Hindu Gods Worship in Dargah: ದರ್ಗಾದಲ್ಲಿ ಶ್ರೀಕೃಷ್ಣ-ಸಾಯಿಬಾಬಾ ವಿಗ್ರಹ ಸ್ಥಾಪಿಸಿ ಮುಸ್ಲಿಂ ಸಮುದಾಯದಿಂದಲೇ ಪೂಜೆ, ಪುನಸ್ಕಾರ!

ಧರ್ಮ ಧರ್ಮಗಳ ನಡುವೆ ಸಂಘರ್ಷ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗೋದಿಲ್ಲ. ಇಂತಹ ಸುದ್ದಿಗಳೇ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ನಮ್ಮ ಕರ್ನಾಟಕದ ಬಾಗಲಕೋಟೆಯ ದರ್ಗಾ ಒಂದರಲ್ಲಿ ಶ್ರೀ ಕೃಷ್ಣ ಮತ್ತು ಸಾಯಿಬಾಬಾರ ವಿಗ್ರಹಗಳಿಗೆ ಪೂಜೆ ಸಲ್ಲಿಸುವ ಸುದ್ದಿಯೊಂದು ವರದಿಯಾಗಿದೆ.

ದರ್ಗಾದಲ್ಲಿ ದೇವರ ಮೂರ್ತಿಗಳು

ದರ್ಗಾದಲ್ಲಿ ದೇವರ ಮೂರ್ತಿಗಳು

 • Share this:
  ಬಾಗಲಕೋಟೆ: ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ  (Temple)  ಹಿಂದೂ ದೇವರ ವಿಗ್ರಹಗಳಿರುವುದನ್ನು  (Idol) ಕಾಣುತ್ತೇವೆ. ಆದರೆ ಇಲ್ಲೊಂದು ದರ್ಗಾ  Dargah) ಇದೆ. ಈ ದರ್ಗಾದಲ್ಲಿಯೇ ಶ್ರೀ ಕೃಷ್ಣ ಮತ್ತು ಸಾಯಿಬಾಬಾರ ವಿಗ್ರಹಗಳು ಒಟ್ಟಿಗೆ ಇದ್ದು, ಇಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಜನರು ಒಟ್ಟಿಗೆ ಪೂಜೆ ಪುನಸ್ಕಾರ ನೆರವೇರಿಸುವ ಮೂಲಕ ಭಾವೈಕ್ಯತೆಯನ್ನು (Communal Harmony) ಮೆರೆದಿದ್ದಾರೆ. ಮೊಹರಂ (Muharram) ಬಂದರೆ ಎರಡು ಸಮುದಾಯದ ಜನರು ಸೇರಿ ಈ ಹಬ್ಬವನ್ನು ಆಚರಿಸುತ್ತಾರೆ. ಹೀಗೆ ಆಯಾ ಸಮುದಾಯದ ಹಬ್ಬಗಳು ಬಂದರೆ ಎಲ್ಲರೂ ಒಟ್ಟಿಗೆ ಸೇರಿ ಹಬ್ಬಗಳನ್ನು ಆಚರಿಸುವ ಪರಂಪರೆ (Heritage) ಮುಂದುವರೆಯುತ್ತಾ ಬಂದಿದೆ. ಬನ್ನಿ, ನೀವೂ ಈ ಭಾವೈಕ್ಯತೆಯ ತಾಣ ದರ್ಗಾಕ್ಕೆ ಭೇಟಿ ನೀಡಿ!

  ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಬುದ್ನಿಪಿಡಿ ಗ್ರಾಮದಲ್ಲಿ ಸುಮಾರು 14 ವರ್ಷಗಳ ಹಿಂದೆ ಮುಸ್ಲಿಂ ಬಾಂಧವರು ಸೇರಿ ಇಲ್ಲಿನ ಲಾಲಸಾಬಲಿ ದರ್ಗಾದಲ್ಲಿ ಶ್ರೀಕೃಷ್ಣ ಮತ್ತು ಸಾಯಿಬಾಬಾರ ವಿಗ್ರಹಗಳನ್ನು ಪ್ರತಿಷ್ಠಾಪಿಸಿದರು. ಪ್ರತಿ ನಿತ್ಯ ನಿರಂತರವಾಗಿ ಬೆಳಿಗ್ಗೆ ಮತ್ತು ಸಾಯಂಕಾಲ ಮುಸ್ಲಿಂ ಬಾಂಧವರೇ ಈ ವಿಗ್ರಹಗಳಿಗೆ ಪೂಜೆ ಸಲ್ಲಿಸುತ್ತಾರೆ.

  ಸಾಮರಸ್ಯ ಸಾರಿದ ಕೇಸರಿ, ಹಸಿರು ಬಣ್ಣದ ಧ್ವಜಗಳು
  ವಿಶೇಷವೆಂದರೆ ಈ ದರ್ಗಾದ ಮೇಲೆ ಕೇಸರಿ ಮತ್ತು ಹಸಿರು ಬಣ್ಣದ ಧ್ವಜಗಳನ್ನು ಕಟ್ಟಿ ಸಾಮರಸ್ಯ ಸಾರಿದ್ದಾರೆ. ಅಷ್ಟೇ ಅಲ್ಲದೇ, ಈ ಗ್ರಾಮದಲ್ಲಿ ಜರುಗುವ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮವನ್ನು ಹಿಂದೂ, ಮುಸ್ಲಿಂ ಬಾಂಧವರು ಒಟ್ಟಾಗಿ ಸೇರಿ ಆಚರಿಸುತ್ತಾರೆ.

  ಒಂದೇ ವೇದಿಕೆಯ ಮೇಲೆ ಗಣೇಶನ ಪ್ರತಿಮೆ, ಲಾಲಸಾಬನ ಪಂಜೆ
  ಕಳೆದ ಮೂರು ವರ್ಷಗಳಿಂದ ಗಣೇಶೋತ್ಸವ ಮತ್ತು ಮೊಹರಂ ಹಬ್ಬದಂದು ಒಂದೇ ವೇದಿಕೆಯ ಮೇಲೆ ಗಣೇಶನ ಪ್ರತಿಮೆ ಮತ್ತು ಲಾಲಸಾಬನ ಪಂಜೆಗಳನ್ನು ಇಟ್ಟು ಹಬ್ಬ ಆಚರಿಸಲಾಗುತ್ತಿದೆ. ಹೀಗೆ ಒಟ್ಟಿಗೆ ಆಚರಣೆ ಮಾಡಲಾಗುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ. ಇತ್ತೀಚಿಗೆ ನಡೆದ ಸ್ಥಳೀಯ ಆರಾಧ್ಯ ದೈವ ಮಾರುತೇಶ್ವರ ಓಕುಳಿಯಲ್ಲಿ ಎಲ್ಲಾ ಮುಸ್ಲಿಂ ಬಾಂಧವರು ಭಾಗವಹಿಸಿ ತನು-ಮನ-ಧನ ಸಹಾಯವನ್ನು ಮಾಡಿ ಜಾತ್ರೆ ಯಶ ಗಳಿಸಲು ಸಹಕರಿಸಿದ್ದಾರೆ.

  ದೇವಸ್ಥಾನಕ್ಕೆ ಬಣ್ಣ ಹಚ್ಚಿ ಸಾಮರಸ್ಯ ಮೆರೆದ ಮುಸ್ಲಿಂ ಯುವಕ
  ಇಲ್ಲಿನ ಮಾರುತೇಶ್ವರ ದೇವಸ್ಥಾನಕ್ಕೆ ಶಾನೂರ ತೇರದಾಳ ಎಂಬ ಮುಸ್ಲಿಂ ಧರ್ಮದ ಯುವಕ ಬಣ್ಣ ಹಚ್ಚುವ ಕಾರ್ಯಕ್ಕೆ ಸ್ವತಃ ತಾವೇ ಹಣವನ್ನು ನೀಡಿ ಸಾಮರಸ್ಯದ ಬಣ್ಣ ಹಚ್ಚಿ ಚಂದಗಾಣಿಸಿದ್ದಾರೆ. ಗ್ರಾಮದಲ್ಲಿ ಎಲ್ಲಾ ಸಮುದಾಯದ ಜನರು ಎಲ್ಲರ ಸುಖ ಶಾಂತಿಯಲ್ಲಿ ಪಾಲ್ಗೊಂಡು ಎಲ್ಲರೂ ಸಹಬಾಳ್ವೆ ನಡೆಸುವುದೇ ಅಧ್ಯಾತ್ಮದ ಒಂದು ಹಂತ ಎಂದು ನಂಬಿದ ಈ ಮಹಾಲಿಂಗಪುರ ಜನರು ಇಂದು ಜಾತ್ಯಾತೀತ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಿದಂತಿದೆ.

  ಇದನ್ನೂ ಓದಿ:  Karnataka Police: ಪೊಲೀಸರು ಹೀಗೂ ಇರ್ತಾರಾ!? ವಿದ್ಯಾರ್ಥಿಗಳಿಗಾಗಿ 24x7 ಉಚಿತ ಲೈಬ್ರರಿ ತೆರೆದ ಪೊಲೀಸ್ ಸಿಬ್ಬಂದಿ!

  ಭಾವೈಕ್ಯತೆಯ ಸಂಗಮವಾಗಿದೆ ಈ ಗ್ರಾಮ
  ಒಟ್ಟಾರೆಯಾಗಿ ಇತ್ತೀಚಿಗೆ ದಿನಕ್ಕೊಂದು ಧರ್ಮದ ಸಂಘರ್ಷಗಳು ಕೇಳಿ ಬರುತ್ತಿರುವ ಇಂದಿನ ಸಮಾಜದಲ್ಲಿ ಈ ಗ್ರಾಮವು ಅವುಗಳಿಗೆ ವಿರುದ್ಧವಾಗಿ, ಭಾವೈಕ್ಯತೆಯ ಸಂಗಮವಾಗಿದೆ. ಇಲ್ಲಿ ಯಾವುದೇ ಭೇದ, ಭಾವ ತಾರತಮ್ಯ ಇಲ್ಲದೆ ಎಲ್ಲರೂ ಒಂದಾಗಿ ಬೆರೆತು ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ.

  ಇದನ್ನೂ ಓದಿ: Organic Jaggery: ಬರದ ನಾಡಿನಲ್ಲಿ 18 ಬಗೆಯ ಬೆಲ್ಲ, ಇಂಥಾ ವೆರೈಟಿ ನೀವೆಲ್ಲೂ ನೋಡಿರಲ್ಲ ಬಿಡಿ!

  ಹೀಗೆ ಪ್ರೀತಿ, ಪ್ರೇಮ ವಾತ್ಸಲ್ಯ ಉದಾರತೆ, ಅನುಕಂಪ ಆತ್ಮೀಯತೆಯ ಸಹಬಾಳ್ವೆ ಇವೆಲ್ಲವೂ ಈ ಗ್ರಾಮದ ಜನರಲ್ಲಿ ಕಂಡು ಬರುತ್ತಿದ್ದು, ಕೋಮು ಸೌಹಾರ್ದತೆ ಕದಡಿಸುವ ಜನರು ಈ ಊರನ್ನು ನೋಡಿಯಾದರೂ ಪಾಠ ಕಲಿಯಲು ಎಂಬ ಆಶಯ ವ್ಯಕ್ತವಾಗಿದೆ.

  ವರದಿ: ಶಿವಾನಂದ ವಿಜಯಪುರ
  Published by:Suraj Risaldar
  First published: