Vijayapura: ಬೆಂಕಿ ಹಚ್ಚಿ ಕಾಮದಹನ, ಗುಮ್ಮಟ ನಗರಿಯಲ್ಲಿ ಬಣ್ಣಗಳ ರಂಗು!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

Holi 2023: ಹೋಳಿ ಹಬ್ಬದ ಸಂಕೇತವಾದ ಹಲಗೆ ಬಾರಿಸುತ್ತ, ಸಂತೋಷದ ದ್ಯೋತಕವಾಗಿ ಕೇಕೆ ಹಾಕುತ್ತ ಯುವಕರು ಗುಂಪುಗುಂಪಾಗಿ ಬಣ್ಣ ಎರಚಾಡಿ, ಡಿಜೆ ಸದ್ದಿಗೆ ಕುಣಿದಾಡಿದರು.

  • Share this:

    ವಿಜಯಪುರ: ಸುತ್ತಲೂ ಕಗ್ಗತ್ತಲು ಆವರಿಸಿದ್ರೂ ಗ್ರಾಮದ ನಡು ಬೀದಿಯಲ್ಲಿ ಅದೇನೋ ಸಂಭ್ರಮ, ಹಿರಿಯರಿಂದ ಜಾನಪದ ಹಾಡು, ಮಹಿಳೆಯರಿಂದ ಪೂಜೆ ಪುನಸ್ಕಾರ. ಕೊನೆಗೂ ಬೆಂಕಿ ಹಚ್ಚಿ ದಹಿಸೋ (Holi 2023) ಮೂಲಕ ಎಲ್ಲವೂ ಸಮಾಪ್ತಿ. ಯೆಸ್, ಇದು ವಿಜಯಪುರದ (VIjayapura News) ಹಲವೆಡೆ ಕಂಡು ಬರೋ ಪಾರಂಪರಿಕ ಹೋಳಿ ಹಬ್ಬದ ಸಂಭ್ರಮ.


    ಕಾಮದಹನ ಸಂಪ್ರದಾಯ
    ಹೋಳಿ ಹಬ್ಬವನ್ನ ಒಂದೊಂದು ಭಾಗಗಳಲ್ಲಿ ಆಯಾಯ ಸಂಪ್ರದಾಯದಂತೆ ಆಚರಿಸುತ್ತಾರೆ. ಅಂತೆಯೇ ವಿಜಯಪುರ ಜಿಲ್ಲೆಯ ಹಲವೆಡೆ ಇಂತಹ ಸಾಂಪ್ರದಾಯಿಕ ಹೋಳಿ ಆಚರಣೆ ಕಂಡುಬರುತ್ತೆ. ಇವರ ಹೋಳಿ ಸಂಭ್ರಮದಲ್ಲಿ ಕಾಮಣ್ಣ ದಹನವೇ ಮುಖ್ಯವಾದುದು.


    ಜಾನಪದ ಹಾಡುಗಳ ಸಂಭ್ರಮ
    ಹೋಳಿ ಹಿನ್ನೆಲೆಯಲ್ಲಿ ವಿಜಯಪುರದ ಆರೇಶಂಕರ ಗ್ರಾಮದಲ್ಲಿ ಈ ಕಾಮಣ್ಣ ದಹನ ಸಾಂಪ್ರದಾಯಿಕ ಸಂಭ್ರಮ ಕಂಡುಬಂತು. ಈ ದೃಶ್ಯವನ್ನ ಕಣ್ತುಂಬಿಕೊಳ್ಳಲು ಇಡೀ ಗ್ರಾಮಕ್ಕೆ ಗ್ರಾಮವೇ ಸೇರಿತ್ತು. ಮಹಿಳೆಯರು ನೈವೇದ್ಯ ಸಮರ್ಪಿಸುತ್ತಿದ್ದರೆ, ಪುರುಷರು ಮಂತ್ರ ಪಠಿಸಿದರು. ಇನ್ನು ಗ್ರಾಮದ ಹಿರಿಯರು ರಾತ್ರಿಯಿಡೀ ಜಾನಪದ ಹಾಡುಗಳ ಮೂಲಕ ನೆರೆದವರ ಗಮನ ಸೆಳೆದರು.


    ನಿರುಪಯುಕ್ತ ವಸ್ತುಗಳಿಂದ ಪ್ರತಿಕೃತಿ
    ಸಾಯಂಕಾಲ ಹಲಗೆ ಮೆರವಣಿಗೆ ಮೂಲಕ ಹೋಳಿ ಸಂಭ್ರಮ ಆರಂಭವಾಗುತ್ತೆ. ಈ ಮೆರವಣಿಗೆ ಮೂಲಕ ಕಾಮಣ್ಣನನ್ನ ಕರೆತರಲಾಗುತ್ತೆ. ಈ ಕಾಮಣ್ಣನ ಪ್ರತಿಕೃತಿಯನ್ನ ಮೂರ್ನಾಲ್ಕು ದಿನ ಮುಂಚಿತವಾಗಿ ಮಹಿಳೆಯರು, ಮಕ್ಕಳು, ಯುವಕರು ಸೇರಿಕೊಂಡು ಮಾಡಿರುತ್ತಾರೆ. ನಿರುಪಯುಕ್ತ ವಸ್ತುಗಳನ್ನ ಮತ್ತು ಕಟ್ಟಿಗೆ, ಕುಳ್ಳು ಸೇರಿದಂತೆ ತೆಂಗಿನ ಗರಿಕೆಗಳನ್ನ ಹಾಕಿ ಎತ್ತರದಲ್ಲಿ ನಿಲ್ಲಿಸುತ್ತಾರೆ.


    ಕಾಮಣ್ಣನಿಗೆ ಅಗ್ನಿಸ್ಪರ್ಶ
    ಹಲಗೆ ಮೆರವಣಿಗೆ ಮೂಲಕ ಸಾಗಿ ಬರುವ ಕಾಮಣ್ಣನ ಪ್ರತಿಮೆಗೆ ಬಳಿಕ ಪೂಜಾರಿಯಿಂದ ವಿಶೇಷ ಪೂಜೆ ಜರುಗುತ್ತದೆ. ಮಹಿಳೆಯರು ಕಾಮಣ್ಣನಿಗೆ ಮನೆಯಲ್ಲಿ ಭಕ್ಷ ಭೋಜನವನ್ನ ತಯಾರಿಸಿ ತಂದಿರುತ್ತಾರೆ. ಹೋಳಿಗೆ, ಕಡಬು ಸೇರಿದಂತೆ ನಾನಾ ಖಾದ್ಯಗಳನ್ನ ನೈವೇದ್ಯ ರೂಪದಲ್ಲಿ ಸಮರ್ಪಿಸುತ್ತಾರೆ. ಇದಾದ ಬಳಿಕ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಗುರುಗಳು ಕಾಮಣ್ಣನಿಗೆ ಅಗ್ನಿ ಸ್ಪರ್ಶ ಮಾಡುತ್ತಾರೆ.


    ಬೆಂಕಿ ಕೆಂಡ ಕೊಂಡೊಯ್ಯವರು
    ಅಗ್ನಿ ಸ್ಪರ್ಶವಾದ ಬಳಿಕ ರೈತಾಪಿ ಜನರು ಸೇರಿದಂತೆ ಎಲ್ಲರು ಮನೆ ಮನೆಗೆ ಬೆಂಕಿಯ ಕೆಂಡ ತೆಗೆದುಕೊಂಡು ಹೋಗಿ ಕಡಲೆಕಾಳುಗಳನ್ನ ಸುಟ್ಟು ತಿನ್ನುವುದು ಸಂಪ್ರದಾಯ. ಇದೇ ಬೆಂಕಿಯಿಂದ ಮರುದಿನ ಒಲೆ ಹೊತ್ತಿಸಿ ಅಡುಗೆ ಮಾಡಲಾಗುತ್ತೆ. ಎಲ್ಲ ಕಾರ್ಯಗಳು ನೆರವೇರಿದ ಬಳಿಕ ಗ್ರಾಮದ ಹಿರಿಯರು ಕಟ್ಟೆಗಳ ಮೇಲೆ ಕುಳಿತುಕೊಂಡು ಸಾಂಪ್ರದಾಯಿಕ ಹಾಡುಗಳನ್ನ ಬೆಳಗಿನ ಜಾವದವರೆಗೆ ಹಾಡು ಹಾಡುತ್ತ ಸಂಭ್ರಮಿಸುತ್ತಾರೆ.


    ಇದನ್ನೂ ಓದಿ: Sainik School: ಸೈನಿಕ ಶಾಲೆಗೆ ಪ್ರವೇಶ ಪಡೆದ 25 ಹೆಣ್ಮಕ್ಕಳು, ಕಡು ಕಷ್ಟದ ತರಬೇತಿ ಇವರಿಗೆ ನೀರು ಕುಡಿದಷ್ಟೇ ಸಲೀಸು!

    ನಗರದಲ್ಲಿ ಸಂಭ್ರಮವೋ ಸಂಭ್ರಮ!
    ಇನ್ನು ವಿಜಯಪುರ ನಗರದ ಓಣಿಗಳಲ್ಲಿ ಮತ್ತು ಪ್ರಮುಖ ವೃತ್ತದಲ್ಲಿ ತಡರಾತ್ರಿ ಕಾಮದಹನ ಮಾಡಿದ ನಂತರ ಮರುದಿನ ಬೆಳಗ್ಗೆಯಿಂದಲೇ ಬಣ್ಣ ಎರಚಾಡುವ ರಂಗಿನಾಟಕ್ಕೆ ಚಾಲನೆ ನೀಡಿದರು. ಯುವಕರು, ಯುವತಿಯರು ಗುಂಪುಗುಂಪಾಗಿ ಬೈಕ್‌ ಓಡಿಸಿ ಕೇಕೆ ಹಾಕುತ್ತ ತಮ್ಮ ಬಂಧುಗಳು, ಸ್ನೇಹಿತರ ಮನೆಗೆ ಹೋಗಿ ಬಣ್ಣ ಹಚ್ಚುವ ಮೂಲಕ ರಂಗಪಂಚಮಿಗೆ ರಂಗು ತುಂಬಿದರು.




    ಇದನ್ನೂ ಓದಿ: Vijayapura: ಚಂದ್ರಮ್ಮ ದೇವಿ ಭಕ್ತರಿಗೆ ಜೋಳದ ಅಂಬಲಿಯೇ ಮಹಾ ಪ್ರಸಾದ!

    ಹೋಳಿ ಹಬ್ಬದ ಸಂಕೇತವಾದ ಹಲಗೆ ಬಾರಿಸುತ್ತ, ಸಂತೋಷದ ದ್ಯೋತಕವಾಗಿ ಕೇಕೆ ಹಾಕುತ್ತ ಯುವಕರು ಗುಂಪುಗುಂಪಾಗಿ ಬಣ್ಣ ಎರಚಾಡಿ, ಡಿಜೆ ಸದ್ದಿಗೆ ಕುಣಿದಾಡಿದರು. ಜಿಲ್ಲೆಯ ಮುದ್ದೇಬಿಹಾಳ, ಇಂಡಿ, ಕೊಲ್ಹಾರ, ಬಬಲೇಶರ, ತಿಕೋಟಾ ಹೀಗೆ ಹಲವಾರು ಕಡೆಗಳಲ್ಲಿ ಬಣ್ಣದ ಆಟವಾಡಿ ಸಂಭ್ರಮಿಸಿದರು.


    ವರದಿ: ಪ್ರಶಾಂತ್ ಹೂಗಾರ್, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: