ವಿಜಯಪುರ: ಬಾನಂಗಳದಲ್ಲಿ ಈಗ ಲೋಹದ ಹಕ್ಕಿಯದ್ದೇ ಸದ್ದು. ಆಗಸದಲ್ಲಿ ಸಪ್ತ ಶಬ್ದಗಳಾಗಿ ಪ್ರತಿಧ್ವನಿಸುವ ಗೋಲ್ ಗುಂಬಜ್ (Gol Gumbaz) ಕಣ್ತುಂಬಿಕೊಳ್ಳೋದೆ ವಿಶೇಷ. ಕೈಗೆಟುಕದ ಗಗನ ಕುಸುಮದಂತಿದ್ದ ಹೆಲಿಕಾಪ್ಟರ್ನಲ್ಲಿ (Helicopter Ride In Vijayapura) ಈಗ ಗಗನದಲ್ಲಿ ಹಾರಾಡೋ ಸಂಭ್ರಮ. ಹಾಗಿದ್ರೆ ಹೇಗಿರುತ್ತೆ ಹೆಲಿ ರೈಡ್ ಅನ್ನೋದಕ್ಕೆ ಈ ಸ್ಟೋರಿ ನೋಡಿ.
ವಿಜಯಪುರದ ನಗರದಲ್ಲಿ ಕಳೆದೆರಡು ದಿನಗಳಿಂದ ಬೆಳಗ್ಗೆಯಿಂದ ಸಂಜೆವರೆಗೆ ಆಕಾಶದಲ್ಲಿ ಹೆಲಿಕಾಪ್ಟರ್ನದ್ದೇ ಸದ್ದು. ಒಮ್ಮೆ ಅತ್ತ, ಒಮ್ಮೆ ಇತ್ತ ಆಕಾಶದಲ್ಲಿ ಹಾರಾಡುತ್ತಿರುವ ಲೋಹದ ಹಕ್ಕಿ ಈಗ ವಿಜಯಪುರ ಜನರ ಆಕಾಶದಲ್ಲಿ ಹಾರಡೋ ಕನಸನ್ನ ನನಸು ಮಾಡಿದೆ. ಸಾಮಾನ್ಯವಾಗಿ ಹೆಲಿಕಾಪ್ಟರ್ ಪ್ರಯಾಣ ದುಬಾರಿ ಆಗಿದ್ರೂ, ಅಮೃತ ಕನ್ ಸ್ಟ್ರಕ್ಷನ್ ಸಂಸ್ಥೆ ರಿಯಾಯಿತಿ ದರದಲ್ಲಿ ಸಿಗುವಂತೆ ಯೋಜನೆ ಹಾಕಿಕೊಂಡಿದೆ. ಹೀಗಾಗಿ ಸ್ಥಳೀಯರಿಗೂ, ಪ್ರವಾಸಿಗರಿಗೂ ಹೆಲಿಕಾಪ್ಟರ್ ಸುತ್ತಾಟ ಮಜಾ ಕೊಟ್ಟಿದೆ.
ಈ ಎಲ್ಲಾ ಪ್ರವಾಸಿ ಸ್ಥಳಗಳನ್ನೂ ಆಕಾಶದಿಂದ ನೋಡಬಹುದು!
ವಿಜಯಪುರದ ಮುಕುಟದಂತಿರುವ ಗೋಲ್ ಗುಂಬಜ್, ಆನಂದ ಮಹಲ್, ಶಿವಗಿರಿ, ಬಾರಾ ಕಮಾನ್, ಇಬ್ರಾಹಿಂ ರೋಜಾ, ಭೂತನಾಳ ಕೆರೆ ಸೇರಿದಂತೆ ವಿಜಯಪುರ ನಗರವನ್ನೇ ಹೆಲಿಕಾಪ್ಟರ್ನಲ್ಲಿ ಕುಳಿತು ಕೆಲವೇ ನಿಮಿಷಗಳ ಅಂತರದಲ್ಲಿ ವೀಕ್ಷಿಸಬಹುದಾಗಿದೆ. ಪ್ರವಾಸಿಗರಿಗಂತೂ ಹೆಲಿಕಾಪ್ಟರ್ ಇನ್ನಷ್ಟು ಖುಷಿ ಕೊಟ್ಟಿದೆ.
ಕೆಲವರು ಹಾರಿ ಖುಷಿಪಟ್ರೆ, ಇನ್ನು ಕೆಲವರು ನೋಡಿ ಖುಷಿಪಟ್ರು!
ಸೊಲ್ಲಾಪುರ ರಸ್ತೆಯ ಬಿಎಲ್ಡಿ ಹೊಸ ಕ್ಯಾಂಪಸ್ ಆವರಣದಲ್ಲಿ ಹೆಲಿಕಾಪ್ಟರ್ ಹಾರಾಟದ ಹೆಲಿಪ್ಯಾಡ್ ಇದ್ದು ಕೆಲವರು ಹೆಲಿಕಾಪ್ಟರ್ ಹಾರಾಟ ನೋಡಿ ಖುಷಿಪಟ್ಟರೆ, ಇನ್ನು ಕೆಲವರು ಹೆಲಿಕಾಪ್ಟರ್ನಲ್ಲಿ ತೆರಳಿ ಖುಷಿಪಟ್ಟರು.
ಇದನ್ನೂ ಓದಿ: Krishna River: ಕೃಷ್ಣಾ ನದಿಯಲ್ಲಿ ಮಿಂದೆದ್ದ ಸಾವಿರಾರು ಜನರು! ಕಾರಣ ಹೀಗಿದೆ ನೋಡಿ
ಮೊದಲ ಬಾರಿಗೆ ಪ್ರವಾಸಿಗರಿಗೆ, ಸ್ಥಳೀಯರಿಗೆ ಇಂತಹ ಅವಕಾಶವೊಂದನ್ನು ಖಾಸಗಿ ಸಂಸ್ಥೆಯೊಂದು ಒದಗಿಸಿದೆ. ಬಹುತೇಕ ಮಂದಿ ಹೇಗಾದರೂ ಮಾಡಿ ಹಣ ಹೊಂದಿಸಿ ತಮ್ಮ ಗಗನ ಪಯಣದ ಕನಸನ್ನ ನನಸಾಗಿಸುತ್ತಿದ್ದಾರೆ. ಆಕಾಶದಲ್ಲಿ ಹಾರಾಡುತ್ತಲೇ ತಮ್ಮ ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಪುಟ್ಟ ಪುಟ್ಟದಾಗಿ ಕಾಣುವ ಮನೆ, ಮಠಗಳ ನಡುವೆ ಕಂಗೊಳಿಸೋ ಐತಿಹಾಸಿಕ ಸ್ಥಳಗಳನ್ನ ಸೆರೆ ಹಿಡಿದು ಎಂಜಾಯ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Vijayapura: ನಾಯಿಗಳಿಗೂ ಬೇಕು ಆಸರೆ, ಚಳಿಯಿಂದ ರಕ್ಷಿಸೋಕೆ ಬೆಡ್ಶೀಟ್ ರಕ್ಷಣೆ
ಒಟ್ಟಿನಲ್ಲಿ ಆಗಸದಂಚಿನಲ್ಲಿನ ಹಾರಾಟ ಶ್ರೀಮಂತರಿಗಷ್ಟೇ ಸೀಮಿತ ಅನ್ನೋ ಅಂತಿದ್ದ ಹೆಲಿಕಾಪ್ಟರ್ ಪಯಣವನ್ನ ಇದೀಗ ವಿಜಯಪುರದ ಮಂದಿಯೂ ಅನುಭವಿಸುವಂತಾಗಿದೆ. ಇದರಿಂದ ಸ್ಥಳೀಯರು ಖುಷಿಪಟ್ಟಿದ್ದಾರೆ.
ವರದಿ: ಪ್ರಶಾಂತ ಹೂಗಾರ, ವಿಜಯಪುರ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ