ಹಳೆ ಬಟ್ಟೆ, ಹೊಸ ರೂಪ. ಸ್ಕೂಟರ್ ಏರಿ ಕೌದಿ ಕೌದಿ ಅಂತಾ ಕೂಗ್ತಿರೋ ವ್ಯಾಪಾರಿ. ಇದೆಲ್ಲವೂ ಚಳಿಗಾಲದ ಸ್ಪೆಷಲ್. ಹೀಗೆ ಹಳೆ ಬಟ್ಟೆಗಳಿಗೆ ಹೊಸ ರೂಪ ನೀಡೋದ್ರ ಜೊತೆಗೆ ತಮ್ಮ ಹಿರಿಯರ ನೆನಪಲ್ಲಿ ಬೆಚ್ಚಗಿರ್ತಾರೆ ಉತ್ತರ ಕರ್ನಾಟಕ (Uttara Karnataka) ಭಾಗದ ಮಂದಿ. ಯೆಸ್, ಮನೆಯಲ್ಲಿದ್ದ ಹಳೆಬಟ್ಟೆಗಳು ಹೊರಗೆ ಇಣುಕಿದವು ಅಂದ್ರೆ ಚಳಿಗಾಲ ಬಂತು (Winter Special) ಎಂದೇ ಅರ್ಥ. ಹಳೆಯ ಬಟ್ಟೆಗಳನ್ನೆಲ್ಲಾ ಒಟ್ಟುಗೂಡಿಸಿ ಕೌದಿಯನ್ನಾಗಿ (Koudi) ಪರಿವರ್ತಿಸಿ ಬೆಚ್ಚಗೆ ಹೊದ್ದುಕೊಳ್ಳೋ ಖುಷಿಯೇ ಬೇರೆ!
ಜೊತೆಗೆ ಮನೆಯಲ್ಲಿದ್ದ ಹಿರಿಯರೇನಾದ್ರೂ ಮೃತಪಟ್ಟಲ್ಲಿ ಅವರ ಹಳೆಯ ಬಟ್ಟೆಗಳನ್ನ ಕೊಟ್ಟು ಕೌದಿ ಹೊಲಿಸಿಕೊಳ್ಳಲಾಗುತ್ತೆ. ಈ ಮೂಲಕ ಅವರ ನೆನಪು ಸದಾ ಕಾಲ ಬೆಚ್ಚಗಿರಿಸಿಕೊಳ್ಳುತ್ತಾರೆ. ಮಾತ್ರವಲ್ಲದೇ ಅವರ ಬಟ್ಟೆಬರೆಗಳ ಜೊತೆ ನೆನಪುಗಳು ಕೂಡಾ ಅಷ್ಟೇ ಬೆಚ್ಚಗಿರುವ ಖುಷಿ ಮನೆ ಮಂದಿಯದ್ದು.
ಈ ಎಲ್ಲ ಬಟ್ಟೆಗಳಿಂದಲೂ ಕೌದಿ ತಯಾರಿ!
ಅಜ್ಜನ ಧೋತಿ, ಅಜ್ಜಿಯ ಹಳೆಯ ಸೀರೆ, ಅಣ್ಣನ ಟೀ ಶರ್ಟ್, ತಮ್ಮನ ಅಂಗಿ, ಅವ್ವನ ಪತ್ತಲ ಹೀಗೆ ಬಳಕೆಗೆ ಬಾರದ ಹಳೆಯ ಬಟ್ಟೆಗಳನ್ನ ಕೊಟ್ಟು ಜನರು ಕೌದಿ ತಯಾರಿಸಿಕೊಳ್ತಿದ್ದಾರೆ. ಕೌದಿ ಹೊದ್ದು ಅಮ್ಮನ ಮಡಿಲಂತೆ ಬೆಚ್ಚನೆಯ ಅನುಭವವನ್ನ ಪಡೆಯೋ ಪ್ರೀತಿಯ ಸ್ವಾರ್ಥವೂ ಕೌದಿಯದ್ದು! ಅಪ್ಪ ಮತ್ತು ಅಮ್ಮ ಮದುವೆಯಲ್ಲಿ ತೊಟ್ಟುಕೊಂಡ ಉಡುಪು ಈಗ ಹಳೆಯದ್ದಾಗಿದೆ. ಆದ್ರೆ ಪ್ರೀತಿಯ ಆ ಬಟ್ಟೆ ಕೌದಿಯಾಗಿ ಜೀವಂತವಾಗಿರುತ್ತೆ.
ಆಂಧ್ರ ಪ್ರದೇಶದಿಂದ ವಲಸೆ ಬಂದ ಕುಟುಂಬಗಳು!
ಆಂಧ್ರ ಪ್ರದೇಶದಿಂದ ಸುಮಾರು 8 ವರ್ಷಗಳಿಂದ ವಿಜಯಪುರಕ್ಕೆ ವಲಸೆ ಬಂದ ಕುಟುಂಬಗಳು ಸದ್ಯ ವಿಜಯಪುರದ ಹಲವೆಡೆ ನೆಲೆಸಿವೆ. ಇವರ ಮೂಲ ಉದ್ಯೋಗ ಕೌದಿ ತಯಾರಿಕೆ. ಈಗಂತೂ ಚಳಿಗಾಲದಲ್ಲಿ ಕೌದಿ ತಯಾರಿಕೆಗೆ ಬಹು ಬೇಡಿಕೆ ಬಂದಿದೆ.
ಇದನ್ನೂ ಓದಿ: Badami Travel Plan: ಬಾದಾಮಿಯಲ್ಲಿ ಇದನ್ನೆಲ್ಲ ಮಿಸ್ ಮಾಡ್ದೇ ನೋಡಿ
ಒಂದು ಕೌದಿ ತಯಾರಿಸಲು ಸುಮಾರು ಮೂರು ದಿನಗಳು ಬೇಕಾಗುತ್ತೆ. ಚಿಕ್ಕವರಿಗೆ ಬೇಕಾಗುವ ಅಳತೆಗೆ ಇನ್ನೂರು, ದೊಡ್ಡವರಿಗೆ ಬೇಕಾಗುವ ಕೌದಿಗೆ ಮುನ್ನೂರು ರೂಪಾಯಿಯಿಂದ ಐನೂರು ರೂಪಾಯಿವರೆಗೂ ದರ ವಿಧಿಸಲಾಗುತ್ತೆ.
ಕೌದಿಗೆ ಸೂಟ್ ಆಗುತ್ತೆ ಈ ಬಟ್ಟೆಗಳು
ಕೌದಿ ತಯಾರಿಸುವವರು ಕೆಲಸಕ್ಕಾಗಿ ಮನೆ ಮನೆಗಳನ್ನು ಹುಡುಕಿಕೊಂಡು ಬರುತ್ತಾರೆ. ಯಾವುದು ಕೌದಿಗೆ ಸೂಟ್ ಆಗುತ್ತೋ ಅಂತಹ ಬಟ್ಟೆಗಳನ್ನ ಆಯ್ದುಕೊಂಡು ತೆರಳುತ್ತಾರೆ. ಬಳಿಕ ಕೆಲ ದಿನಗಳಲ್ಲೇ ಕೌದಿಯೊಂದಿಗೆ ಮನೆ ಬಾಗಿಲಿಗೆ ತಲುಪಿಸ್ತಾರೆ.
ಇದನ್ನೂ ಓದಿ: Positive Story: ಬ್ಯಾಡಗಿ ಮೆಣಸಿಗೆ ಬಂಗಾರದ ಬೆಲೆ; ಖಾರದಿಂದಲೂ ಸಿಕ್ತು ಸಿಹಿ!
ಒಟ್ಟಿನಲ್ಲಿ ಕೌದಿ ಮೂಲಕ ಉತ್ತರ ಕರ್ನಾಟಕದ ಮಂದಿ ಚಳಿಗೆ ಮೈಯೊಡ್ಡುವ ಜೊತೆಗೆ, ತಮ್ಮ ನೆನಪುಗಳನ್ನು ಬೆಚ್ಚಗಿರಿಸಿಕೊಳ್ಳುವುದು ವಿಶೇಷ.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ