿತದೃಷ್ಟಿಯಿಂದ ಯಾವುದೇ ಮಾರಕ ರೋಗ ಬರದಂತೆ ತಡೆಗಟ್ಟುವ ಉದ್ದೇಶದಿಂದ ಈ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿರುವುದು ಸ್ಥಳೀಯರಲ್ಲಿ ಸಂತಸ ತಂದಿದೆ.
ಇದನ್ನೂ ಓದಿ: Belagavi: ನಾಯಿ ಬರ್ತ್ಡೇ ಆಚರಣೆ ವಿಡಿಯೋ ನೋಡಿ! 1 ಕ್ವಿಂಟಲ್ ಕೇಕ್, 5 ಸಾವಿರ ಜನರಿಗೆ ಭರ್ಜರಿ ಊಟ!
ಸದ್ಯ ಕೃಷ್ಣೆ ಸ್ವಚ್ಛಗೊಳ್ಳುತ್ತಿದೆ. ಆದರೆ ಈ ನದಿ ಯಾವುದೋ ಕಾರ್ಖಾನೆಗಳ ತ್ಯಾಜ್ಯದಿಂದ ಹಾಳಾಗಿದ್ದಲ್ಲ. ಭಕ್ತಾದಿಗಳು ಪವಿತ್ರ ಕೃಷ್ಣೆಯನ್ನು ಕಾಪಾಡಬೇಕು, ಮಲಿನಗೊಳಿಸಬಾರದು ಎಂಬುದೇ ನಮ್ಮ ಕಾಳಜಿ.
ವರದಿ: ಪ್ರಶಾಂತ ಹೂಗಾರ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ