• Home
 • »
 • News
 • »
 • vijayapura
 • »
 • Grow Plants: 10 ಲಕ್ಷ ಸಸಿಗಳ ವಿತರಣೆಗೆ ಸಜ್ಜಾದ ಅರಣ್ಯ ಇಲಾಖೆ! ಯಾವ ಗಿಡಗಳು? ಯಾರಿಗೆಲ್ಲ ಸಿಗುತ್ತೆ?

Grow Plants: 10 ಲಕ್ಷ ಸಸಿಗಳ ವಿತರಣೆಗೆ ಸಜ್ಜಾದ ಅರಣ್ಯ ಇಲಾಖೆ! ಯಾವ ಗಿಡಗಳು? ಯಾರಿಗೆಲ್ಲ ಸಿಗುತ್ತೆ?

ರೈತರ ಕೈಗೇರಲು ಸಜ್ಜಾದ ಗಿಡಗಳು

ರೈತರ ಕೈಗೇರಲು ಸಜ್ಜಾದ ಗಿಡಗಳು

ಮಳೆಗಾಲ ಬಂದೇಬಿಟ್ಟಿತು. ವಿಶ್ವ ಪರಿಸರ ದಿನದ ಆಚರಣೆಯೂ ಆಯಿತು. ವಿಧ ವಿಧದ ಗಿಡಗಳನ್ನು ಬೆಳೆಸಬೇಕು ಎಂಬ ಆಸೆ ಇರುವವರು ಅಂತಹ ಗಿಡಗಳ ತಲಾಶ್ ಆರಂಭಿಸಿದ್ದಾರೆ. ಇಲ್ಲೊಂದು ಕಡೆ 180ಕ್ಕೂ ಹೆಚ್ಚು ತಳಿಗಳ ಗಿಡ ವಿತರಣೆ ಮಾಡಲಾಗುತ್ತಿದೆ. ಅರೇ! ಎಲ್ಲಿದು? ಅಂದಿರಾ? ಮುಂದೆ ಓದಿ.

 • Share this:

  ವಿಜಯಪುರ: ಇಲ್ಲಿ ತೋಟಗಾರಿಕೆ ಸಸಿ, ಅಲಂಕಾರಿಕ ಸಸಿ, ಔಷಧೀಯ ಸಸಿ ಸೇರಿದಂತೆ ಹಲವಾರು ಬಗೆ ಬಗೆಯ ಸಸಿಗಳನ್ನು ತಯಾರಿಸಿ ಬೇಡಿಕೆ ಇದ್ದ ರೈತರಿಗೆ ನೀಡಲಾಗುತ್ತದೆ. ಒಟ್ಟು 180ಕ್ಕೂ ಅಧಿಕ ಜಾತಿಯ ಗುಣಮಟ್ಟದ, ರೋಗಾಣುರಹಿತ ಸಸಿಗಳು ಕಡಿಮೆ ಬೆಲೆಗೆ ದೊರೆಯುತ್ತವೆ. ವಿಜಯಪುರ ಜಿಲ್ಲೆಯ ರೈತರಂತೂ (Vijayapura District Farmers) ಈ ವಿಧ ವಿಧದ ಸಸಿಗಳನ್ನು ಪಡೆದುಕೊಳ್ಳಲು ಖುಷಿಯಿಂದ ಆಗಮಿಸುತ್ತಾರೆ. ಹಾಗಾದರೆ ಯಾರು ಈ ಸಸಿಗಳನ್ನು ತಯಾರಿಸುತ್ತಾರೆ? ಎಲ್ಲಿ ಇಷ್ಟೆಲ್ಲ ವಿಧದ ಸಸಿಗಳನ್ನು(Plants) ವಿತರಿಸಲಾಗುತ್ತೆ? ಯಾವ ಗಿಡಗಳನ್ನು ವಿತರಿಸಲಾಗುತ್ತೆ? ಏನಿದು ವಿಷಯ? ಇಲ್ಲಿದೆ ವಿಶೇಷ ವರದಿ.


  ಸಸಿ ಪಡೆಯುವುದು ಹೇಗೆ ?
  ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ 3 ನರ್ಸರಿಗಳಿದ್ದು ದಿನಕ್ಕೆ 40 ರಿಂದ 50 ಜನ ರೈತರಿಗೆ ಮಾತ್ರ ಸಸಿಗಳನ್ನು ವಿತರಿಸಲಾಗುತ್ತದೆ. ಜೂನ್ 20 ರಿಂದ ದಿನಾಂಕ ನಿಗದಿಗೊಳಿಸಿ ಟೋಕನ್ ವಿತರಿಸಲಾಗುತ್ತದೆ. ನಿಗದಿಪಡಿಸಿದ ದಿನದಂದು ರೈತರು ತಮ್ಮ ವಾಹನದೊಂದಿಗೆ ಬಂದು ಸಸಿಗಳನ್ನು ಪಡೆಯಬೇಕು. ಟೋಕನ್ ಪಡೆದವರಿಗೆ ಮಾತ್ರ ಸಸಿಗಳನ್ನು ನೀಡಲಾಗುತ್ತದೆ.


  ರೈತರಿಗಾಗಿ ಕಡಿಮೆ ದರ ನಿಗದಿ
  ಕಸಿ ಮಾಡದ ಸಸಿಗಳನ್ನು ಅಳತೆಗೆ ತಕ್ಕಂತೆ ರೂ. 1 ರಿಂದ ರೂ. 10 ರೂ.ಗೆ ವಿತರಣೆ ಮಾಡಲಾಗುತ್ತದೆ. ಕಸಿ ಮಾಡಿದ ಸಸಿಗಳನ್ನು ಅಳತೆಗೆ ತಕ್ಕಂತೆ ರೂ.10 ರಿಂದ ರೂ 110 ರೂ ವರೆಗೆ ನಿಗದಿ ಮಾಡಲಾಗಿದೆ. ಪ್ರತಿ ರೈತರಿಗೆ ವಿವಿಧ ಜಾತಿಯ ಗರಿಷ್ಠ 500 ಸಸಿಗಳನ್ನು ಮಾತ್ರ ವಿತರಿಸಲಾಗುತ್ತದೆ. ರೈತರು ಜಮೀನಿನ ಪಹಣಿ ಪತ್ರ, ಆಧಾರ ಕಾರ್ಡ, ಜಿಪಿಎಸ್ ರೀಡಿಂಗ್ ಸಲ್ಲಿಸಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಕೆ. ಪೈ ಮಾಹಿತಿ ನೀಡಿದ್ದಾರೆ.


  ಸಸಿಗಳನ್ನು ಎಲ್ಲಿ ವಿತರಿಸಲಾಗುತ್ತದೆ ?
  1) ಆಲಮಟ್ಟಿಯ ಡ್ಯಾಂ ನರ್ಸರಿ
  2) ಆಲಮಟ್ಟಿಯ ಎಂಡಿಎಫ್ ನರ್ಸರಿ
  3) ಆಲಮಟ್ಟಿಯ ಎಎಲ್ಬಿಸಿ ನರ್ಸರಿ
  4) ರೋಡಲ್ ಬಂಡಾ (ರಾಯಚೂರು ಜಿಲ್ಲೆ) ಬಸವಸಾಗರ ನರ್ಸರಿ
  5) ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಕುಂದರಗಿ ಗ್ರಾಮದ ನರ್ಸರಿ


  ಹೆಚ್ಚಿನ ಮಾಹಿತಿಗೆ ಸಸಿ ವಿತರಣಾ ಕೇಂದ್ರದ ಸಂಪರ್ಕ ಸಂಖ್ಯೆ 9916604399 ಅಥವಾ 8105338247  ಕರೆಮಾಡಿ ಮಾಹಿತಿ ಪಡೆಯಬಹುದಾಗಿದೆ.


  ಲಭ್ಯವಿರುವ ಸಸಿಗಳ ವಿವರ ಇಲ್ಲಿದೆ


  1) ತೋಟಗಾರಿಕಾ ಸಸಿಗಳು:- ತೆಂಗು, ಪೇರು, ದಾಳಿಂಬೆ, ಚಿಕ್ಕು, ನಿಂಬೆ (ಜವಾರಿ), ಕಿತ್ತಳೆ ಇತ್ಯಾದಿ
  2) ಹಣ್ಣಿನ ಗಿಡಗಳು:- ಹುಣಸೆ, ಮಾವು, ಹಲಸು, ನೇರಳೆ, ರಾಮಫಲ, ಅಂಜೂರು, ಸೀತಾಫಲ, ಕಂಚಿ ಮರ, ಕಡಿಗೋಲ ನೆಲ್ಲಿ, ಹುಣಸೆ, ಗೇರು, ಬಾರಿ ಗಿಡ, ಉಮ್ರಾನಿ, ಸ್ಟಾರ್ ಪ್ರೂಟ್, ಪನ್ನೇರಳೆ ಇತ್ಯಾದಿ.
  3) ಅರಣ್ಯ ಬೆಳೆಗಳು:- ನುಗ್ಗೆ, ಕರಿಬೇವು, ಸೀಲ್ವರ್ ಓಕ್, ಗೊಬ್ಬರ ಗಿಡ, ತೋಗಚೆ ಇತ್ಯಾದಿ.
  4) ವಾಣಿಜ್ಯ ಅರಣ್ಯ ಬೆಳೆಗಳು:- ಹೆಬ್ಬೇವು, ರಕ್ತ ಚಂದನ, ಶ್ರೀಗಂಧ, ಸಾಗವಾನಿ ಹಾಗೂ ಇತ್ಯಾದಿ.
  5) ಧಾರ್ಮಿಕ ಪ್ರಾಮುಖ್ಯತೆಯ ಗಿಡಗಳು:- ತುಳಸಿ, ಬನ್ನಿ, ಪತ್ರಿ, ನಂದಿಪಾದ (ಆರೆ), ನಾಗಲಿಂಗ ಪುಷ್ಪ, ದೇವಕಣಗಿಲೆ ಹಾಗೂ ಇತ್ಯಾದಿ.
  6) ಅಲಂಕಾರಿಕ ಸಸಿಗಳು:- ಗಾಳಿಮರ, ಕಣಗಲ, ನಂದಿಬಟ್ಲು, ಕ್ಯಾಲಿಯಂಡ್ರಾ, ಕ್ಯಾಶಿಯಾ ಬೈಪ್ಲೊರಾ, ಬೋಗನವಿಲ್ಲಾ, ರಾತ್ ಕಿ ರಾಣಿ, ದಿನ-ಕಾ-ರಾಜಾ ಹಾಗೂ ಇತ್ಯಾದಿ.
  7)  ಔಷಧಿ ಗಿಡಗಳು:- ಲೋಳಸರ, ಮದರಂಗಿ, ಅಶ್ವಗಂಧಾ, ಸರ್ಪಗಂಧಿ, ಬ್ರಹ್ಮ, ಮಧುನಾಶಿನಿ, ಆಡಸೋಗೆ, ದೊಡ್ಡ ಪತ್ರೆ, ಅಮೃತಬಳ್ಳಿ, ಮುರಗಲ (ಕೊಕಂ), ಸರ್ವ ಸಾಂಬಾರು ಇವುಗಳು ಸೇರಿ ಒಟ್ಟು 180 ಜಾತಿಯ ಸಸಿಗಳಿವೆ ಎಂದು ಉಪ ವಲಯ ಅರಣ್ಯ ಅಧಿಕಾರಿ ಸತೀಶ ಗಲಗಲಿ ಮಾಹಿತಿ ನೀಡಿದ್ದಾರೆ.


  ಇದನ್ನೂ ಓದಿ: Kolhar Curd: ಕೋಲಾರ ಅಲ್ಲ ಕೋಲ್ಹಾರ! ಇಲ್ಲಿಯ ಗಟ್ಟಿ ಮೊಸರ ರುಚಿಗೆ ಮಾರುಹೋಗಿ ಬನ್ನಿ!


  ಎಲ್ಲ ರೈತರಿಗೂ ಸಸಿಗಳು ಲಭ್ಯ
  ಈ ಸಸಿಗಳಿಗೆ ಬಹು ಬೇಡಿಕೆಯಿದೆ. ಕಳೆದ ವರ್ಷ ಜಿಲ್ಲೆಯ ನಾನಾ ಭಾಗಗಳಿಂದ ರೈತರು ಗಾಳಿ ಮಳೆಯೆನ್ನದೆ ರಾತ್ರಿ ಇಡೀ ಸರತಿ ಸಾಲಿನಲ್ಲಿ ನಿಂತು ಸಸಿಗಳನ್ನು ಪಡೆಯುವಂತಾಗಿತ್ತು. ಆದರೆ ಈ ವರ್ಷ ಹೆಚ್ಚಿನ ಸಸಿಗಳನ್ನು ತಯಾರಿಸಲಾಗಿದ್ದು, ಎಲ್ಲ ರೈತರಿಗೂ ಸಿಬ್ಬಂದಿಗಳು ವಿತರಿಸಲಿದ್ದೇವೆ ಎಂದು ಆಲಮಟ್ಟಿ ವಲಯ ಅರಣ್ಯ ಅಧಿಕಾರಿ ಮಹೇಶ ಪಾಟೀಲ್ ಮಾಹಿತಿ ನೀಡಿದ್ದಾರೆ.


  ಇದನ್ನೂ ಓದಿ: Vijayapura Farmers: ವಿಜಯಪುರ ರೈತರೇ, ಈಗ ಬಿತ್ತನೆ ಮಾಡಬಹುದೇ? ಕೃಷಿ ಇಲಾಖೆ ಸಲಹೆ ತಿಳಿಯಿರಿ


  ಸಸಿ ಖರೀದಿಸುವ ಮುನ್ನ ಕಡ್ಡಾಯವಾಗಿ ಅಗತ್ಯ ದಾಖಲೆಗಳನ್ನು ತರಬೇಕು. ದಿನಾಂಕ 20ರಂದು ಬೆಳಗ್ಗೆ 10 ಗಂಟೆಯಿಂದ ಸಸಿಗಳನ್ನು ವಿತರಿಸಲಾಗುತ್ತದೆ ಎಂದು ಆಲಮಟ್ಟಿ ವಲಯ ಅರಣ್ಯ ಅಧಿಕಾರಿ ಮಹೇಶ ಪಾಟೀಲ್ ತಿಳಿಸಿದ್ದಾರೆ.


  ವರದಿ: ಪ್ರಶಾಂತ ಹೂಗಾರ, ವಿಜಯಪುರ

  Published by:guruganesh bhat
  First published: