ವಿಜಯಪುರ: ಕೆಂಪು ಕೆಂಪಾಗಿ ನಳನಳಿಸುತ್ತಿರುವ ಮೆಣಸಿನಕಾಯಿ. ನಡುವೆ ನಿಂತು ಫಸಲು ಗಮನಿಸುತ್ತಿರೋ ಕೃಷಿಕ. ಇದೇನು ಸಾಮಾನ್ಯ ಕೃಷಿ ಪದ್ಧತಿಯ (Agri Model) ಫಸಲಲ್ಲ, ಬದಲಿಗೆ ಬರದನಾಡಿನಲ್ಲಿ ಇಸ್ರೇಲ್ ಮಾದರಿಯಲ್ಲಿ (Israel Model Agriculture) ಕಂಡುಕೊಂಡ್ರು ನೋಡಿ ಉತ್ತಮ ಫಸಲು. ಹಾಗಿದ್ರೆ ಏನಿದರ ಸ್ಪೆಷಲ್? (Chilli Farming) ಇದೆಲ್ಲವೂ ಸಾಧ್ಯವಾಗಿದ್ದು ಹೇಗೆ ಅಂತೀರಾ? ಹೇಳ್ತೀವಿ ನೋಡಿ.
ಇವರು ಐಟಿ ಉದ್ಯೋಗಿ!
ಹೌದು, ಇವರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮದ ಗಿರೀಶ ತೋಟಗಿ. ಐಟಿ ಕಂಪನಿ ಉದ್ಯೋಗಿಯಾಗಿದ್ದ ಇವರು ಆಫ್ರಿಕಾ, ಕೀನ್ಯಾ, ಉಗಾಂಡಾ, ತಾಂಜೇನಿಯಾ, ಇಥಿಯೋಪಿಯಾ ಹೀಗೆ ಹತ್ತು ಹಲವಾರು ದೇಶಗಳಲ್ಲಿ ಕೆಲಸ ಮಾಡಿದವರು.
ಅಣ್ಣನ ಮಾತಿನಿಂದ ಕೃಷಿಗೆ
ನಾಲ್ಕು ವರ್ಷದ ಹಿಂದೆ ಅಣ್ಣನ ಮಾತಿಗೆ ಬೆಲೆ ಕೊಟ್ಟು ಊರಿಗೆ ಬಂದವರೇ ಬ್ಯಾಡಗಿ ಮೆಣಸಿನಕಾಯಿ ಕೃಷಿ ಮಾಡಲು ಮುಂದಾಗಿದ್ದಾರೆ. ಅದಾಗಲೇ ಬಿಸಿಲ ನಗರಿ ವಿಜಯಪುರ ಜಿಲ್ಲೆಯಾದ್ಯಂತ ಲಾಭದ ನಿರೀಕ್ಷೆಯಿಂದ ಹಲವು ರೈತರು ಮೆಣಸು ಕೃಷಿ ಮಾಡಿದ್ದರು. ಹೀಗಾಗಿ ಗಿರೀಶ್ ತೋಟಗಿ ಅವರು ವಿಭಿನ್ನ ಪದ್ಧತಿಯ ಕೃಷಿ ವಿಧಾನಕ್ಕೆ ಕೈ ಹಾಕಿದ್ರು.
ಇಸ್ರೇಲ್ ಮಾದರಿ ಕೃಷಿ
ಗಿರೀಶ್ ತೋಟಗಿ ಅವರು ಕಂಡುಕೊಂಡಿದ್ದು ಇಸ್ರೇಲ್ ತಂತ್ರಜ್ಞಾನದಿಂದ ತುಂಬಿದ ಕೃಷಿ ಪದ್ಧತಿ. ಸಾಮಾನ್ಯವಾಗಿ ನಾವೆಲ್ಲ ಮೆಣಸು ಬಿತ್ತನೆ ಮಾಡುವ ಮೂಲಕ ಮೆಣಸು ಬೆಳೆದರೆ, ಇಸ್ರೇಲ್ ಕೃಷಿ ವಿಧಾನದಲ್ಲಿ ನಾಟಿ ಮಾಡುತ್ತಾರೆ. ಅದಕ್ಕಾಗಿ ಗಿರೀಶ್ ಅವರು ಸರ್ಪನ್ ಕಂಪನಿಯ ಮೆಣಸಿನ ಬೀಜಗಳನ್ನು ತಂದು ಕೃಷಿ ಇಲಾಖೆಯಲ್ಲಿ ಬೀಜೋಪಚಾರ ಮಾಡಿದ್ದರು.
ನಾಲ್ಕೇ ತಿಂಗಳಲ್ಲಿ ಫಸಲು
ಸಸಿಯಾದ ಬಳಿಕ ತಮ್ಮ ಜಮೀನಿಗೆ ತಂದು ಗಿಡಗಳನ್ನು ಗಿರೀಶ್ ಅವರು ಅವುಗಳನ್ನು ನಾಟಿ ಮಾಡಿದ್ದಾರೆ. ಕೇವಲ ನಾಲ್ಕೇ ತಿಂಗಳಲ್ಲಿ ಉತ್ತಮ ಫಸಲು ಪಡೆದಿದ್ದಾರೆ. ಅದ್ಯಾವುದೋ ಬೇರೆ ದೇಶಗಳಲ್ಲಿ ಕೂತು ಲಕ್ಷ ಸಂಪಾದಿಸುತ್ತಿದ್ದ ಗಿರೀಶ್ ಅವ್ರಿಗೆ ತಮ್ಮದೇ ಜಮೀನಿನಲ್ಲಿ ಉತ್ತಮ ಆದಾಯ ಬರುತ್ತಿರುವುದು ಕಂಡು ಖುಷಿಯಾಗಿದೆ.
ಹೈನುಗಾರಿಕೆಯಿಂದ ಲಾಭ
ಇದರ ಜೊತೆಗೆ ಗಿರೀಶ್ ಅವರು, ದೇಶಿ ತಳಿಯ ಐದು ಜವಾರಿ ಆಕಳುಗಳನ್ನ ಸಾಕಿದ್ದಾರೆ. ಅವುಗಳ ಗೋಮೂತ್ರ, ಸಗಣಿಯನ್ನ ಬಳಸಿ ಎಲ್ಲ ಬೆಳೆಗಳಿಗೆ ಸಿಂಪಡಣೆ ಮಾಡುತ್ತಾರೆ. ಅಲ್ಲದೇ, ಸಾವಯವ ಗೊಬ್ಬರದ ಬಳಕೆಯನ್ನೂ ಮಾಡುತ್ತಿದ್ದಾರೆ. ರಾಸಾಯನಿಕ ಗೊಬ್ಬರ ಬಳಕೆ ಮಾಡದೇ ಉತ್ತಮ ಫಸಲು ತೆಗೆಯುತ್ತಿದ್ದಾರೆ.
ಕ್ವಿಂಟಾಲಿಗೆ ₹50 ಸಾವಿರ
ಮೆಣಸು ಬೆಳೆಗೆ ಗೋಮೂತ್ರ, ಸಾವಯವ ಗೊಬ್ಬರವನ್ನೇ ಅವಲಂಬಿಸಿದ್ದಾರೆ. ಹಾಗಾಗಿ ಉತ್ತಮ ಫಸಲಿನ ಜೊತೆಗೆ ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲಿಗೆ 50 ಸಾವಿರದವರೆಗೆ ದರ ಪಡೆಯುತ್ತಿದ್ದಾರೆ.
ಒಟ್ಟಿನಲ್ಲಿ ಆಫ್ರಿಕಾ ದೇಶಗಳಲ್ಲಿ ಐಟಿ ಫೀಲ್ಡ್ ನಲ್ಲಿದ್ದರೂ ತವರಿನ ಬ್ಯಾಡಗಿ ಮೆಣಸು ಅವರನ್ನ ತವರಿನಲ್ಲಿಯೇ ನೆಲೆ ನಿಲ್ಲುವಂತೆ ಮಾಡಿದೆ. ಕಂಪ್ಯೂಟರ್ ಮುಂದೆ ಕೂತು ಜಗತ್ತನ್ನು ಕಾಣುತ್ತಿದ್ದವರಿಗೆ, ಇದೀಗ ತನ್ನ ಜಮೀನೇ ಜಗತ್ತು ಅನ್ನೋ ಖುಷಿ ಕೊಟ್ಟಿದೆ.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ