ವಿಜಯಪುರ: ಇಂಡಿಯಿಂದ ನೆರೆಯ ಮಹಾರಾಷ್ಟ್ರದ ಅಕ್ಕಲಕೋಟೆ ಮಾರ್ಗವಾಗಿ 103 ಕಿ.ಮೀವರೆಗೆ ಸಾಗಲಿರುವ ರಾಷ್ಟ್ರೀಯ ಹೆದ್ದಾರಿ ವಿಜಯಪುರ (Vijayapura News) ತಲುಪಲಿದೆ. ಅಷ್ಟೇ ಅಲ್ಲದೆ, ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಇಂಡಿ ಪಟ್ಟಣ ಸೇರಿದಂತೆ ಅಥರ್ಗಾ, ನಾಗಠಾಣ ಗ್ರಾಮಗಳಿಗೆ ಬೈಪಾಸ್ ರಸ್ತೆ ಭಾಗ್ಯ ದೊರೆತಿದೆ. ಭೀಮಾ ನದಿಯ ಗಡಿಭಾಗದಲ್ಲಿರುವ ತಾಲೂಕು ಕೇಂದ್ರ ಲಿಂಬೆನಾಡು ಇಂಡಿ ಪಟ್ಟಣಕ್ಕೆ ಕೊನೆಗೂ ರಾಷ್ಟ್ರೀಯ ಹೆದ್ದಾರಿ (National Highway) ಭಾಗ್ಯ ದೊರೆತಿರುವುದು ಈ ಭಾಗದ ನಾಗರಿಕರ ಸಂತೋಷಕ್ಕೆ ಕಾರಣವಾಗಿದೆ.
ರಾಷ್ಟ್ರೀಯ ಹೆದ್ದಾರಿಯಿಂದ ಇಂಡಿ ಪಟ್ಟಣದಿಂದ ಇತರ ರಾಜ್ಯಗಳ ನಗರ, ಪಟ್ಟಣಗಳಿಗೆ ಸಂಪರ್ಕ ಕ್ರಾಂತಿಯಾಗಲಿದೆ. ಜೊತೆಗೆ ಹೆದ್ದಾರಿ ರಸ್ತೆಯ ಬದಿಯಲ್ಲಿರುವ ಗ್ರಾಮಗಳಿಗ ಜನರಿಗೆ ತರಕಾರಿ ಸೇರಿದಂತೆ ದ್ರಾಕ್ಷಿ, ಲಿಂಬೆ, ಎಳೆನೀರು ವ್ಯಾಪಾರ, ವಹಿವಾಟಿಗೆ ಅನುಕೂಲವಾಗಲಿದೆ.
ಎಲ್ಲಿಂದ ಎಲ್ಲಿಗೆ ಸಂಪರ್ಕ ಕಲ್ಪಿಸಲಿದೆ ಈ ರಾಷ್ಟ್ರೀಯ ಹೆದ್ದಾರಿ?
ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯ ಮಂಥಾದಿಂದ 548 ಬಿ ಹೊಸ ದ್ವಿಪಥ (ಟು ಲೇನ್ ವಿತ್ ಪೇವ್ಡ್ ಶೌಲ್ಡರ್ ಸ್ಟ್ರಕ್ಚರ್) ರಾಷ್ಟ್ರೀಯ ಹೆದ್ದಾರಿ ಯೋಜನೆ ಶುರುವಾಗಲಿದೆ. ಮಹಾರಾಷ್ಟ್ರದ ಹೆಸರಾಂತ ಜ್ಯೋತಿರ್ಲಿಂಗ ಕ್ಷೇತ್ರ ಪರಳಿ ವೈಜನಾಥ, ಅಂಬಾ ಜೋಗಾಯಿ, ಲಾತೂರ, ಔಸಾ, ಉಮರ್ಗಾ, ಮುರುಮ್, ಆಲೂರ, ಅಕ್ಕಲಕೋಟೆ, ನಾಗಣಸೂರ ಹಾಗೂ ಕರ್ನಾಟಕದ ಗಡಿ ಭಾಗವಾಗಿರುವ ಮಾಶಾಳ, ಕರಜಗಿ, ಮಣ್ಣುರ, ಹಿರೇಬೇವನುರ, ಇಂಡಿ, ಅಥರ್ಗಾ, ನಾಗಠಾಣ, ವಿಜಯಪುರ ನಗರದ ಮೂಲಕ ಸಾಗಿ ಬೆಳಗಾವಿಯ ಸಂಕೇಶ್ವರ ತಲುಪಲಿದೆ.
ಸಂಪರ್ಕ ಕ್ರಾಂತಿಯ ಭರವಸೆ
ಒಟ್ಟು 491 ಕಿ.ಮೀ ಉದ್ದದ ಈ ಹೆದ್ದಾರಿ ಯೋಜನೆಯಲ್ಲಿ 404 ಕಿ.ಮೀ ಮಹಾರಾಷ್ಟ್ರ ರಾಜ್ಯದಲ್ಲಿ ಸಾಗುತ್ತದೆ. 168 ಕಿ.ಮೀ ಹೆದ್ದಾರಿ ಇಂಡಿ ತಾಲೂಕಿನ ಗಡಿ ಗ್ರಾಮಗಳ ಗುಂಟ ಸಾಗಲಿದೆ. ಬರುವ ದಿನಗಳಲ್ಲಿ ಈ ಈ ಹೆದ್ದಾರಿ ಸಂಪರ್ಕ ಕ್ರಾಂತಿಯನ್ನೇ ಉಂಟು ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ.
ಇದನ್ನೂ ಓದಿ: Vijayapura: ಏಳೂರ ಒಡೆಯ ಯಲಗೂರೇಶ್ವರನ ಪ್ರಸಾದಕ್ಕಾಗಿ ಸುಡು ಬಿಸಿಲನ್ನೂ ಲೆಕ್ಕಿಸದ ಭಕ್ತರು!
ಮಹಾರಾಷ್ಟ್ರ ಗಡಿಭಾಗದಲ್ಲಿರುವ ಇಂಡಿ ತಾಲೂಕಿನ ಮಣ್ಣುರ, ಅಗರಖೇಡ ಸೇರಿದಂತೆ ನೂರಾರು ಹಳ್ಳಿಗಳಿಗೆ ಇಂದಿಗೂ ಸುರಕ್ಷಿತ, ಸುಗಮ ಸಂಚಾರದ ರಸ್ತೆಗಳಿರಲಿಲ್ಲ.
ಆದರೆ ಈ ರಾಷ್ಟ್ರೀಯ ಹೆದ್ದಾರಿ ಯೋಜನೆಯಿಂದಾಗಿ ಕಿರಿದಾದ ಗುಂಡಿ ಬಿದ್ದಿರುವ ರಸ್ತೆಯಲ್ಲಿಯೇ ಪ್ರಯಾಣ ಮಾಡುವ ಜನರ ಸಂಕಷ್ಟಗಳಿಗೆ ಪರಿಹಾರ ದೊರಕುವ ಆಶಾಭಾವನೆ ಮೂಡಿದೆ.
ಇದನ್ನೂ ಓದಿ: Babaladi Sadashiv Mutya: ದೇವರಿಗೆ ಹೂ, ಹಣ್ಣಿನ ಬದಲು ಎಣ್ಣೆ ನೈವೇದ್ಯ! ಇಲ್ಲಿ ಮದ್ಯವೇ ತೀರ್ಥ!
ಭೀಮಾತೀರದಲ್ಲಿ ಯಲ್ಲಮ್ಮ ದೇವಿ, ಚೆನ್ನಕೇಶವ, ಗಡ್ಡಿಲಿಂಗ ಹಾಗೂ ಭೀಮಾನದಿಯ ಪುಣ್ಯಸ್ಥಾನ ಮಾಡುವ ಪುಣ್ಯಕ್ಷೇತ್ರ ಸೇರಿದಂತೆ ಇಲ್ಲಿನ ಧಾರ್ಮಿಕ ತಾಣಗಳಿಗೆ ನಿತ್ಯ ಸಾವಿರಾರು ಜನರು ಆಗಮಿಸಲು ಈ ರಾಷ್ಟ್ರೀಯ ಹೆದ್ದಾರಿ ಅನುಕೂಲ ಕಲ್ಪಿಸಲಿದೆ. ಅಂತರಾಜ್ಯ ನಗರ, ಪಟ್ಟಣಗಳಿಗೆ ಸರಕು ಸಾಗಾಟ, ವ್ಯಾಪಾರ ವಹಿವಾಟು ಮಾಡಲು ಈ ರಾಷ್ಟ್ರೀಯ ಹೆದ್ದಾರಿಯಿಂದ ಅನುಕೂಲವಾಗಲಿದೆ.
ವರದಿ: ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ