ಜಿಲೇಬಿ ಅಂದ್ರೆ ಸಾಕು ಬಾಯಿ ಚಪ್ಪರಿಸೋರೆ ಜಾಸ್ತಿ. ಅದ್ರಲ್ಲೂ ಗರಿ ಗರಿಯಾಗಿರೋ ಈ ಬಿಸಿ ಬಿಸಿ ಜಿಲೇಬಿ (Jalebi Recipe) ಸಿಕ್ರಂತೂ ಸ್ವರ್ಗಕ್ಕೆ ಮೂರೇ ಗೇಣು. ಇನ್ನೊಂದು ಕಡೆ ಚಳಿಗಾಲ ಬೇರೆ, ಸಿಹಿ ತಿನ್ನೋರಿಗೆ ಈ ಬಿಸಿ ಜಿಲೇಬಿ ಹೇಳಿಟ್ಟ ಹಾಗಿದೆ. ಯಾವುದೇ ಸಭೆ ಸಮಾರಂಭ ಇರ್ಲಿ ಜಿಲೇಬಿ ಇಲ್ಲದೇ ಇಲ್ಲಿ ಯಾ ಚಳಿಗಾಲದಲ್ಲಿ (Jalebi In Winter) ಸಿಗೋದು ಎಲ್ಲಿ ಅಂತೀರಾ? ಇದನ್ನ ಮಾಡೋದು ಹೇಗೆ ಅಂತೀರಾ? ಹೇಳ್ತೀವಿ ನೋಡಿ.
ಇಲ್ಲಿ ಕಾಣ್ತಿರೋ ಈ ಅಂಗಡಿ ಪುಟ್ಟ ಅಂಗಡಿನೇ ಇರಬಹುದು. ಆದರೆ ಊರೆಲ್ಲ ಸಿಹಿ ಹಂಚೋ ಸ್ವೀಟ್ ಬಾಕ್ಸ್ನಂತೆ ಈ ಅಂಗಡಿ. ಬಾಗಲಕೋಟೆಯ ಗುಳೇದಗುಡ್ಡ ರೇಷ್ಮೆ ಸೀರೆ, ಖಣಕ್ಕೆ ಹೇಗೆ ಹೆಸರುವಾಸಿಯೋ, ಅದೇ ಥರ ಬೀದಿ ಬದಿ ತಯಾರಿಸಿ ಕೊಡೋ ಈ ಬಿಸಿ ಬಿಸಿ ಸಿಹಿ ಜಿಲೇಬಿಗೂ ಸಹ ಅಷ್ಟೇ ಫೇಮಸ್.
ಚಳಿಗಾಲದಲ್ಲಿ ರುಚಿಯೇ ಬೇರೆ!
ಚಳಿಗಾಲದಲ್ಲಿ ಒಮ್ಮೆಯಾದರೂ ಜಿಲೇಬಿ ತಿನ್ನಲೇಬೇಕು. ಅಷ್ಟರ ಮಟ್ಟಿಗೆ ಇದು ಜನರ ನಾಲಿಗೆ ರುಚಿ ನೀಡುತ್ತದೆ. ಇನ್ನು ಬಾಗಲಕೋಟೆಯಲ್ಲಿ ಮನೆಗೆ ಬರುವ ಅತಿಥಿಗಳಿಗೆ ಜಿಲೇಬಿಯದ್ದೇ ಸತ್ಕಾರ. ಪರ ಊರುಗಳಲ್ಲಿ ಇರುವ ಸಂಬಂಧಿಕರಿಗೆ ಜಿಲೇಬಿ ಕಳುಹಿಸಿಕೊಡುವ ಪದ್ಧತಿಯೂ ಇಲ್ಲಿದೆ.
ಇಲ್ಲಿದೆ ನೋಡಿ ರೆಸಿಪಿ
ಜಿಲೇಬಿ ಮಾಡೋದು ಕಷ್ಟದ ಕೆಲಸವೇನಲ್ಲ. ಆದರೆ ಅಷ್ಟೇ ಟೇಸ್ಟಿ, ಕರ್ ಕುರ್ ಅಂತಾ ತಿನ್ಬೇಕು ಅಂದ್ರೆ ಗುಳೇದಗುಡ್ಡದ ಪೊಲೀಸ್ ಚೌಕ ಬಳಿ ಇರುವ ಮೌಲಾನಿ ಅಸದ್ ಅವರು ನ್ಯೂಸ್ 18 ಕನ್ನಡ ಡಿಜಿಟಲ್ ವೀಕ್ಷಕರಿಗಾಗಿ ಜಿಲೇಬಿ ಮಾಡುವ ವಿಧಾನವನ್ನು ಹೇಳಿಕೊಟ್ಟಿದ್ದಾರೆ. ನೀವೂ ಮನೇಲೇ ಜಿಲೇಬಿ ತಯಾರಿಸಿಬಿಡಿ!
ಜಿಲೇಬಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
* ಸಕ್ಕರೆ 1 ಬಟ್ಟಲು
* ನೀರು ಅರ್ಧ ಕಪ್
* ನಿಂಬೆರಸ ಅರ್ಧ ಹೋಳು
* ಏಲಕ್ಕಿ ಪುಡಿ ಕಾಲು ಚಮಚ
* ಕೇಸರಿ ಸ್ವಲ್ಪ
* ಮೈದಾ ಹಿಟ್ಟು 1 ಬಟ್ಟಲು
* ಕಾರ್ನ್ ಫ್ಲೋರ್ ಹಿಟ್ಟು 1 ಚಮಚ
* ಮೊಸರು ಅರ್ಧ ಕಪ್
* ವಿನೆಗರ್ ಅರ್ಧ ಚಮಚ
* ಕರಿಯಲು ಸಾಕಾಗುವಷ್ಟು ಎಣ್ಣೆ
ಇದನ್ನೂ ಓದಿ: Mali Roti Recipe: ಬಾಯಲ್ಲಿ ನೀರೂರಿಸುತ್ತೆ ಈ ಮಲೈ ರೊಟ್ಟಿ! ಇಲ್ಲಿದೆ ನೋಡಿ ರೆಸಿಪಿ
ತಯಾರಿಸುವ ವಿಧಾನ ಹೀಗಿದೆ
ಮೊದಲು ಒಲೆಯ ಮೇಲೆ ಮೀಡಿಯಂ ಉರಿಯಲ್ಲಿ ಒಂದು ಪಾತ್ರೆಗೆ ಸಕ್ಕರೆ ಮತ್ತು ನೀರನ್ನು ಹಾಕಿ ಕುದಿಸಬೇಕು. ಸಕ್ಕರೆಯು ಕರಗಿ ಕುದಿಯುವಾಗ ಅದಕ್ಕೆ ನಿಂಬೆ ರಸ, ಏಲಕ್ಕಿ ಪುಡಿ, ಕೇಸರಿ ದಳಗಳನ್ನು ಹಾಕಿ ಒಂದೆಳೆ ಪಾಕವನ್ನು ಮಾಡಿ ಮುಚ್ಚಿಡಬೇಕು. ನಂತರ ಒಂದು ಅಗಲವಾದ ಬಟ್ಟಲಲ್ಲಿ ಮೈದಾ ಹಿಟ್ಟನ್ನು ಹಾಕಿ ಅದರ ಜೊತೆ ಕಾರ್ನ್ಫ್ಲೋರ್, ಬೇಕಿಂಗ್ ಪೌಡರ್, ವಿನೆಗರ್, ಮೊಸರು ಹಾಕಿ ಮಿಕ್ಸ್ ಮಾಡಬೇಕು. ನಮತರ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿ ಗಟ್ಟಿಯಾಗಿ ದೋಸೆ ಹಿಟ್ಟಿನ ಹದಕ್ಕೆ ಚೆನ್ನಾಗಿ ಕಲೆಸಬೇಕು.
ಇದನ್ನೂ ಓದಿ: Emotional Video: 12 ವರ್ಷಗಳ ನಂತರ ಒಂದಾದ ನೂರಾರು ವಿದ್ಯಾರ್ಥಿಗಳು!
ನಂತರ ಒಲೆಯ ಮೇಲೆ ಮೀಡಿಯಂ ಉರಿಯಲ್ಲಿ ಎಣ್ಣೆಯನ್ನು ಕಾಯಲು ಇಡಬೇಕು. ನಂತರ ಜಿಲೇಬಿ ಮಾಡುವ ಪಾತ್ರೆ ಅಥವಾ ಒಂದು ಪ್ಲಾಸ್ಟಿಕ್ ಕವರ್ ಅನ್ನು ಕೋನ್ ರೀತಿಯಾಗಿ ಮಾಡಬೇಕು. ತುದಿಯಲ್ಲಿ ಸಣ್ಣದಾಗಿ ಕಟ್ ಮಾಡಿ ಕಾದ ಎಣ್ಣೆಯಲ್ಲಿ ಜಿಲೇಬಿ ಆಕಾರದಲ್ಲಿ ಒತ್ತಿ ಎರಡೂ ಕಡೆ ಒಂದು ನಿಮಿಷ ಬೇಯಿಸಬೇಕು. ನಂತರ ಅದನ್ನು ತೆಗೆದು ಈಗಾಗಲೇ ಸಿದ್ಧವಾದ ಸಕ್ಕರೆ ಪಾಕದಲ್ಲಿ ಅದ್ದಿ ತೆಗೆಯಬೇಕು. ಹೀಗೆ ಜಿಲೇಬಿ ತಯಾರಿಸಿ ಸವಿಯಬಹುದು.
ವರದಿ: ಪ್ರಶಾಂತ ಹೂಗಾರ, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ