ವಿಜಯಪುರ: ಆವರಣದ ತುಂಬೆಲ್ಲಾ ಬಣ್ಣ ಬಣ್ಣದ ರಂಗವಲ್ಲಿ, ಆಸಕ್ತಿಯಿಂದ ಕೂತು ರಂಗೋಲಿ ಬಿಡಿಸುತ್ತಿರೋ ಯುವಕ, ಯುವತಿಯರು. ಎಲ್ಲರ ರಂಗೋಲಿಯಲ್ಲೂ ಅರಳಿದ ವಿಷಯ ಒಂದೇ, ವೋಟ್ ಫಾರ್ ಬೆಟರ್ ಇಂಡಿಯಾ. ಯೆಸ್, ಚುನಾವಣೆ ಹಿನ್ನೆಲೆ (Karnataka Assembly Elections 2023) ಮತದಾನದ ಜಾಗೃತಿಗಾಗಿ ನಡೆದ ರಂಗೋಲಿ (Rangoli) ಸ್ಪರ್ಧೆಯ ದೃಶ್ಯವಿದು.
ಯೆಸ್, ಚುನಾವಣೆ ಹಿನ್ನೆಲೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಗ್ರಾಮೀಣ ವಿದ್ಯಾವರ್ಧಕ ಸಂಘದ ಆವರಣದಲ್ಲಿ ರಂಗೋಲಿಯ ಚಿತ್ತಾರಗಳು ಕಂಡುಬಂದವು. ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರರ ಜಾಗೃತಿಗಾಗಿ ಸ್ಪರ್ಧಾ ಕೂಟ ಆಯೋಜಿಸಲಾಯಿತು. ಯುವಕ, ಯುವತಿಯರು, ಹಿರಿ ಕಿರಿಯರೆಲ್ಲರೂ ಸೇರಿ ಚುನಾವಣೆ ಸಂಬಂಧಿತ ವಿಷಯವನ್ನು ತಮ್ಮ ರಂಗೋಲಿ ಮೂಲಕ ಬಿಡಿಸಿ ಗಮನಸೆಳೆದರು. ಉತ್ತಮ ರಂಗೋಲಿಗಳಿಗೆ ನಗದು ಬಹುಮಾನ ಸಹಿತ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಸ್ವೀಪ್ ವಿಭಿನ್ನ ಪ್ರಯತ್ನ
ಕಳೆದ ಬಾರಿಯ ಚುನಾವಣೆಯಲ್ಲಿ ಇದೇ ರೀತಿಯ ಮಾದರಿಯನ್ನು ಅನುಸರಿಸಿದ್ರಿಂದ ವಿಜಯಪುರ ಜಿಲ್ಲೆಯಲ್ಲಿ ಬಿಸಿಲಿನ ನಡುವೆಯೂ ಭರ್ಜರಿ ಮತದಾನ ನಡೆದಿತ್ತು. ಹೀಗಾಗಿ ಈ ಬಾರಿಯೂ ಅಂತಹದ್ದೇ ಪ್ರಯೋಗವನ್ನ ನಡೆಸಲು ಸ್ವೀಪ್ ತಂಡ ಮುಂದಾಗಿದೆ. ಪ್ರತಿ ಗ್ರಾಮ ಪಂಚಾಯತ್, ಪುರಸಭೆ ಹಾಗೂ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಮತ್ತು ನಗರ ವ್ಯಾಪ್ತಿ ಸೇರಿದಂತೆ, ಜಿಲ್ಲೆಯಾದ್ಯಂತ ಏಕಕಾಲದಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸುವ ಮೂಲಕ ಗಮನ ಸೆಳೆದಿದೆ.
ಇದನ್ನೂ ಓದಿ: Vijayapura: ದ್ರಾಕ್ಷಿ ಬೆಳೆಯ ಸುತ್ತ 24 ಗಂಟೆ ಧ್ವನಿ ಕಣ್ಗಾವಲು, ತಿಂಗಳಿಗೆ 13 ಸಾವಿರ ಉಳಿತಾಯ!
ರಂಗೋಲಿ ಕಲರವ
ಮತದಾನ ನಮ್ಮೆಲ್ಲರ ಹಕ್ಕು ಅನ್ನೋದನ್ನ ರಂಗೋಲಿ ಮೂಲಕ ಕಲಾವಿದರು ತೋರಿಸಿಕೊಟ್ಟರು. ಜೊತೆಗೆ ಮತದಾನದ ದಿನಾಂಕ, ಜಾಗೃತಿ ಸಂದೇಶಗಳನ್ನು ರಂಗೋಲಿ ಮೂಲಕ ತಿಳಿಸುವ ಪ್ರಯತ್ನ ನಡೆಯಿತು. ಸ್ಪರ್ಧಿಗಳು ಕೂಡಾ ಭಾರೀ ಆಸಕ್ತಿಯಿಂದ ಪಾಲ್ಗೊಂಡು ರಂಗೋಲಿ ಬಿಡಿಸಿದರು. ಅಧಿಕಾರಿಗಳು ಹಾಜರಿದ್ದು ಸ್ಪರ್ಧಾರ್ಥಿಗಳನ್ನು ಹುರಿದುಂಬಿಸಿದರು. ಇನ್ನು ಸಾರ್ವಜನಿಕರು ಕೂಡಾ ರಂಗೋಲಿ ಚಿತ್ತಾರವನ್ನ ಕಣ್ತುಂಬಿಕೊಳ್ಳುವುದರ ಜೊತೆಗೆ ಮತದಾನದ ಕುರಿತ ಮಾಹಿತಿ ಪಡೆದುಕೊಂಡರು.
ಇದನ್ನೂ ಓದಿ: Jobs In Bagalkote: ಬಾಗಲಕೋಟೆಯಲ್ಲಿ ಕೆಲಸ ಖಾಲಿ ಇದೆ, 21 ರಿಂದ 97 ಸಾವಿರದವರೆಗೆ ಸಂಬಳ
ಉತ್ತಮ ಸ್ಪಂದನೆ
ಒಟ್ಟಿನಲ್ಲಿ ಮತದಾರರನ್ನ ಸೆಳೆಯಲು ಆಯೋಜಿಸಲಾಗಿದ್ದ ಈ ರಂಗೋಲಿ ಸ್ಪರ್ಧೆಯಲ್ಲಿ ಯುವ ಸಮುದಾಯವೇ ಪಾಲ್ಗೊಂಡಿತ್ತು. ಹೀಗೆ ಸ್ವೀಪ್ ಸಮಿತಿಯ ಪ್ರಯತ್ನವೂ ಯಶಸ್ವಿಯಾಗಿದ್ದು, ಮುಂದೆ ಇನ್ನಷ್ಟು ಮತದಾನ ಕುರಿತ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ತಂಡಕ್ಕೆ ಪ್ರೇರಣೆ ನೀಡಿದಂತಾಗಿದೆ.
ವರದಿ: ಪ್ರಶಾಂತ ಹೂಗಾರ್, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ